ಹಾವೇರಿ

ಲೂಟಿಕೋರರ ಕಿತ್ತೆಸೆದು ಕಾಂಗ್ರೆಸ್ ಗೆಲ್ಲಿಸಿ: ಸಿದ್ದು

Published On :

ಹಾನಗಲ್ಲ: ರಾಜ್ಯದ ಸಂಪತ್ತು ಲೂಟಿ ಹೊಡೆದ ಪಕ್ಷಗಳನ್ನು ಕಿತ್ತೊಗೆದು ತಮ್ಮನ್ನು ಮುಖ್ಯಮಂತ್ರಿಯನ್ನಾಗಿಸಲು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ಸಿದ್ಧರಾಮಯ್ಯ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಹಾನಗಲ್ಲಿನಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿದರು.
ಸ್ವಜನ ಪಕ್ಷಪಾತ: ರಾಜ್ಯದ ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ಸುಭದ್ರ ಸರ್ಕಾರದ ಆಯ್ಕೆಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷ ಬೆಂಬಲಿಸುವಂತೆ ಕರೆ ನೀಡಿದ ಸಿದ್ದರಾಮಯ್ಯ, ಬೇರೆ ಪಕ್ಷದವರು ರಾಜ್ಯದಲ್ಲಿ ಆಡಳಿತ ನಡೆಸಿದ ಪರಿ ನೋಡಿದ್ದೀರಿ. ಅಧಿಕಾರಕ್ಕಾಗಿ ಸತತ ಕಚ್ಚಾಟ, ಭ್ರಷ್ಟಾಚಾರ, ಲೈಂಗಿಕ ಆರೋಪ ಎದುರಿಸುತ್ತಿರುವ ಜೆಡಿಎಸ್-ಬಿಜೆಪಿ-ಕೆಜೆಪಿ ಪಕ್ಷಗಳ ಅಭ್ಯರ್ಥಿಗಳನ್ನು ಹತ್ತಿರಕ್ಕೂ ಸೇರಿಸಬೇಡಿ ಎಂದು ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು 15ಕ್ಕೂ ಹೆಚ್ಚು ಶಾಸಕರು ಜೈಲು ಕಂಡಿದ್ದಾರೆ. ತನಿಖೆಯೂ ನಡೆದಿದೆ ಎಂದು ತಿಳಿಸಿದರು.
ಅಕ್ರಮ ಗಣಿಗಾರಿಕೆ, ಹಣದ ವ್ಯವಹಾರ, ಲಂಚ ಪ್ರಕರಣ ಇವು ಬಿಜೆಪಿ ಸರ್ಕಾರದ ಸಾಧನೆಗಳು. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ನಂತರ ಈ ಪ್ರಕರಣಗಳ ತನಿಖೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಿ ಎಲ್ಲ ಪ್ರಕರಣಗಳ ಹೂರಣ ಬಯಲಿಗೆಳೆಯಲಾಗುವುದು ಎಂದರು.
  ಶಿಗ್ಗಾಂವಿ ಕ್ಷೇತ್ರ ಅಭ್ಯರ್ಥಿ ಅಜ್ಜಂಪೀರ ಖಾದ್ರಿ, ಮುಖಂಡರಾದ ಸೊಲಭೇಶ್ವರಪ್ಪ, ಬಿ. ಶಿವಪ್ಪ, ಜಿ.ಟಿ. ಚಂದ್ರಶೇಖರಪ್ಪ, ಯಾಸೀರಖಾನ್ ಪಠಾಣ, ವೀರಪ್ಪ ಮಡ್ಲೂರು, ಕೆಪಿಸಿಸಿ ಸದಸ್ಯರಾದ ಸತೀಶ ದೇಶಪಾಂಡೆ, ವನಜಾಕ್ಷಿ ಪಾಟೀಲ, ರಾಜಶೇಖರ ಸಾಲಿಮಠ, ಡಾ೤ ಸಿದ್ಧಾರ್ಥ, ಎಂ.ಎಸ್. ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲನಗೌಡ ಪಾಟೀಲ, ಸಿ.ಎಸ್. ಬಡಿಗೇರ, ಎ.ಎಂ. ಪಠಾಣ, ವಡ್ನಿಕೊಪ್ಪ, ಎನ್.ಎಸ್. ಪಡೆಪ್ಪನವರ ಇದ್ದರು.

ಗೋಹತ್ಯೆ ನಿಷೇಧ ಕಾಯ್ದೆ ರದ್ದು

ಹಿರೇಕೆರೂರು: ಕಾಂಗ್ರೆಸ್ ಅಧಿಕಾರಕ್ಕೆ ತಂದರೆ ಬಿಜೆಪಿ ಸರ್ಕಾರ ಜಾರಿಗೊಳಿಸಲು ಹೊರಟಿದ್ದ ಗೋ ಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸಿ ಅಲ್ಪಸಂಖ್ಯಾತರಿಗೆ ಆಗುವ ಅನ್ಯಾಯ ಸರಿಪಡಿಸುತ್ತೇವೆ ಎಂದು ವಿರೋಧ ಪಕ್ಷ ನಾಯಕ ಎಸ್. ಸಿದ್ದರಾಮಯ್ಯ ಹೇಳಿದರು. ಪಟ್ಟಣದ ತಂಬಾಕದ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಕ್ಷೇತ್ರದ ಅಭ್ಯರ್ಥಿ, ಶಾಸಕ ಬಿ.ಸಿ. ಪಾಟೀಲ ಪರ ಮತ ಯಾಚಿಸಿ ಮಾತನಾಡಿದರು. ರಾಜ್ಯದ ಜನತೆ ಕಿಚಡಿ ಸರ್ಕಾರದಿಂದ ಬೇಸತ್ತು ಸ್ಥಿರ ಸರ್ಕಾರ ಬಯಸುತ್ತಿದ್ದಾರೆ. ಕಾರಣ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಹಿರೇಕೆರೂರು ಕ್ಷೇತ್ರದ ಜನತೆ ಅಭಿವೃದ್ಧಿ ಪರವಾಗಿರುವ ಶಾಸಕ ಬಿ.ಸಿ. ಪಾಟೀಲ ಅವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು. ಶಾಸಕ ಬಿ.ಸಿ. ಪಾಟೀಲ ಮಾತನಾಡಿ, ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿ ಯು.ಬಿ. ಬಣಕಾರ ಅವರೇ ನನಗೆ ನೇರ ಎದುರಾಳಿಯಾಗಿದ್ದು, ಕಾರಣ ಕಳೆದು 10 ವರ್ಷಗಳಲ್ಲಿ ನಾನು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಕಾಂಗ್ರೆಸ್‌ಗೆ ಮತ ಚಲಾಯಿಸುವಂತೆ ಮನವಿ ಮಾಡಿದರು. ಪಪಂ ಸದಸ್ಯರಾದ ಶೀವಲೀಲಾ ಎಸ್.ಆರ್, ರಮೇಶ ತೋರಣಗಟ್ಟಿ, ನಾಗರಾಜ ತಿರಕಪ್ಪ ಗುಡ್ಡಳ್ಳಿ, ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಟಿ.ಬಿ. ಬೆಳಗಾವಿ ಕಾಂಗ್ರೆಸ್ ಪಕ್ಷ ಸೇರಿದರು.  ಮಾಜಿ ಸಂಸದ ಮಂಜುನಾಥ ಕುನ್ನೂರ, ಟಿ. ಈಶ್ವರ, ಡಾ೤ ಮಲ್ಲೇಶಪ್ಪ ಹುಲ್ಮನಿ, ಜಿ. ಶಿವನಗೌಡ್ರ, ಎಸ್.ಕೆ. ಕರಿಯಣ್ಣನವರ, ಮಂಜುಳಾ ರವಿಶಂಕರ ಬಾಳಿಕಾಯಿ, ವನುಜಾ ಪಾಟೀಲ, ಡಿ.ಸಿ. ಪಾಟೀಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.