ಉಕ್ಕುತ್ತಿವೆ ನದಿಗಳು, ಬಿಕ್ಕುವ ಬದುಕು
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 2
ವರುಣ ದೇವನ ಅರ್ಭಟ ಜಿಲ್ಲಾದ್ಯಂತ ಮುಂದುವರಿದಿದ್ದು, ಲಕ್ಷಾಂತರ ಮೌಲ್ಯದ ಬೆಳೆ ಹಾನಿ ಸಂಭವಿಸಿ ನೂರಾರು ಮನೆಗಳು ಧರೆಗುರುಳಿವೆ.
ಜಿಲ್ಲೆಯಲ್ಲಿ ಹರಿಯುವ ಕುಮದ್ವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತ ಸಾಗಿದ್ದು, ನದಿ ದಡದಲ್ಲಿ ವಾಸವಾಗಿರುವ ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಇದೇ ರೀತಿ ತುಂಗಭದ್ರಾ, ವರದಾ ಹಾಗೂ ಧರ್ಮಾ ನದಿಗಳೂ ಅಪಾಯದ ಮಟ್ಟಕ್ಕೆ ತಲುಪಲು ಕೆಲವೇ ಕೆಲವು ಅಡಿಗಳು ಬಾಕಿ ಉಳಿದಿವೆ. ಮಳೆ ಜೋರಾದರೆ ಮತ್ತಷ್ಟು ಬೆಳೆ ಹಾಗೂ ಆಸ್ತಿಪಾಸ್ತಿಗಳ ಹಾನಿ ಸಂಭವಿಸಬಹುದೆಂಬ ಆತಂಕ ಜನತೆಯಲ್ಲಿ ಮನೆ ಮಾಡಿದೆ.
ಬೆಳೆಹಾನಿ ಎಷ್ಟು..?
ಜಿಲ್ಲೆಯಾದ್ಯಂತ ಜೂ. 1ರಿಂದ ಈತನಕ ಮಳೆಯಿಂದಾಗಿ 111 ಹೆಕ್ಟೇರ್ ಬೆಳೆಹಾನಿಯಾಗಿದೆ. ಜಿಲ್ಲಾಡಳಿತ ಕಚೇರಿಯ ಮೂಲಗಳ ಪ್ರಕಾರ ಒಟ್ಟು ರು. 7.5 ಲಕ್ಷ ಬೆಳೆಹಾನಿ ಸಂಭವಿಸಿದೆ. ನದಿ ತೀರದ ಪ್ರದೇಶದಲ್ಲಿ ಮನೆ ಹಾಗೂ ಜಮೀನು ಹೊಂದಿರುವ ಕೃಷಿಕರು, ಯಾವ ಸಂದರ್ಭದಲ್ಲಿ ನದಿಗಳು ರುದ್ರನರ್ತನ ಪ್ರದರ್ಶಿಸಲಿವೆಯೋ ಎಂಬ ಭೀತಿಯಲ್ಲೇ ಜೀವನ ಸಾಗಿಸುವಂತಾಗಿದೆ.
ಕೈಗೆ ಬಂದ ತುತ್ತು..
ಮಳೆರಾಯನ ಅರ್ಭಟದಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರಸಕ್ತ ವರ್ಷ ಮುಂಗಾರು ವಾರದ ಮುಂಚೆಯೇ ಜಿಲ್ಲೆಗೆ ಪ್ರವೇಶಿಸಿದ್ದರಿಂದ ಸಂತಸಗೊಂಡಿದ್ದ ರೈತ, ಅತ್ಯಂತ ಹುರುಪಿನಲ್ಲೇ ಸಾಲಸೋಲ ಮಾಡಿ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ. ಆದರೆ, ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆದು ನಿಂತ ಬೆಳೆ ಸಂಪೂರ್ಣ ನೀರಿನಲ್ಲಿ ನಿಂತು ಭಾರಿ ಹಾನಿಯಾಗಿದ್ದು, ಕೈ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರು ಕಣ್ಣೀರು ಹಾಕುವಂತಾಗಿದೆ.
ಆಸ್ತಿ-ಪಾಸ್ತಿ ಹಾನಿ ಎಷ್ಟು..?
ಮಳೆಯಿಂದ ಜಿಲ್ಲೆ ಐದು ತಾಲೂಕುಗಳಲ್ಲಿ ಒಟ್ಟು 821 ಮನೆಗಳು ಧರೆಗುರುಳಿವೆ. ಈ ಪೈಕಿ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ವರೆಗೆ ಸುರಿದ ಮಳೆಯಿಂದ ಜಿಲ್ಲೆಯಲ್ಲಿ 119 ಮನೆಗಳು ಬಿದ್ದಿವೆ. ಹಾವೇರಿ-41, ಬ್ಯಾಡಗಿ-23, ರಾಣಿಬೆನ್ನೂರು-8, ಹಿರೇಕೆರೂರು-27 ಹಾಗೂ ಶಿಗ್ಗಾಂವ ತಾಲೂಕಿನಲ್ಲಿ ಒಟ್ಟು 20 ಮನೆಗಳು ಕುಸಿದಿವೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಇದಕ್ಕಿಂತ ಹೆಚ್ಚಿನ ಹಾನಿಯೇ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಏರುತ್ತಿರುವ ನೀರಿನ ಮಟ್ಟ
ಜಿಲ್ಲೆಯಲ್ಲಿ ಹರಿಯುವ ನಾಲ್ಕು ನದಿಗಳು ನೀರಿನ ಮಟ್ಟ ಹೆಚ್ಚುತ್ತಲೇ ಸಾಗಿದೆ. ಈ ಪೈಕಿ ಕುಮದ್ವತಿ ನದಿಯಲ್ಲಿ ಒಳಹರಿವು ಹೆಚ್ಚಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಶುಕ್ರವಾರ ನಾಲ್ಕು ನದಿಗಳಲ್ಲಿ ಕಂಡು ಬಂದಿರುವ ನೀರಿನ ಪ್ರಮಾಣದ ಅಂಕಿ-ಸಂಖ್ಯೆ ಇಂತಿದೆ.
ತುಂಗಭದ್ರಾ ಗರಿಷ್ಠ ಮಟ್ಟ- 6.47 ಮೀಟರ್, ಅಪಾಯದ ಮಟ್ಟ 8.3 ಮೀ., ವರದಾ ಗರಿಷ್ಠ ಮಟ್ಟ 6.35 ಮೀ., ಅಪಾಯದ ಮಟ್ಟ 7.35 ಮೀ., ಕುಮದ್ವತಿ ಗರಿಷ್ಠ ಮಟ್ಟ 6.65 ಮೀ., ಅಪಾಯದ ಮಟ್ಟ 8 ಮೀ. ಹಾಗೂ ಧರ್ಮಾ ಗರಿಷ್ಠ ಮಟ್ಟ 5.887 ಮೀ., ಅಪಾಯದ ಮಟ್ಟ 5.92 ಮೀ.
ಇನ್ನೆರಡು ದಿನ ವರುಣನ ಅರ್ಭಟ ಹೀಗೆಯೇ ಮುಂದುವರಿದಲ್ಲಿ ನದಿಗಳಲ್ಲಿ ಅಪಾಯದ ಮಟ್ಟ ತಲುಪುವುದರಲ್ಲಿ ಸಂದೇಹವಿಲ್ಲ. ನದಿ ತೀರದಲ್ಲಿರುವ ಹೊಲಗಳಿಗೆ ವ್ಯಾಪಕ ಪ್ರಮಾಣದಲ್ಲಿ ನೀರು ನುಗ್ಗಿ ದೊಡ್ಡ ಪ್ರಮಾಣದಲ್ಲಿ ಬೆಳೆಹಾನಿ ಸಂಭವಿಸುವ ಸಾಧ್ಯತೆ ಇದೆ.
ಜಿಲ್ಲಾಡಳಿತ ಸಿದ್ಧ
ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಲೇ ಸಾಗಿದ್ದರಿಂದ ನದಿ ತೀರದಲ್ಲಿ ವಾಸವಾಗಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸುವಂತೆ ಜಿಲ್ಲಾಡಳಿತ ಎಲ್ಲ ತಾಲೂಕು ಕೇಂದ್ರಗಳಿಗೆ ಆದೇಶ ನೀಡಿದೆ. ಎಲ್ಲ ತಾಲೂಕುಗಳ ತಹಸೀಲ್ದಾರರು ಕಂದಾಯ ನಿರೀಕ್ಷಕರೊಂದಿಗೆ ಪರಿಶೀಲನೆ ನಡೆಸಿದ್ದಾರೆ.
ಕುಮದ್ವತಿ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಬಂದು ಪ್ರವಾಹ ಎದುರಾದರೆ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲು ಗಂಜಿ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ರಾಣಿಬೆನ್ನೂರು ತಾಲೂಕಿನ ಮತ್ತೂರ, ಸವಣೂರ, ನೀರಲಗಿ ಹಾಗೂ ಹಾವೇರಿ ತಾಲೂಕಿನ ಕರ್ಜಗಿ ಮಣ್ಣೂರ, ಹೊಸರಿತ್ತಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜನತೆಗೆ ತೊಂದರೆ ಆಗದಂತೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಳೆ ಪ್ರಮಾಣ ಕಡಿಮೆಯಾಗದಿದ್ದಲ್ಲಿ ನದಿಗಳಲ್ಲಿ ಹರಿಯುವ ನೀರು ನೇರವಾಗಿ ಅಕ್ಕಪಕ್ಕದ ಹೊಲಗಳಿಗೆ ನುಗ್ಗಿ ಸಮೃದ್ಧವಾಗಿ ಬೆಳೆದು ನಿಂತಿರುವ ಬೆಳೆಗಳಿಗೆ ಮಾರಕವಾಗಲಿದೆ. ಅಲ್ಲದೆ, ನದಿ ಪ್ರದೇಶಗಳಿಂದ ದೂರವಿರುವ ಜಮೀನುಗಳ ಬೆಳೆಯೂ ಪೋಷಕಾಂಶದ ಕೊರತೆಯಿಂದ ಹಾಳಾಗಲಿದೆ. ನಿಸರ್ಗ ಮುನಿಸಿಕೊಳ್ಳದಂತೆ ದೇವರ ಪ್ರಾರ್ಥನೆ ಮಾಡುವುದೊಂದೆ ರೈತನ ಪಾಲಿಗೆ ಉಳಿದಿರುವ ಮಾರ್ಗ!
ಪರಿಶೀಲನೆಗೆ ನೋಡಲ್ ಅಧಿಕಾರಿಗಳ ನೇಮಕ
ಜಿಲ್ಲೆಯಲ್ಲಿ ಹರಿಯುತ್ತಿರುವ ನದಿಗಳ ನೀರಿನ ಪ್ರಮಾಣದ ಬಗ್ಗೆ ನಿತ್ಯವೂ ಪರಿಶೀಲನೆ ನಡೆಸಲಾಗುತ್ತಿದೆ. ನದಿ ತೀರದ ಪ್ರದೇಶದಲ್ಲಿ ವಾಸವಾಗಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಮನವೊಲಿಸಲಾಗುತ್ತಿದೆ. ಕುಮದ್ವತಿ ನದಿಯಲ್ಲಿ ಪ್ರವಾಹದ ಭೀತಿ ಕಂಡು ಬರುತ್ತಿದ್ದು, ಪ್ರಾಣ ಹಾನಿ ತಪ್ಪಿಸಲು ಜಿಲ್ಲಾಡಳಿತ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ. ತುಂಗಭದ್ರಾ ನದಿಯಲ್ಲಿ ನೀರು ಅಪಾಯದ ಮಟ್ಟ ತಲುಪಿಲ್ಲವಾದರೂ ಶಿವಮೊಗ್ಗ ಹಾಗೂ ಶಿರಸಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಎಲ್ಲ ತಾಲೂಕುಗಳಲ್ಲಿ ಪರಿಶೀಲನೆ ನಡೆಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಲ್ಲದೆ, ಉಪವಿಭಾಗಾಧಿಕಾರಿ, ತಹಸೀಲ್ದಾರ್, ಡಿಎಚ್ಓ ಹಾಗೂ ಕೃಷಿ ಇಲಾಖೆ ಉಪನಿರ್ದೇಶಕರೊಂದಿಗೆ ಬೆಳೆ ಹಾನಿಗೆ ಸಂಬಂಧಿಸಿದಂತೆ ವರದಿ ತಯಾರಿಸಿ ನೀಡುವಂತೆ ಸೂಚಿಸಲಾಗಿದೆ. ಸಣ್ಣ ಪುಟ್ಟ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡಲು ತಹಸೀಲ್ದಾರರಿಗೆ ಸೂಚಿಸಲಾಗಿದೆ.
- ಬಿ.ಕೆ. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

