ಹಾವೇರಿ

ರೈತರ ಹೊಲಗಳಲ್ಲಿ ಜಿಂಕೆ ಹಾವಳಿ ತಡೆಗಟ್ಟದಿದ್ದರೆ ಹೋರಾಟ: ಎಚ್ಚರಿಕೆ

Published On :

ಶಿಗ್ಗಾಂವಿ: ತಾಲೂಕಿನ ಬಂಕಾಪುರ ಹೋಬಳಿ ವ್ಯಾಪ್ತಿಯಲ್ಲಿರುವ ಕೃಷಿಭೂಮಿ ಸಮತಟ್ಟು, ಅತಿ ಉತ್ಕೃಷ್ಟವಾಗಿರುವ ಭೂಮಿಯಲ್ಲಿ ಬೆಳೆದ ಬೆಳೆಗಳನ್ನು ಹಾಳು ಮಾಡುತ್ತಿರುವ ಜಿಂಕೆಗಳ ಹಾವಳಿ ತಡೆಗಟ್ಟಿ ರೈತರ ರಕ್ಷಣೆಗೆ ಮುಂದಾಗಬೇಕು. ಇಲ್ಲವಾದಲ್ಲಿ ಅರಣ್ಯ ಇಲಾಖೆ ಮುಂದೆ ಪ್ರತಿಭಟನೆ ನಡೆಸುವುದಾಗಿ ತಾಲೂಕು ಅನ್ನದಾತ ರೈತ ಹೋರಾಟ ಸಮಿತಿ ಎಚ್ಚರಿಸಿದೆ. ಈ ಕುರಿತು ಹೇಳಿಕೆ ನೀಡಿದ ರೈತ ಮುಖಂಡ ನವೀನ ಸವಣೂರು, ಈ ಭಾಗದಲ್ಲಿ ಅಧಿಕವಾಗಿರುವ ಶೇಂಗಾ, ಸೋಯಾಬಿನ್, ಗೋವಿನಜೋಳ ಬೆಳೆಗಳು ಉತ್ತಮ ಬೆಳವಣಿಗೆಗೆ ಕಂಟಕಪ್ರಾಯವಾಗಿ ಕಾಡುತ್ತಿರುವ ಜಿಂಕೆಗಳಿಂದ ರೈತ ಹೈರಾಣನಾಗಿದ್ದಾನೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆಗಳ ಹಾವಳಿ ತಡೆಗಟ್ಟಬೇಕು. ಪ್ರಸಕ್ತ ವರ್ಷ ಸಮರ್ಪಕ ಮಳೆಯಿಂದ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರ ಮುಂಗಾರು ಹೊಂಗನಸನ್ನು ಜಿಂಕೆಗಳು ಭಗ್ನಗೊಳಿಸುತ್ತಿವೆ. ಇದರಿಂದ ಸತತ ಬರಗಾಲದಿಂದ ತತ್ತರಿಸಿದ ರೈತರು, ಈ ಬಾರಿ ಉತ್ತಮ ಪಸಲು ಪಡೆಯುವ ಆಶಾಭಾವನೆ ದೂರಾಗುತ್ತಿದೆ. ಬೆಳೆ ಹಾನಿಯಾಗುತ್ತಿರುವ ದೃಶ್ಯ ಕಂಡು ರೈತ, ಕಣ್ಣುಮುಚ್ಚಿ ಕುಳಿತುಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾನೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ರೈತನ ಬೆಳೆ ರಕ್ಷಣೆ ಮಾಡುವ ದಿಸೆಯಲ್ಲಿ ಜಿಂಕೆಗಳನ್ನು ಹೊಲದತ್ತ ಬಾರದಂತೆ ಕಾರ್ಯಾಚರಣೆ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವುದಾಗಿ ನವೀನ ಸವಣೂರ, ಸಮಿತಿ ಅಧ್ಯಕ್ಷ ಗಂಗಾಧರ ಗಡ್ಡೆ, ರಾಜಣ್ಣ ಕುಲಕರ್ಣಿ, ಚನ್ನಪ್ಪ ಗಾಣಗೇರ, ಸಹದೇವಪ್ಪ ಗುಳೇದಕೇರಿ, ರಾಮಣ್ಣ ಕುರುಬರ, ಮಡಿವಾಳಪ್ಪ ಚಳ್ಯಾಳ, ಫಕ್ಕಿರಪ್ಪ ಹುಲಿಕಟ್ಟಿ, ಈರಣ್ಣ ತಳವಾರ ಎಚ್ಚರಿಸಿದ್ದಾರೆ.
ಮುಖ್ಯಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹ
ಶಿಗ್ಗಾಂವಿ: ಶಾಲೆಯ ದಾಖಲಾತಿಯನ್ನು ಕೇಳಿದರೂ ಕೊಡದೆ ಮೂರು ವರ್ಷಗಳಿಂದ ಸತಾಯಿಸುತ್ತಿರುವ ಕುನ್ನೂರ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಪ್ರಧಾನ ಗುರುಮಾತೆ ಎಸ್.ಎಂ. ದೇವಕಿ ಅವರ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಲಾಗಿದೆ. ಕಲಘಟಗಿ ತಾಲೂಕು ನಾಗನೂರು ಗ್ರಾಮದ ಚನ್ನಪ್ಪ ಗುರುಪಾದಪ್ಪ ಹೂಗಾರ ಎಂಬುವರು ತಮ್ಮ ಪತ್ನಿ ಅಂಜವ್ವ ಉರ್ಫ್ ನಿಂಬವ್ವ ಬಸಪ್ಪ ಹೂರಾಗ ಅವರ ದಾಖಲಾತಿಯನ್ನು ಕೇಳಿದ್ದರು. ಮೂರು ವರ್ಷವಾದರೂ ನೀಡದೆ ಸತಾಯಿಸಿ, ಈ ಶಾಲೆಯಲ್ಲಿ ಅವರ ದಾಖಲಾತಿಯೇ ಇಲ್ಲ ಎಂದು ಖಂಡತುಂಡವಾಗಿ ಹೇಳಿದ್ದಾರೆ. ಆದರೆ, ಗ್ರಾಮದ ಗಣ್ಯರನ್ನು ಶಾಲೆಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ ನೀಡಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಈ ಕುರಿತು ಮುಖ್ಯ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದಾರೆ.
ಗ್ರಾಪಂ ಖಾಲಿ ಸ್ಥಾನಗಳಿಗೆ ಚುನಾವಣೆ
ಹಾವೇರಿ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಗಳಿಗೆ ಚುನಾವಣೆ ಮುಗಿದಿದ್ದು, ಶೇ. 75.43ರಷ್ಟು ಮತದಾನವಾಗಿದೆ. ಹಾವೇರಿ ತಾಲೂಕಿನ 5-ದೇವಿಹೊಸೂರ, 12-ಕರ್ಜಗಿ, 29-ಬಸಾಪುರ, ರಾಣಿಬೆನ್ನೂರು ತಾಲೂಕಿನ 3-ಮೆಡ್ಲೇರಿ, ಹಿರೇಕೆರೂರು ತಾಲೂಕಿನ 29-ಹಳ್ಳೂರ, ಶಿಗ್ಗಾಂವಿ ತಾಲೂಕಿನ 1-ತಡಸ, 16-ಹಿರೇಮಲ್ಲೂರ, ಹಾನಗಲ್ ತಾಲೂಕಿನ 10-ಹುಲ್ಲತ್ತಿ, 16-ಕೆಲವರಕೊಪ್ಪ ಹಾಗೂ 21-ಹಿರೇಹುಲ್ಲಾಳ ಗ್ರಾಪಂನ ಸ್ಥಾನಗಳಿಗೆ ಮತದಾನವಾಗಿದೆ. ಸೀಲ್ ಮಾಡಿದ ಮತಪೆಟ್ಟಿಗೆಗಳನ್ನು ನಿಗದಿಪಡಿಸಲಾದ ಭದ್ರತಾ ಕೊಠಡಿಗಳಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ನೌಕರರ ರಕ್ಷಣೆ: ಹೊಸೂರ
ಹಿರೇಕೆರೂರು: ಸರ್ಕಾರಿ ನೌಕರರ ಹಿತ ರಕ್ಷಣೆಗೆ ತಾವು ಸದಾ ಸಿದ್ಧ ಎಂದು ತಹಸೀಲ್ದಾರ್, ನೌಕರರ ಸಂಘದ ಅಧ್ಯಕ್ಷ ತುಷಾರ ಹೊಸೂರ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಿದ ಚುನಾವಣಾಧಿಕಾರಿ ಆರ್.ಜಿ. ಗೋಖಲೆ ಅವರನ್ನು ಸನ್ಮಾನಿಸಿದರು. ಸಂಘದ ರಾಜ್ಯ ಪರಿಷತ್ ಸದಸ್ಯ ಎಚ್.ಆರ್. ನಾಯಕ, ಉಪಾಧ್ಯಕ್ಷರಾಗಿ ಅರುಣಕುಮಾರ ಕಾರಗಿ, ವೀರೇಂದ್ರ ಚೆನ್ನಗೌಡರ, ಕೆ.ಎಸ್. ಯತ್ತಿನಹಳ್ಳಿ, ಎಚ್.ಎಚ್. ಜಾಡರ, ಪಿ. ರಾಮಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ ಮಾಳಗಿಮನಿ, ಸಹಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಬರಗಿ, ಬಿ.ಎಂ. ಪಾಟೀಲ, ಎಂ.ಜೆ. ಜಮಖಂಡಿ, ಪ್ರಕಾಶ ಹಳ್ಳಿ, ಬಿ.ಸಿ. ಹೊಸಕಟ್ಟಿ, ಸಂಘಟನಾ ಕಾರ್ಯದರ್ಶಿಗಳಾಗಿ ಎ.ಎನ್. ಬಾವಿಕಟ್ಟಿ, ಎ.ಎನ್. ತೀರ್ಥಪ್ರಸಾದ, ಪಿ. ಸೇವಾ ನಾಯ್ಕ, ರಿಯಾಜ ಅಹ್ಮದ್, ಚಂದ್ರಕಲಾ ನಂದೆಣ್ಣನವರ, ಖಚಾಂಚಿಯಾಗಿ ಇಬ್ರಾಹಿಂ ಇಟಗಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಗೀತಾ ಬಾಳಿಕಾಯಿ, ಎಸ್.ಜೆ. ಪಾಟೀಲ, ಮಂಗಳಾ ಬಣಕಾರ, ಅಪ್ಸರಾ ಬೇಗಂ, ನಾಗರಾಜ ಹಂಚಿಮನಿ, ಕ್ರೀಡಾ ಕಾರ್ಯದರ್ಶಿಗಳಾಗಿ ಜೆ.ವಿ. ಆಲದಕಟ್ಟಿ, ಎಸ್.ಬಿ. ಪಾಟೀಲ, ಜೆ.ಬಿ. ಭಜಂತ್ರಿ, ಪೂರ್ಣಿಮಾ ಮಡಿವಾಳರ, ಸುವಿಂದಾ ಸಾಲಿಮಠ, ಆಂತರಿಕ ಲೆಕ್ಕಪರಿಶೋಧಕರಾಗಿ ಎಂ.ಬಿ. ಹೆಗಡಾಳ ನೇಮಕವಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.