ಹಾವೇರಿ

ನಾಳೆ ದೇಸಿ ಬೀಜ ಪ್ರದರ್ಶನ: ದೆಹಲಿಗೆ ತೆರಳಿದ 30 ರೈತರು

Published On :

ಹಾವೇರಿ: ನವದೆಹಲಿಯಲ್ಲಿ ಆ. 8ರಂದು ನಡೆಯಲಿರುವ ದೇಸಿ ಬೀಜ ಬೆಳೆಗಾರರ ಸಮಾವೇಶ ಹಾಗೂ ದೇಶಿ ಬೀಜ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಉತ್ತರ ಕರ್ನಾಟಕದ 30ಕ್ಕೂ ಹೆಚ್ಚು ರೈತರು ಮಂಗಳವಾರ ಸಂಜೆ ಹುಬ್ಬಳ್ಳಿ ರೈಲು ನಿಲ್ದಾಣದಿಂದ ನಿಜಾಮುದ್ದಿನ ಎಕ್ಸ್‌ಪ್ರೆಸ್ ರೈಲಿನ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು.
ದೆಹಲಿಯ ಜಂತರ್ ಮಂತರ್‌ನಲ್ಲಿ ರೈತರ ಸಮಾವೇಶ ನಡೆಯಲಿದ್ದು, ದೇಸಿ ಬೀಜಗಳ ಹಾಗೂ ಆಹಾರ ಉತ್ಪನ್ನಗಳ ಪ್ರದರ್ಶನ ನಡೆಯಲಿದೆ. 9ರಂದು ದೆಹಲಿ ದರ್ಶನ ಮಾಡಲಿರುವ ರೈತರು, 10ರಂದು ರಾಜಸ್ಥಾನದ ಕೃಷಿ ಕ್ಷೇತ್ರ ಭೇಟಿ ಮಾಡಲಿದ್ದಾರೆ. 10 ಹಾಗೂ 11ರಂದು ಪಂಜಾಬ್ ಹಾಗೂ ರಾಜಸ್ಥಾನಕ್ಕೆ ಎರಡು ರೈತರ ತಂಡಗಳು ತೆರಳಲಿವೆ. ಅಲ್ಲಿನ ದೇಸಿ ಬೀಜ ಬೆಳೆಗಾರರು ಹಾಗೂ ದೇಸೀ ಕೃಷಿ ಬಗ್ಗೆ ತಿಳಿದುಕೊಳ್ಳಲಿದ್ದಾರೆ.
ಈ ಸಮಾವೇಶದಲ್ಲಿ ದೇಶದ ಎಲ್ಲ ರಾಜ್ಯಗಳ  ರೈತರು ಭಾಗವಹಿಸಲಿದ್ದಾರೆ. ದೇಸಿ ಬೀಜಗಳ ಸಂರಕ್ಷಣೆಗಾಗಿ ರೈತರು ಕೇಂದ್ರದ ಮೇಲೆ ಒತ್ತಡ ತರಲಿದ್ದಾರೆ. ದೇಶದಲ್ಲಿ ಕಾಲಿಟ್ಟಿರುವ ಬಹುರಾಷ್ಟ್ರೀಯ ಕಂಪನಿಗಳಿಂದ ಮೂಲ ಕೃಷಿಯ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ರೈತರು ದೇಶದ ಪ್ರಧಾನಿ ಮನಮೋಹನ ಸಿಂಗ್, ಕೃಷಿ ಸಚಿವರು ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲಿದ್ದಾರೆ.
ಕರ್ನಾಟಕದ ದೇಶಿ ಬೀಜಗಳು: ದೇಸಿ ಬೀಜಗಳಲ್ಲಿ ಅಕ್ಕಿ ತಳಿಗಳಾದ ಬತ್ತ, ರಾಗಿ, ನವಣೆ, ಹಾರಕ, ಊದಲು, ರಾಗಿ, ಬರಗು, ಹತ್ತಿ ತಳಿಗಳಾದ ದೊಡ್ಡ ಹತ್ತಿ, ಪಂಡರಪುರ, ಪಂಡರಪುರ ಲಕ್ಷ್ಮಿ, ಜಯಧರ, ಸಣ್ಣ ಹತ್ತಿ, ವರಲಕ್ಷ್ಮಿ, ಗಿಡ ಹತ್ತಿ, ಶ್ರೀ ಹತ್ತಿ ಹಾಗೂ ನೂರಾರು ಅಳಿವಿನಂಚಿನಲ್ಲಿರುವ ದೇಶೀ ತಳಿಗಳನ್ನು ರಾಜ್ಯದ ರೈತರು ಪ್ರದರ್ಶನ ಮಾಡಲಿದ್ದಾರೆ.
ಕರ್ನಾಟಕ ದೇಸಿ ಹತ್ತಿ ಬೆಳೆಗಾರರ ಸಂಘದ ಸಂಚಾಲಕ, ಸಂಜೀವಿನಿ ಸಾವಯವ ಕೃಷಿಕರ ಬಳಗದ ಅಧ್ಯಕ್ಷ ಶಿವಯೋಗಿ ಮಕರಿ, ಚನ್ನಬಸಪ್ಪ ಕೊಂಬಳಿ, ಶಂಕರಪ್ಪ ಗಂಜಿಗಟ್ಟಿ, ಓಂಕಾರಗೌಡ ಪಾಟೀಲ, ರಾಮಣ್ಣ ಕಳ್ಳಿಮನಿ, ಶ್ರೇಣಿಕರಾಜ ಯಲವಟ್ಟಿ, ಶಿವಪ್ಪ ಗಂಜಿಗಟ್ಟಿ, ಲಕ್ಷಪ್ಪ ಕಳ್ಳಿಮನಿ, ನೀಲಪ್ಪ ಕಳ್ಳಿಮನಿ, ಅಶೋಕ ಹಳ್ಳಿ, ನಾಗೇಶ ಪತ್ತಾರ ಮಲೆನಾಡು ಬತ್ತ ಬೆಳೆಗಾರರ ಸಂಘದ ಶಿವಪುತ್ರಪ್ಪ ಹಿರೇಮಾಗಡಿ ರೈತರ ನಿಯೋಗದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.