ಹಾವೇರಿ

ಕೈಗಳ ಮುಗಿವೆ, ಹಾಲನ್ನೆರೆವೆ...

Published On :

ಬ್ಯಾಡಗಿ: ತಾಲೂಕಿನಾದ್ಯಂತ ಶನಿವಾರ ನಾಗರ ಪಂಚಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಮಹಿಳೆಯರು ಬೆಳಗ್ಗೆಯೇ ಮನೆಯ ಮುಂದೆ ನಾಗದೇವರ ರಂಗೋಲಿ ಚಿತ್ರಗಳನ್ನು ಬಿಡಿಸಿ ಅಲಂಕರಿಸಿದ್ದು ವಿಶೇಷವಾಗಿತ್ತು.
ಹೊಸ ಬಟ್ಟೆ ತೊಟ್ಟು ಹಾಲು-ನೈವೇದ್ಯದೊಂದಿಗೆ ನಾಗಶಿಲ್ಪಗಳಿಗೆ ಹಾಗೂ ಹುತ್ತಗಳಿಗೆ ಹಾಲೆರೆದು ಭಕ್ತಿಭಾವ ಮೆರೆದರು. ಹಿಂದಿನ ದಿನವೇ ಮನೆಯಲ್ಲಿ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಗಿಡಗಳಿಗೆ ಹಗ್ಗ ಕಟ್ಟಿ ಮಕ್ಕಳು, ಮಹಿಳೆಯರು ಜೋಕಾಲಿ ಆಡುತ್ತಿದ್ದರು. ಮಹಿಳೆಯರು ನಾಗಪ್ಪನಿಗೆ ಪೂಜೆ ಸಲ್ಲಿಸಿದ ಬಳಿಕ ಗಂಡು ಮಕ್ಕಳಿಗೆ ಅರಿಷಿಣದ ನೂಲನ್ನು ಕಟ್ಟುವ ಸಂಪ್ರದಾಯ ನೆರವೇರಿಸಿದರು.
ಪಟ್ಟಣದ ವೀರಭದ್ರೇಶ್ವರ, ಸಿದ್ದೇಶ್ವರ, ಸಂಗಮೇಶ್ವರ, ದಾನಮ್ಮದೇವಿ, ಬಸವೇಶ್ವರ ಮುಂತಾದ ದೇವಸ್ಥಾನ ಹಾಗೂ ವಿದ್ಯಾನಗರ, ಬಸ್ ನಿಲ್ದಾಣ ಬಳಿಯ ನಾಗದೇವರಿಗೆ ಮಹಿಳೆಯರು ಗುಂಪಾಗಿ ತೆರಳಿ ಹಾಲೆರೆದರು.
ಮಣ್ಣಿನ ನಾಗದೇವರು: ಪಂಚಮಿ ಹಬ್ಬದ ಅಂಗವಾಗಿ ವಿಶೇಷವಾದ ನಾಗಪ್ಪನ ಪೂಜೆ ನಡೆಸಲಾಗುತ್ತದೆ. ಶುದ್ಧವಾದ ಮಣ್ಣಿಗೆ ಅರಳೆಯ ಮಿಶ್ರಣ ಮಾಡಿ ನಾಗದೇವರನ್ನು ತಯಾರಿಸಿ ಪೂಜಿಸುವುದು ಪದ್ಧತಿ. ಸಂಪ್ರದಾಯದಂತೆ ಶನಿವಾರವೂ ಮಹಿಳೆಯರು ಇಂತಹ ವಿಶೇಷ ಪೂಜೆಯಲ್ಲಿ ತೊಡಗಿದ್ದು ಕಂಡು ಬಂದಿತು.
ಗಮನ ಸೆಳೆದ ಯುವಕರು
ಹಬ್ಬದ ನಿಮಿತ್ತ ಅಲ್ಲಲ್ಲಿ ಗುಂಪಾಗಿ ಜನಪದ ಶೈಲಿಯ ಆಟಗಳನ್ನು ಆಡಿದ ಯುವಕರು ದೈಹಿಕ ಕಸರತ್ತುಗಳನ್ನು ಪ್ರದರ್ಶಿಸಿದರು. ಸ್ಪರ್ಧೆ ರೂಪದಲ್ಲಿ ಜರುಗಿದ ಆಟಗಳು ಹಬ್ಬಕ್ಕೆ ಮತ್ತಷ್ಟು ಮೆರಗನ್ನು ತಂದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.