ಮೈಲಾರ ಮಹಾತ್ಯಾಗ ಸ್ಮರಣೆ ಬೇಡವೇ?
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 14
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರೊಂದಿಗೆ ದಂಡಿ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ವದ ಕೊಡುಗೆ ನೀಡಿದ ಹಾವೇರಿ ಜಿಲ್ಲೆಯ ಹೆಮ್ಮೆಯ ಪುತ್ರ ಮೈಲಾರ ಮಹಾದೇವಪ್ಪ ಅವರ ತ್ಯಾಗ-ಬಲಿದಾನಕ್ಕೆ ಇಂದಿಗೆ 66ರ ಸಂಭ್ರಮ.
ಸರ್ಕಾರ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ಮೈಲಾರ ಮಹಾದೇವಪ್ಪ ಯಾರು ಎಂಬುದೇ ಇಂದಿನ ತಲೆಮಾರಿನವರಿಗೆ ತಿಳಿದಿಲ್ಲ. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನ ಕಾರ್ಯಕ್ರಮಗಳಲ್ಲಿ ದೇಶಪ್ರೇಮದ ಬಗ್ಗೆ ಮಾರುದ್ದ ಭಾಷಣ ಬಿಗಿಯುವ ಜನಪ್ರತಿನಿಧಿಗಳು ಸ್ವಾತಂತ್ರ್ಯ ಹೋರಾಟಗಾರರನ್ನೇ ಮರೆತಿರುವುದು ದುರಂತವೇ ಸರಿ.
ಅಹಿಂಸಾ ಚಳವಳಿ
ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಮಹಾತ್ಮಾ ಗಾಂಧಿ ಆರಂಭಿಸಿದ್ದ ಅಹಿಂಸಾ ಚಳವಳಿಯಲ್ಲಿ ಸಕ್ರಿಯಾಗಿದ್ದ ಹಾವೇರಿ ಜಿಲ್ಲೆಯ ಮೈಲಾರ ಮಹಾದೇವಪ್ಪ, ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳ ಅವರನ್ನು ಹೊಸರಿತ್ತಿ ಬಳಿ ಬ್ರಿಟಿಷ್ ಅಧಿಕಾರಿಗಳು ಗುಂಡಿಕ್ಕಿ ಕೊಂದಿದ್ದರು. ಆಮೇಲೆ ಈ ಮೂವರ ಶವಗಳನ್ನು ಒಂದೇ ಗುಂಡಿಯಲ್ಲಿ ದಫನ್ ಮಾಡಿದ್ದರು ಎಂಬುದು ಈಗ ಇತಿಹಾಸ. ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಹುತಾತ್ಮರಲ್ಲಿ ಈ ಮೂವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ಮಹಾರಾಷ್ಟ್ರದ ಗೌರವ
ಮಹಾರಾಷ್ಟ್ರ ಸರ್ಕಾರ ಮೈಲಾರ ಮಹಾದೇವಪ್ಪ ಅವರ ಜೀವನ ಚರಿತ್ರೆಯನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸುವ ಮೂಲಕ ಅವರ ತ್ಯಾಗವನ್ನು ಗೌರವಿಸಿದೆ. ಮಹಾರಾಷ್ಟ್ರದ ಚಿಣ್ಣರಿಗೆ ಮೈಲಾರ ಮಹಾದೇವಪ್ಪ ಒಬ್ಬ ಮಹಾನ್ ಹೋರಾಟಗಾರ ಎಂಬುದು ತಿಳಿದಿದೆ. ಆದರೆ, ಹಾವೇರಿ ಹಾಗೂ ಕರ್ನಾಟಕದ ಬಹುತೇಕರಿಗೆ ಅವರ ಕೊಡುಗೆ ಏನೆಂಬುದೇ ತಿಳಿದಿಲ್ಲ. ಅದನ್ನು ತಿಳಿಸುವ ಪ್ರಯತ್ನವನ್ನೂ ಸರ್ಕಾರ ಮಾಡಿಲ್ಲ.
ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವಪ್ಪನವರ ಜೀವನ ಚರಿತ್ರೆಯನ್ನು ಕರ್ನಾಟಕ ರಾಜ್ಯದ ಶಾಲೆಗಳ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂಬು ಕೂಗು 80 ದಶಕದಿಂದ ಕೇಳಿಬರುತ್ತಿದ್ದರೂ ಕ್ರಮ ಕೈಗೊಂಡಿಲ್ಲ.
ಪುಣ್ಯತಿಥಿಗೆ ಸೀಮಿತ..!
ಮೈಲಾರ ಮಹಾದೇವಪ್ಪ, ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳ ಅವರನ್ನು ಬ್ರಿಟಿಷ್ ಅಧಿಕಾರಿಗಳು ಏ. 1, 1943ರಂದು ಗುಂಡಿಕ್ಕಿ ಕೊಂದ ಮೇಲೆ ಅವರ ದೇಹಗಳನ್ನು ಹಾವೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಮುಕ್ತಿಧಾಮದಲ್ಲಿ ಸಮಾಧಿ ಮಾಡಿದ್ದರು. ಸ್ವಾತಂತ್ರ್ಯ ಸಿಕ್ಕ ಮೇಲೆ ಪ್ರತಿ ವರ್ಷ ಏ. 1ರಂದು ಈ ಸಮಾಧಿ ಬಳಿ ಪುಣ್ಯತಿಥಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದನ್ನು ಹೊರತುಪಡಿಸಿ ಬೇರೆ ಮಹತ್ವದ ಕಾರ್ಯಕ್ರಮಗಳು ಆಗುತ್ತಿಲ್ಲ.
ಆತಂಕಕ್ಕೆ ಕಾರಣ
ಈ ಮೂವರು ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಸಮಾಧಿಗಳ ಪಕ್ಕದಲ್ಲೇ ಸ್ಮಶಾನ ಭೂಮಿ ಇದೆ. ಕೆಲ ವರ್ಷಗಳ ಹಿಂದೆ ಸರ್ಕಾರ ಇಲ್ಲಿ ಮೈಲಾರ ಮಹಾದೇವಪ್ಪನವರ ಸ್ಮಾರಕ ನಿರ್ಮಿಸಿದೆ. ಈ ಸ್ಮಾರಕವನ್ನು ಮ್ಯೂಸಿಯಂ ಆಗಿ ಪರಿವರ್ತಿಸುವ ಮಹತ್ತರ ಯೋಜನೆಯನ್ನೂ ಹೊಂದಿದೆ. ಆದರೆ, ಸ್ಮಾರಕ ಭವನದ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲುಸ್ತುವಾರಿಯಲ್ಲಿ ಲೋಕೋಪಯೋಗಿ ಇಲಾಖೆ ಸ್ಮಾರಕ ಭವನ ನಿರ್ಮಾಣ ಕಾರ್ಯ ಮುಂದುವರಿಸಿದೆ. ಈಗಾಗಲೇ ರು. 75 ಲಕ್ಷ ವೆಚ್ಚದಲ್ಲಿ ಒಂದು ಹಂತದ ಕಾಮಗಾರಿ ಮುಗಿದಿದ್ದು, ರು. 50 ಲಕ್ಷದಲ್ಲಿ ಎರಡನೇ ಹಂತದ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಸ್ಮಾರಕಗಳ ಪಕ್ಕದಲ್ಲೇ ಸ್ಮಶಾನ ಇರುವುದರಿಂದ ಜನತೆ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಕಾರಣಕ್ಕಾಗಿ ಏ. 1ರಂದು ಪುಣ್ಯತಿಥಿ ಕಾರ್ಯಕ್ರಮಕ್ಕೆ ಈ ಪ್ರದೇಶ ಸೀಮಿತಗೊಳ್ಳುವಂತಾಗಿದೆ ಎಂದು ಬೇರೆ ಹೇಳಬೇಕಿಲ್ಲ.
ಉದ್ಯಾನವನ-ಗ್ರಂಥಾಲಯ
ಸ್ಮಾರಕದ ಪಕ್ಕದಲ್ಲಿ ಉದ್ಯಾನವನ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಹೋರಾಟಗಾರರ ಚರಿತ್ರೆ ಸಾರುವ ಗ್ರಂಥಾಲಯ ಸ್ಥಾಪಿಸಬೇಕೆಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ. ಸರ್ಕಾರ ಈ ರೀತಿಯ ಕ್ರಮ ಕೈಗೊಂಡಲ್ಲಿ ಮಾತ್ರ ಮೈಲಾರ ಮಹಾದೇವಪ್ಪನಂತಹ ಹೋರಾಟಗಾರರು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿ ಉಳಿಯಲು ಸಾಧ್ಯ.
ಪಠ್ಯದಲ್ಲಿ ಸೇರಿಸಿ...
ಮಹಾನ್ ಸ್ವಾತಂತ್ರ್ಯ ಸೇನಾನಿ ಮೈಲಾರ ಮಹಾದೇವಪ್ಪನವರ ಜೀವನ ಚರಿತ್ರೆಯನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಮೂಲಕ ಯುವ ಪೀಳಿಗೆಯಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸುವ ಕೆಲಸ ಮಾಡುವಂತೆ ಪಠ್ಯಪುಸ್ತಕ ಇಲಾಖೆಗೆ ತಾವು 80ರ ದಶಕದಲ್ಲೇ ವಿನಂತಿಸಿಕೊಂಡಿದ್ದೆವು. ಮಹಾದೇವಪ್ಪನವರ ಜೀವನ ಚರಿತ್ರೆಯನ್ನು ಮಹಾರಾಷ್ಟ್ರ ಸರ್ಕಾರ, ಪಠ್ಯಕ್ರಮದಲ್ಲಿ ಅಳವಡಿಸಿರುವ ಸಂಗತಿಯನ್ನೂ ಗಮನಕ್ಕೆ ತಂದಿದ್ದೆವು. ಆದಾಗ್ಯೂ ಸರ್ಕಾರ ಹಾಗೂ ಇಲಾಖೆ ಈವರೆಗೂ ಮಹಾದೇವಪ್ಪನವರ ಜೀವನ ಚರಿತ್ರೆಯನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳದೇ ಇರುವುದು ನೋವು ತಂದಿದೆ. 67ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ನಿಜವಾಗಿಯೂ ಸಾರ್ಥಕತೆ ಬರಬೇಕಾದರೆ ಸರ್ಕಾರ ತಕ್ಷಣ ಈ ಕ್ರಮಕ್ಕೆ ಮುಂದಾಗಬೇಕು.
- ಗಂಗಾಧರ ಮಲ್ಲಿಕಾರ್ಜುನಪ್ಪ ನಂದಿ, ಸಾಹಿತಿ
-ಬಿ.ಕೆ. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

