ರಸ್ತೆಯಲ್ಲಿ ಗುಂಡಿ: ಪ್ರಯಾಣಿಕರ ಪರದಾಟ
ಶಿಗ್ಗಾಂವಿ: ತಾಲೂಕಿನ ತಡಸ ದುಂಡಿಸಿ ಹೊಸೂರು, ಹಾನಗಲ್ ರಸ್ತೆ ಉದ್ದಕ್ಕೂ ಆಳವಾದ ತಗ್ಗು ಗುಂಡಿಗಳಿಂದ ಹೊಂಡಗಳು ಬಿದ್ದಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ಕಷ್ಟವೆನಿಸಿದೆ. ಇದರಿಂದಾಗಿ ಸಾರಿಗೆ ವಾಹನ ಹಾಗೂ ದ್ವಿ-ಚಕ್ರ ವಾಹನಗಳ ಸವಾರರು ಹಿಡಿಶಾಪ ಹಾಕುತ್ತಿದ್ದು, ಸಾರಿಗೆ ವಾಹನದಲ್ಲಿ ಪ್ರಯಾಣ ಬೆಳೆಸುವರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವಂತಾಗಿದೆ.
ತಡಸ-ದುಂಡಶಿ ಹಾನಗಲ್ ರಸ್ತೆಯು ಈ ಮೊದಲು ಲೋಕೋಪಯೋಗಿ ಇಲಾಖೆಗೆ ಇತ್ತು ಮೇಲ್ದರ್ಜೆಗೇರಿಸಿ ರಾಜ್ಯ ಹೆದ್ದಾರಿ 1-2 ರಾಜ್ಯ ಹೆದ್ದಾರಿ ಮೇಲ್ದರ್ಜೀಕರಣ ಮಾಡಿದ್ದು, 2011ರ ಮೇ, 7ರಂದು ಕಾಮಗಾರಿಗೆ ಚಾಲನೆ ನೀಡಲಾಯಿತು.
ದುರಸ್ತಿ ಇಲ್ಲ: ದೇಶದಲ್ಲಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಹೆಚ್ಚುತ್ತಿದ್ದು, ಸುರಕ್ಷಿತ ಸಮಯಕ್ಕೆ ಸರಿಯಾಗಿ ಮುಟ್ಟುವ ಉದ್ದೇಶದಿಂದ ತಡಸ ಹಾನಗಲ್ ರಸ್ತೆಗಳ ರಾಜ್ಯ ಹೆದ್ದಾರಿ 1 ಹಾಗೂ 2 ಮೇಲ್ದರ್ಜೆಗೆರಿಸುವ ಸದುದುದ್ದೇಶದಿಂದ ರು. 128 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದನ್ನರಿತ ಈ ಭಾಗದ ಸಾರ್ವಜನಿಕರು ಒಳಗೊಳಗೆ ಖುಷಿ ಪಟ್ಟರು. ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆದು ಜಮೀನುಗಳ ತಂತಿಬೇಲಿಗಳನ್ನು ಕೂಡಾ ತೆರವುಗೊಳಿಸಿ ಇತ್ತ ರಸ್ತೆಯು ಆಗದೆ, ಇದ್ದ ರಸ್ತೆ ಕೂಡಾ ಹೊಂಡವಾಗಿ ಪರಿಣಮಿಸಿದೆ.
ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ: ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳುವ ಸರ್ಕಾರಗಳು, ಗ್ರಾಮೀಣ ಅಭಿವೃದ್ಧಿಗೆ ಪ್ರಮುಖವೆನಿಸುವ ರಸ್ತೆ ಅಭಿವೃದ್ಧಿ ನಿರ್ಲಕ್ಷ್ಯ ಮಾಡಿವೆ ಎನ್ನುವುದಕ್ಕೆ ಇಲ್ಲಿನ ರಸ್ತೆಯೇ ಸಾಕ್ಷಿಯಾಗಿದೆ. ಕನಿಷ್ಠ ಜನರು ಓಡಾಡಲು ಕಲ್ಲು-ಮಣ್ಣು ಹಾಕಿ ದುರಸ್ತಿಗೊಳಿಸುವ ಮನಸ್ಸು ಕೂಡಾ ರಾಜ್ಯ ಹೆದ್ದಾರಿ ಪ್ರಾಧಿಕಾರ ಮಾಡುತ್ತಿಲ್ಲ.
ಜಮೀನಿಗೆ ತೆರಳುವುದು ದುಸ್ತರ: ಗ್ರಾಮೀಣ ಪ್ರದೇಶದಲ್ಲಿ ತಾಲೂಕಿನ ಪ್ರತಿಯೊಂದು ರಸ್ತೆ ಅಭಿವೃದ್ಧಿಗೊಂಡಿವೆ ಎಂದು ಕಚೇರಿಯಲ್ಲಿ ಕುಳಿತು ಹೇಳುವ ಅಧಿಕಾರಿಗಳು ಒಮ್ಮೆ ರಸ್ತೆ ಮೇಲೆ ಸಂಚಾರ ಮಾಡಿ ನೋಡಲಿ ಎಷ್ಟೊಂದು ತ್ರಾಸದಾಯಕವಾಗುತ್ತದೆ ಎಂದು ಸಮಸ್ಯೆ ಹೇಳಿಕೊಳ್ಳುತ್ತಿರುವ ಸಾರ್ವಜನಿಕರು, ಗದ್ದೆಗಳಿಗೆ ತೆರಳಲು ತೀವ್ರ ತೊಂದರೆಯಾಗಿದೆ ಎನ್ನುತ್ತಾರೆ. ಜಿಟಿ ಜಿಟಿ ಮಳೆಗೆ ಹದಗೆಟ್ಟ ರಸ್ತೆಗಳು ಹೋದ ಭಾರಿ ಮಳೆಯಾದಲ್ಲಿ ಸಂಪೂರ್ಣ ಕಿತ್ತು ಹೋಗಿ ಓಡಾಡಲು ಬಾರದಂತ ಸ್ಥಿತಿಗೆ ಬರುವ ಮುನ್ಸೂಚನೆ ನೀಡುತ್ತಿವೆ. ಅಕ್ರಮ ಮರಳು, ಕಲ್ಲು ಹೊತ್ತುಕೊಂಡು ಕಳ್ಳ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಇದೇ ರಸ್ತೆ ಆಸರೆಯಾಗಿದೆ.
ವಾಹನಗಳ ದಟ್ಟಣೆಗೆ ಕಲ್ಲು-ಮಣ್ಣಿನ ರಸ್ತೆ ಕಿತ್ತು ಹೋಗಿದೆ. ದಾರಿ ಉದ್ದಕ್ಕೂ ಕೊಚ್ಚಿ ಹೋಗಿರುವ ರಸ್ತೆ ನೋಡಿದವರು ಇದೇನು ಎಂದು ಉತ್ತರಕಾಂಡ ಪ್ರವಾಹ ನೆನಪಿಸಿಕೊಂಡು ಇದು ಮಾಮೂಲು ಎಂದುಕೊಳ್ಳುತ್ತಿದ್ದಾರೆ. ನಿತ್ಯ ರಸ್ತೆ ಮೇಲೆ ಓಡಾಡಿ ಬೇಸತ್ತು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಗಣಿಗಾರಿಕೆ ವಾಹನಗಳ ಪ್ರಭಾವ: ತೊಂದರೆ ಅನುಭವಿಸುವರು ಸಾರ್ವಜನಿಕರು, ನಮಗೇನು? ಎಂಬಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಹ ಬೀಗುತ್ತಿರುವುದರಿಂದ ಗ್ರಾಮೀಣ ಜನರ ಸಮಸ್ಯೆಗಳಿಗೆ ಪರಿಹಾರ ಮರಿಚೀಕೆಯಾಗಿದೆ. ರಸ್ತೆ ಇಷ್ಟೊಂದು ಕೆಟ್ಟು ಹೋಗಲು ಕಾನೂನಿನ ಕಣ್ಣಿಗೆ ಮಣ್ಣೆರೆಚಿ ಎಗ್ಗಿಲ್ಲದೇ ನಡೆಯತ್ತಿರುವ ಕಲ್ಲು ಗಣಿಗಾರಿಕೆಯೇ ಕಾರಣ. ಚಹರೆ ಕಲ್ಲು ಗಣಿಗಾರಿಕೆಯಿಂದ ರಾತ್ರಿ ವೇಳೆ ಇಲ್ಲಿ ಓಡಾಡುವ ವಾಹನಗಳ ಸಂಖ್ಯೆ ಅಧಿಕ. ಹೆಚ್ಚು ತೂಕದ ಕಲ್ಲು ಹೊತ್ತುಕೊಂಡು ನಿತ್ಯ ಓಡಾಡುವುದರಿಂದ ರಸ್ತೆ ಆಳವಾದ ತಗ್ಗು ಕಂಡುಕೊಂಡು ಅಪಾಯಕ್ಕೆ ಆಹ್ವಾನಿಸುತ್ತಿದೆ. ಅನುಭವ ಇಲ್ಲದ ಚಾಲಕರ ಚಾಲನೆಯಿಂದ ರಸ್ತೆ ಅವ್ಯವಸ್ಥೆಗೆ ಕಾರಣವಾಗಿದೆ ಎನ್ನುತ್ತಾರೆ ಇಲ್ಲಿ ಗ್ರಾಮಸ್ಥರು.
ಚಾಲಕ, ನಿರ್ವಾಹಕರ ಅವಹೇಳನ: ಅಸ್ತವ್ಯಸ್ತವಿದ್ದ ಹಾಗೂ ನಿಯಂತ್ರಣವಿಲ್ಲದ ಸಾರಿಗೆ ಬಸ್, ದೊಡ್ಡದಾದ ತಗ್ಗುಗಳು, ಯಾವುದಕ್ಕೂ ಕೇರ್ ಮಾಡದ ಅಧಿಕಾರಿಗಳು ಇದನ್ನರಿತೂ ಸಮ್ಮನಿದ್ದು, ಸಾರಿಗೆ ವಾಹನದಲ್ಲಿ ಕುಳಿತು ಪ್ರಯಾಣಿಸುವವರು ಒಂದು ತಗ್ಗು ಪ್ರದೇಶಕ್ಕೆ ಚಕ್ರವೂ ಬಿದ್ದಾಗ ಮಾತ್ರ ಚಾಲಕ ಸಾರಾಯಿ ಕುಡಿದು ಚಾಲನೆ ಮಾಡುವಿರಾ ಎಂದು ನಿವಾಹಕರನ್ನು ಕೇಳುವಂತಾಗಿದೆ. ಸಾರಿಗೆ ಬಸ್ ಎಲ್ಲೆಂದರಲ್ಲಿ ತಿರುಗಿ ಸಾಗುವಂತಾಗಿದೆ. ಇದ್ದ ಬಸ್ಗಳನ್ನು ಸರಿಯಾಗಿ ದುರಸ್ತಿ ಮಾಡದೆ ಕಳುಹಿಸುವುದರಿಂದ ಪ್ರಯಾಣಿಕರ ಹತ್ತಿರ ಏನೆಂದರೂ ಸಹಿಸಿಕೊಳ್ಳುವಂತಾಗಿದೆ ಎಂದು ಸಾರಿಗೆ ಬಸ್ ಚಾಲಕ ಸುದ್ದಿಗಾರರಿಗೆ ವಿಷಯ ತಿಳಿಸಿದನು.
ರೈತರಿಗೆ ದೊರೆಯದ ಹಣ: ತಡಸ-ದುಂಡಶಿ ಹಾನಗಲ್ ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕು. ರಾಜ್ಯ ಹೆದ್ದಾರಿ 1-2 ಹೆದ್ದಾರಿ ಮೇಲ್ದರ್ಜೀಕರಣ ಕಾಮಗಾರಿ ನೆಪವೊಡ್ಡಿ ರಸ್ತೆ ಪಕ್ಕದ ಜಮೀನುಗಳ ತಂತಿ ಬೇಲಿಗಳನ್ನು ತೆಗೆದು ಹಾಕಿದ್ದಾರೆ. ರಸ್ತೆಯಲ್ಲಿದ್ದ ಕಸವನ್ನೆಲ್ಲ ಜೆಸಿಬಿ ಯಂತ್ರಗಳಿಂದ ಜಮೀನುಗಳಲ್ಲಿ ಹಾಕಿದ್ದಾರೆ. ತಮ್ಮ ಸುಪರ್ದಿಗೆ ತರಲು ಜಮೀನುಗಳ ಪಹಣಿ ಪತ್ರಿಕೆಯಲ್ಲಿ ಇಲಾಖೆ ಹೆಸರು ನಮೂದಿಸಿದ್ದಾರೆ. ಆದರೆ, ಎರಡು ವರ್ಷಗಳಾದರೂ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದಕ್ಕೆ ರೈತರಿಗೆ ಹಣ ನೀಡಿಲ್ಲ ಎಂದು ಭೂಮಿ ನೀಡಿದ ರೈತರು ದೂರಿದ್ದಾರೆ.
'ಇತ್ತ ಜಮೀನು ಹೋಯಿತು ಅತ್ತ ಸರ್ಕಾರ ದುಡ್ಡು ನೀಡಲಿಲ್ಲ. ಇದು ಎಂಥ ನ್ಯಾಯವಯ್ಯಾ ಅನ್ನುತ್ತೀರಾ...!' ಇನ್ನಾದರೂ ಸರ್ಕಾರ ಜಮೀನುಗಳನ್ನು ಕಳೆದುಕೊಂಡವರಿಗೆ ತಕ್ಷಣ ಪರಿಹಾರದ ಹಣ ನೀಡಬೇಕು. ಬೇಲಿಗಳನ್ನು ಜಮೀನುಗಳಲ್ಲಿ ಜೆಸಿಬಿಯಿಂದ ದೂಡಿದ್ದನ್ನು ತಕ್ಷಣ ತೆರವುಗೊಳಿಸಬೇಕು. ತಂತಿ ಬೇಲಿ ಹಾಗೂ ಕಟ್ಟಡಗಳ ಪರಿಹಾರವನ್ನು ತಕ್ಷಣ ನೀಡಿ ಸುಗಮ ಪ್ರಯಾಣಿಸುವಂತಾಗಲಿ. ಇಲ್ಲದಿದ್ದರೆ ಈ ಭಾಗದ ರೈತರೆಲ್ಲರೂ ಸೇರಿ ಪ್ರತಿಭಟನೆಗೆ ಮುಂದಾಗುವ ಮೊದಲೆ ಸಮಸ್ಯೆಗಳನ್ನು ಪರಿಹಾರವಾಗುವುದೇ ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

