ಹಾವೇರಿ

ಭೂಸ್ವಾಧೀನ ತಿಳಿವಳಿಕೆ ನೋಟಿಸ್: ಪ್ರತಿಭಟನೆ

Published On :

ಹಿರೇಕೆರೂರು: ತಾಲೂಕಿನ ಚನ್ನಳ್ಳಿ ಗ್ರಾಮದ ಬಳಿ ಇರುವ ರೈತರ ಬೆಲೆ ಬಾಳುವ ಜಮೀನನ್ನು ಕರ್ನಾಟಕ ಗೃಹ ಮಂಡಳಿಯವರು ಭೂ ಸ್ವಾಧೀನಪಡಿಸಿಕೊಳ್ಳಲು ತಿಳಿವಳಿಕೆ ನೋಟಿಸ್ ನೀಡಿರುವುದನ್ನು ಖಂಡಿಸಿ ನೊಂದ ರೈತರು ಸೋಮವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಗುಡ್ಡಪ್ಪ ಮೌರಿಯವರ ಮಾತನಾಡಿ, ಕರ್ನಾಟಕ ಗೃಹ ಮಂಡಳಿಯವರು ಚನ್ನಳ್ಳಿ ಗ್ರಾಮದ ಬಳಿಯಿರುವ ಸುಮಾರು 53 ಎಕರೆ ಜಮೀನು ಭೂಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಕೃಷಿ ನಂಬಿ ಜೀವನ ಸಾಗಿಸುತ್ತಿದ್ದೇವೆ. ಇಲ್ಲಿರುವ ಜಮೀನು ಹೊರತುಪಡಿಸಿದರೆ ಬಹುತೇಕ ರೈತರು ಬೇರೆಲ್ಲೂ ಜಮೀನು ಹೊಂದಿಲ್ಲ. ಕೃಷಿ ಭೂಮಿಯನ್ನೆ ನಂಬಿ ಜೀವನ ಮಾಡುತ್ತಿದ್ದೇವೆ. ಜೀವನಾಧಾರಕ್ಕೆ ಕೃಷಿಯೇ ಜೀವಾಳವಾಗಿದ್ದು, ಕೃಷಿ ಜಮೀನು ಕಸಿದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದರು.
ಆಕ್ರೋಶ: ಜಮೀನು ಸ್ವಾಧೀನ ಖಂಡಿಸಿ ಈಗಾಗಲೆ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದೇವೆ. ಭೂಮಿ ನೀಡುವುದಿಲ್ಲ ಎಂದು ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಗೆ ತಕರಾರು ಅರ್ಜಿ ಕೊಟ್ಟಿದ್ದೇವೆ. ಆದರೂ ಅಧಿಕಾರಿಗಳು ನಮ್ಮ ಒಪ್ಪಿಗೆ ಇಲ್ಲದೆ ಕರ್ನಾಟಕ ಗೃಹ ಮಂಡಳಿಯವರು ನಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಧೀನ ಪ್ರಕ್ರಿಯೆ ಕೈಬಿಡಿ: ನಮ್ಮ ಒಪ್ಪಿಗೆ ಇಲ್ಲದಿದ್ದರೂ ಹಠಮಾಡಿ ನಮ್ಮ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಳ್ಳಲು ಮೂರನೆ ಬಾರಿಗೆ ತಿಳಿವಳಿಕೆ ನೋಟಿಸ್ ನೀಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರ ಒಪ್ಪಿಗೆ ಇಲ್ಲದೆ ಭೂಸ್ವಾಧೀನಪಡಿಸಿಕೊಳ್ಳಲು ಮುಂದಾದರೆ ನಾವು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು. ಅಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಒತ್ತಾಯಿಸಿದರು.
ಮನವಿ: ತಹಸೀಲ್ದಾರ್ ಕಚೇರಿ ಬಳಿ ನೊಂದ ರೈತರು ಕೆಲಹೊತ್ತು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಹನುಮಂತಪ್ಪ ಬಡದಾಳೆ ಮೂಲಕ ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ಗೃಹ ಮಂಡಳಿ ವಿಶೇಷ ಭೂಸ್ವಾಧೀನಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ರೈತರಾದ ವಿಠ್ಠಲರಾವ್ ಮೋಹಿತೆ, ಎಚ್.ಸಿ. ನಾಗರಾಜ, ರಾಮಣ್ಣ ತಡಸನಹಳ್ಳಿ, ಸುರೇಶ ಕನ್ನಕ್ಕನವರ, ಪ್ರಕಾಶ ಮೋಹಿತೆ, ಮುರುಳೀಧರ ಮಾಜ್ರೆಕರ್, ವೀರಭದ್ರಪ್ಪ ಹಳಕಟ್ಟಿ, ಶೋಭಾ ಹಳಕಟ್ಟಿ, ಸಿದ್ದಲಿಂಗಪ್ಪ ಹಳಕಟ್ಟಿ, ಶಾರದಮ್ಮ ಹಳಕಟ್ಟಿ, ಲೀಲಾವತಿ ಹಳ್ಳೂರ, ಬಿ.ಎಂ. ಮಾಳಮ್ಮನವರ, ಶಿವಯೋಗೆಪ್ಪ ಹಳಕಟ್ಟಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.