ಹಾವೇರಿ

ನದಿಗೆ ಕಲುಷಿತ ನೀರು: ಪ್ರತಿಭಟನೆ

Published On :

ರಾಣಿಬೆನ್ನೂರು: ತಾಲೂಕಿನ ತರೇದಹಳ್ಳಿ ಗ್ರಾಮದ ಹತ್ತಿರವಿರುವ ವೆಂಕಟೇಶ್ವರ ಚಿಕನ್ ಪ್ಯಾಕ್ಟರಿಯಿಂದ ತುಂಗಭದ್ರಾ ನದಿಗೆ ಬಿಡುತ್ತಿರುವ ವಿಷಮುಕ್ತ ತ್ಯಾಜ್ಯ ನೀರನ್ನು ನದಿಗೆ ಸೇರಿಸಬಾರದು ಹಾಗೂ ಪರಿಸರ ಹಾನಿ ನಿಯಂತ್ರಿಸಲು ಪರ್ಯಾಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಂಪನಿ ಸುತ್ತಲಿನ ಗ್ರಾಮಗಳ ಸಾರ್ವಜನಿಕರು ತಾಲೂಕು ರೈತ ಸಂಘದ ನೇತೃತ್ವದಲ್ಲಿ ಬುಧವಾರ ಕಂಪನಿ ಎದುರು ಪ್ರತಿಭಟಿಸಿದರು.
ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಕಂಪನಿ ಎದುರು ಸೇರಿದ್ದ ತರೇದಹಳ್ಳಿ, ಕೃಷ್ಣಾಪುರ, ಹನುಮನಹಳ್ಳಿ, ಮಲಕನಹಳ್ಳಿ, ಹೊಳಿಆನ್ವೇರಿ, ಚಳಗೇರಿ ಗ್ರಾಮದ ಸಾರ್ವಜನಿಕರು ವೆಂಕಟೇಶ್ವರ ಹ್ಯಾಚರಿಸ್ ಚಿಕನ್ ಕಂಪನಿಯಿಂದ ಹೊರಸೂಸುವ ಕಲುಷಿತ ವಸ್ತುಗಳಿಂದ ಸಾರ್ವಜನಿಕರಿಗೆ ಹಾನಿಯುಂಟಾಗುತ್ತದೆ ಎಂದು ದೂರಿದರು.
ಆಡಳಿತ ಮಂಡಳಿ ವಿರುದ್ಧ ಆಕ್ರೋಶ: ಚಿಕನ್ ಫ್ಯಾಕ್ಟರಿಯಿಂದ ವಾಯು ಮಾಲಿನ್ಯ ಹಾಗೂ ಕಂಪನಿಯಿಂದ ನದಿಗೆ ಸೇರಿಸುವ ವಿಷಮುಕ್ತ ನೀರಿನಿಂದ ನಿತ್ಯ ತೊಂದರೆ ಅನುಭವಿಸುತ್ತಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿ, ಕಂಪನಿಯ ಆಡಳಿತ ಮಂಡಳಿ ಮತ್ತು ಕಂಪನಿ ಪ್ರಾರಂಭಿಸಲು ಅನುಮತಿ ನೀಡಿದ್ದ ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ತಾಲೂಕು ರೈತ ಸಂಘದ ಅಧ್ಯಕ್ಷ ಸುರೇಶಪ್ಪ ಗರಡಿಮನಿ ಮಾತನಾಡಿ, ಸುತ್ತಲಿನ ಗ್ರಾಮಗಳ ಸಾರ್ವಜನಿಕರಿಗೆ ಹಾಗೂ ರೈತರ ಹೊಲಗಳಲ್ಲಿ ಬೆಳೆದ ರೇಷ್ಮೆ, ಜೋಳ ಸೇರಿದಂತೆ ತರಕಾರಿ ಬೇಳೆಗಳನ್ನು ಹಾಗೂ ಪರಿಸರವನ್ನು ಹಾಳು ಮಾಡುವ ಕೈಗಾರಿಕೆಯನ್ನು ಕಟ್ಟಲು ಮುಂದಾಗಿರುವ ಮಾಲೀಕರಿಗೆ ಜಾಗೆ ಖರೀದಿಸಲು ಮತ್ತು ಕೈಗಾರಿಕೆ ಕಟ್ಟಲು ಅನುಮತಿ ನೀಡಬಾರದೆಂದು ಆಗ್ರಹಿಸಿ ತಾಲೂಕು ರೈತ ಸಂಘ 3 ವರ್ಷಗಳ ಹಿಂದೆಯೇ ವಿವಿಧ ರೀತಿಯ ಹೋರಾಟಗಳನ್ನು ನಡೆಸಿ ಸರ್ಕಾರಕ್ಕೆ ಅನೇಕ ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದ್ದರೂ ಆಗಿನ ಸಮಯದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿ ಸರ್ಕಾರ ಈ ಜಾಗೆ ಖರೀದಿಸಿ ಕಂಪನಿ ಕಟ್ಟಲು ಅನುಮತಿ ನೀಡಿದ್ದು ಅಸಂಬದ್ಧ ಕಾರ್ಯವಾಗಿದ್ದು, ಇದರಿಂದಾಗಿ ನಿತ್ಯ ಸಾವಿರಾರು ಜನ ರೈತರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಲು ಬಿಜೆಪಿ ಸರ್ಕಾರ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರ ಕೈವಾಡ: ವೆಂಕಟೇಶ್ವರ ಹ್ಯಾಚರಿಸ್ ಚಿಕನ್ ಕಂಪನಿಯ ಆಡಳಿತ ಮಂಡಳಿ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ಗುರುತಿಸಿಕೊಂಡಿದ್ದ ಮುಖಂಡರು ಒಂದಾಗಿ ಕೋಟ್ಯಂತರ ರು ಬೆಲೆ ಬಾಳುವ ರೈತರ ಜಮಿನನ್ನು ಕಡಿಮೆ ಬೆಲೆಗೆ ಖರೀದಿಸಿ ರೈತರಿಗೂ ಮೋಸವೇಸಗಿದ್ದಾರೆ. ಕಂಪನಿ ಕಟ್ಟಬಾರದೆಂದು ರೈತ ಸಂಘದವರು ಹೋರಾಟ ನಡೆಸಿದ್ದ ಸಮಯ ಹೋರಾಟದಲ್ಲಿ ನಿರತರಾಗಿದ್ದ ರೈತ ಮುಖಂಡರಾದ ರವೀಂದ್ರಗೌಡ ಎಫ್ ಪಾಟೀಲ, ಬಸವರಾಜ ಓಲೇಕಾರ, ಚಂದ್ರಪ್ಪ ಬೇಡರ ಇತರರ ಮೇಲೆ ಬಿಜೆಪಿ ಮುಖಂಡರು ಇಲ್ಲಸಲ್ಲದ ಆರೋಪಗಳನ್ನು ಹೇರಿ ಸರ್ಕಾರದ ಕಣ್ಣಿಗೆ ಮಣ್ಣನ್ನೇರಚಿ ಜಾಗೆ ಖರೀದಿಸಲು ಮತ್ತು ಕಂಪನಿ ಕಟ್ಟಲು ತುಂಗಭದ್ರಾ ನದಿಯಿಂದ ಕಂಪನಿಗೆ ಶುದ್ಧ ನೀರು ಪಡೆಯಲು ಹೊಂಚು ಹಾಕಿದ್ದರು.
ಕ್ರಮಕ್ಕೆ ಆಗ್ರಹ: ಕಂಪನಿಯಿಂದ ಹೊರಬರುವ ವಿಷಮುಕ್ತ ನೀರು ಪೈಪ್‌ಲೈನ್ ಮೂಲಕ ಮರಳಿ ನದಿಗೆ ಸೇರಿಸಲು ರೈತರ ಜಮೀನಿನಲ್ಲಿ ಪೈಪ್‌ಲೈನ್ ಅಳವಡಿಸಲು ಅನುಮತಿ ನೀಡಲು ಬಿಜೆಪಿ ಸರ್ಕಾರದಲ್ಲಿ ಗುರುತಿಸಿಕೊಂಡಿದ್ದ ಮುಖಂಡರೆ ಕಾರಣವಾಗಿದ್ದಾರೆ. ನಿತ್ಯ ಸಾವಿರಾರು ಜನರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಾ ಜೀವನ ಸಾಗಿಸಲು ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಸುರೇಶಪ್ಪ ಗರಡಿಮನಿ ಆಗ್ರಹಿಸಿದರು.
ರೈತ ಸಂಘದ ರಾಜ್ಯ ಸಂಚಾಲಕ ರವೀಂದ್ರಗೌಡ ಎಫ್. ಪಾಟೀಲ ಮಾತನಾಡಿದರು. ತಾಲೂಕು ರೈತ ಸಂಘ ಪ್ರಧಾನ ಕಾರ್ಯದರ್ಶಿ ಬಸವರಾಜ ಓಲೇಕಾರ, ತುಂಗಭದ್ರಾ ಪರಿಸರ ಮಾಲಿನ್ಯ ನಿಯಂತ್ರಣ ಸಮಿತಿ ಅಧ್ಯಕ್ಷ ಚಂದ್ರಪ್ಪ ಬೇಡರ, ಮಹಿಳಾ ಮುಖಂಡರಾದ ಕರಬಸವ್ವ ಕೋರೇರ, ಜಯಣ್ಣ ಮಾಗನೂರು, ಶಿವಪ್ಪ ಜಾಲಣ್ಣನವರ, ಹರಿಹರಗೌಡ ಪಾಟೀಲ ಮಾತನಾಡಿದರು.
ಮನವಿ ಸ್ವಿಕರಿಸಿದ ತಹಸೀಲ್ದಾರ್ ಕೆ.ಎಚ್. ಶಿವಕುಮಾರ ಮಾತನಾಡಿ, ಸಾರ್ವಜನಿಕರ, ರೈತರ ಆರೋಗ್ಯಕ್ಕೆ ಧಕ್ಕೆಯನ್ನುಂಟು ಮಾಡುವ ರೀತಿಯಲ್ಲಿ ಪರಿಸರ ಮಾಲಿನ್ಯವನ್ನುಂಟು ಮಾಡುತ್ತಿರುವ ಕೈಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದಕ್ಕೆ ಸರಿದರು. ತಾಲೂಕು ಕೈಗಾರಿಕಾ ಅಧಿಕಾರಿಗಳು, ಕಾರ್ಮಿಕ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ಮುನ್ನೇಚ್ಚರಿಕೆ ಕ್ರಮವಾಗಿ ಬಂದೋಬಸ್ತ್ ಏರ್ಪಡಿಸಿದ್ದರು. ಕಂಪನಿ ಸುತ್ತಲಿನ ಗ್ರಾಮಗಳ ಸಾವಿರಾರು ಜನರು ಪ್ರತಿಭಟನೆಯಲ್ಲಿ  ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.