ಹಾವೇರಿ

ಜನಮನ ಸೂರೆಗೊಂಡ ಪ್ರತಿಭಾ ಕಾರಂಜಿ

Published On :

ಹಾವೇರಿ: ಹಿರೇಲಿಂಗದಹಳ್ಳಿ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಜರುಗಿದ ಕುರುಬಗೊಂಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಜನಮನ ಸೂರೆಗೊಳಿಸಿತು. ಕುರುಬಗೊಂಡ ಗ್ರಾಪಂ ಅಧ್ಯಕ್ಷ ಎಲ್.ಎಸ್. ಪಾಟೀಲ  ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಭಾ ಕಾರಂಜಿ ಮಕ್ಕಳ ಸುಪ್ತ ಪ್ರತಿಭೆ ಬೆಳಗಲು, ಮನೋವಿಕಾಸಕ್ಕೆ ಉತ್ತಮ ವೇದಿಕೆ ಎಂದರು. ಸಿಆರ್‌ಪಿ ಕೆ.ಆರ್. ಹಿರೇಮಠ ಮಾತನಾಡಿ, ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹಾಕುವುದರ ಜತೆಗೆ ಆತ್ಮಸ್ಥೈರ್ಯ, ಸಹನೆ, ಸಹಬಾಳ್ವೆ, ಸ್ಪರ್ಧಾ ಮನೋಭಾವ ಬೆಳೆಸುತ್ತದೆ ಎಂದರು.
ನಿವೃತ್ತ ಶಿಕ್ಷಕ ಶಿವಪ್ಪ ಬೆಳಲದವರನ್ನು ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸನ್ಮಾನಿಸಿದರು. ಅತಿಥಿಗಳಾಗಿ ವಿ.ಬಿ. ಲಿಂಗಮ್ಮನವರ, ಶಿಕ್ಷಣ ಸಂಯೋಜಕ ಸಿ.ಎಸ್. ಸನದಿ, ಗ್ರಾಪಂ ಸದಸ್ಯರು ಮತ್ತು ಎಸ್‌ಡಿಎಂಸಿ ಸದಸ್ಯರು ಇದ್ದರು. ಎಸ್‌ಡಿಎಂಸಿ ಅಧ್ಯಕ್ಷ ಸಂಕಪ್ಪ ಬೆನಕನಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಎಸ್.ಎಚ್. ರಾಠೋಡ ಸ್ವಾಗತಿಸಿದರು. ಎಸ್.ಎಂ. ಶ್ಯಾಡಗುಪ್ಪಿ ನಿರೂಪಿಸಿದರು. ಎಸ್.ಎಂ.ಬಡಿಗೇರ ವಂದಿಸಿದರು.
ಸಾಮಾಜಿಕ ಸಾಮರಸ್ಯಕ್ಕೆ ಪರದಾಟ: ಉದಾಸಿ
ಹಾನಗಲ್ಲ: ವೈಚಾರಿಕ ಶ್ರೀಮಂತಿಕೆಯುಳ್ಳ ನಮಗೆ ಆರ್ಥಿಕ ಸಬಲತೆಯೂ ಬಂದಿದೆ. ಹಣದ ಬೆನ್ನತ್ತಿ ಮೌಲ್ಯ ಕಳೆದುಕೊಳ್ಳಬಾರದು. ಸಾಮಾಜಿಕ ಸಾಮರಸ್ಯಕ್ಕಾಗಿ ನಿತ್ಯ ನಮ್ಮಲ್ಲೇ ಪರದಾಡುವ ಸ್ಥಿತಿ ಬಂದಿದೆ. ನಮ್ಮೊಳಗೆ ಸಾಂಸ್ಕೃತಿಕ ಮನಸ್ಸನ್ನು ಜಾಗ್ರತಗೊಳಿಸಿದರೆ ಸಾಮರಸ್ಯದ ಬದುಕು ಸಾಧ್ಯ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಹೇಳಿದರು. ಅಕ್ಕಿಆಲೂರಿನ ಸ್ನೇಹಜೀವಿ ಯು. ತಮ್ಮಯ್ಯ ಅಡಿಗ ವೇದಿಕೆಯಲ್ಲಿ ದುಂಡಿಬಸವೇಶ್ವರ ಜನಪದ ಕಲಾ ಸಂಘ ಕನ್ನಡ ನುಡಿ ಸಂಭ್ರಮ-23ರಲ್ಲಿ ಅವರು ಮಾತನಾಡಿದರು. ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಭಾಷೆ-ಸಂಸ್ಕೃತಿ ಮಾರುಕಟ್ಟೆಯ ವಸ್ತುವಾಗುವುದು ಬೇಡ. ಮನುಷ್ಯ, ಮನಸ್ಸು ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದರು.
ಬಸವಚೇತನ ಪ್ರಶಸ್ತಿ: ಬೆಂಗಳೂರಿನ ವಿಧಾನಸೌಧದ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ವಿಶ್ವನಾಥ ಹಿರೇಮಠರಿಗೆ 'ಬಸವಚೇತನ' ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜೇಶ್ವರಿ ಸಾರಂಗಿಮಠ ಅವರ 'ಹೆಣ್ಣು ಹೃದಯ' ಕಾದಂಬರಿ ಬಿಡುಗಡೆ ಆಯಿತು. ದುಂಡಿ ಬಸವೇಶ್ವರ ಜನಪದ ಕಲಾ ಸಂಘದ ಅಧ್ಯಕ್ಷ ಬಸವರಾಜ ಕೋರಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ, ತಹಸೀಲ್ದಾರ್ ಡಾ೤ ನಾಗೇಂದ್ರ ಹೊನ್ನಳ್ಳಿ, ಲೋಕೋಪಯೋಗಿ ಇಲಾಖೆ ಅಭಿಯಂತ ಬಿ.ವೈ. ಬಂಡಿವಡ್ಡರ, ಗಣ್ಯರಾದ ಚಿನ್ನಪ್ಪಜ್ಜ ಕಾಕಡೆ, ಶಿವಕುಮಾರ ದೇಶಮುಖ, ನಿರ್ಮಲಾ ಉಪ್ಪಿನ ಇದ್ದರು. ಅರ್ಬನ್ ಬ್ಯಾಂಕ್ ಅಧ್ಯಕ್ಷ ನಾಗರಾಜ ಪಾವಲಿ ಸ್ವಾಗತಿಸಿದರು. ದುಂಡಿಬಸವೇಶ್ವರ ಜನಪದ ಕಲಾ ಸಂಘದ ಕಾರ್ಯದರ್ಶಿ ಷಣ್ಮುಖಪ್ಪ ಮುಚ್ಚಂಡಿ ಆಶಯನುಡಿ ಆಡಿದರು. ಡಾ೤ ಮಲ್ಲಿಕಾರ್ಜುನ ಕಡ್ಡಿಪುಡಿ, ವಿಷ್ಣು ಪಟಗಾರ, ಜ್ಯೋತಿ ಬಿ.ಎಂ. ನಿರೂಪಿಸಿದರು. ಬಿ.ಎಂ. ಅರಳೇಶ್ವರ ವಂದಿಸಿದರು.
ವಿದ್ಯಾರ್ಥಿಗಳಿಂದ ಏಡ್ಸ್ ಜಾಗೃತಿ ಜಾಥಾ
ರಾಣಿಬೆನ್ನೂರು: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಮಾರುತಿ ನಗರದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ಸಯೋಗದಲ್ಲಿ ವಿದ್ಯಾರ್ಥಿಗಳು ಜಾಥಾ ನಡೆಸಿ, ಜಾಗೃತಿ ಮೂಡಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಶೇಕಪ್ಪ ಹೊಸಗೌಡ್ರ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾದ ಬಳಿಕ ಮಿನಿ ವಿಧಾನಸೌಧದ ಎದುರು ಹಾಗೂ ಯರೆಕುಪ್ಪಿ ರಸ್ತೆಯಲ್ಲಿರುವ ತುಂಗಾಜಲ ಚೌಡೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ಕಾರ್ಯಕ್ರಮಗಳು ನಡೆದವು. ನಗರದ ಸಾರ್ವಜನಿಕ ಆಸ್ಪತ್ರೆಯ ಏಡ್ಸ್ ನಿಯಂತ್ರಣ ವಿಭಾಗದ ಆಪ್ತ ಸಮಾಲೋಚಕ ಮಾರುತಿ ಭಜಂತ್ರಿ ಮಾತನಾಡಿ, ವಿದ್ಯಾರ್ಥಿಗಳು ಸ್ವಚ್ಛತೆಗೆ ಹೆಚ್ಚು ಗಮನ ಕೋಡಬೇಕು. ಉತ್ತಮ ಆಹಾರ ಸೇವಿಸಬೇಕು. ಸ್ವೇಚ್ಛಾಚಾರ ತಡೆಗಟ್ಟಿದರೆ ಮಾತ್ರ ಏಡ್ಸ್ ನಿಯಂತ್ರಣ ಸಾಧ್ಯ ಎಂದು ತಿಳಿಸಿದರು.
ರಾಮನಗೌಡ ಆರ್.ಎಸ್. ಮಾತನಾಡಿದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಎಚ್.ಎಂ. ದೊಡ್ಡಬಿಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಟಿ. ಪ್ರಕಾಶ ಸ್ವಾಗತಿಸಿದರು. ಪ್ರಾಚಾರ್ಯೆ ಲೀಲಾವತಿ ಬುಕ್ಕಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಜಿ.ಬಿ. ಬೆಳವಿಗಿ, ಎನ್.ಬಿ. ಹಕ್ಕೆರ, ಡಿ. ಬಸವರಾಜಪ್ಪ, ವಿಜಯಕುಮಾರ ಇದ್ದರು.
ಶಿಗ್ಗಾಂವಿಯಲ್ಲಿ ತ್ಯಾಜ್ಯದಿಂದ ತೊಂದರೆ: ಹೋರಾಟ ಸಮಿತಿ ಮನವಿ
ಶಿಗ್ಗಾಂವಿ: ಪುರಸಭೆಯಿಂದ ಬರುವ ದಿನನಿತ್ಯದ ತ್ಯಾಜ್ಯ ಹಾಗೂ ಸತ್ತ ಪ್ರಾಣಿಗಳನ್ನು ಕಲ್ಯಾಣ ಹಾಗೂ ಖುರ್ಷಾಪುರ ಗ್ರಾಮಗಳ ಮಧ್ಯೆ ಇರುವ ಸರ್ಕಾರಿ ಗುಡ್ಡದಲ್ಲಿ ಚೆಲ್ಲುತ್ತಿದ್ದು, ರೈತರ ನಿತ್ಯದ ಚಟುವಟಿಕೆಗೆ ತೊಂದರೆಯಾಗುತ್ತಿದೆ ಎಂದು ಅನ್ನದಾತ ರೈತ ಹೋರಾಟ ಸಮಿತಿ ಸದಸ್ಯರು ಶಿಗ್ಗಾಂವಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ರೈತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಮಿತಿ ಪ್ರಧಾನ ಕಾರ್ಯದರ್ಶಿ ನವೀನ ಸವಣೂರು, ಕೊಳೆತ ತ್ಯಾಜ್ಯ ಹಾಗೂ ಸತ್ತ ಪ್ರಾಣಿಗಳನ್ನು ಎಲ್ಲೆಂದರಲ್ಲಿ ಹಾಕುತ್ತಿರುವುದರಿಂದ ದುರ್ವಾಸನೆಗೆ ಸುತ್ತಲಿನ ಜಮೀನುಗಳಲ್ಲಿ ರೈತರು ವ್ಯವಸಾಯ ಮಾಡುವುದು ಕಷ್ಟವಾಗುತ್ತಿದೆ. ಕೃಷಿ ಉತ್ಪನ್ನಗಳನ್ನು ಕೊಯ್ಲು ಮಾಡಿಕೊಳ್ಳಲು ಪರದಾಡುವಂತಾಗಿದೆ. ಕಸ ಹಾಕುವ ಜಾಗದ ಪಕ್ಕದಲ್ಲಿಯೆ ದನಕರುಗಳಿಗೆ ಕುಡಿಯುವ ನೀರಿನ ಕೆರೆಯಿದ್ದು, ತ್ಯಾಜ್ಯ ವಸ್ತುವಿನ ಮಾಲಿನ್ಯವೂ ಸೇರಿ ನೀರು ಕಲುಷಿತವಾಗುತ್ತಿದೆ. ದನಕರುಗಳು ಗುಡ್ಡದಲ್ಲಿ ಮೇಯುವುದರಿಂದ ದನಕರುಗಳು ರೋಗಕ್ಕೆ ತುತ್ತಾಗಿ ಸಾವನ್ನಪ್ಪುತ್ತಿವೆ. ಈ ಪ್ರದೇಶದ ವಾಸನೆ ಪಕ್ಕದ ಗ್ರಾಮಗಳಿಗೆ ಹರಡಿ ಜನರು ಜೀವನ ಸಾಗಿಸಲು ದುಸ್ತರವಾಗಿದೆ. ಪುರಸಭೆ ಎಂಟು ದಿನಗಳ ಒಳಗಾಗಿ ಕಸ ಹಾಕುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ರೈತ ಸಮಿತಿ ವತಿಯಿಂದ ಪುರಸಭೆ ಮುಂಭಾಗದಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ತಾಲೂಕಿನ ಅನ್ನದಾತ ರೈತ ಹೋರಾಟ ಸಮಿತಿ ಅಧ್ಯಕ್ಷ ಗಂಗಾಧರ ಗಡ್ಡೆ, ರಮೇಶ ಬೇಡಕಿ, ಬೂದಪ್ಪ ಬೂದಿಹಾಳ, ಮುತ್ತಪ್ಪ ದೊಡ್ಡಮನಿ, ರಾಜಣ್ಣ ಕುಲಕರ್ಣಿ, ಚನ್ನಪ್ಪ ಕೋರಿ, ಶಂಕ್ರಣ್ಣ ಮೂಡಣ್ಣವರ, ಚನ್ನಪ್ಪ ಗಾಣಿಗೇರ ಇದ್ದರು.
ವಾಲ್ಮೀಕಿ ಮನುಕುಲದ ಮಾರ್ಗದರ್ಶಿ: ಬಣಕಾರ
ಹಿರೇಕೆರೂರು: ಮಹರ್ಷಿ ವಾಲ್ಮೀಕಿ ಮನುಕುಲದ ಮಾರ್ಗದರ್ಶಿ. ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳುವ ಮೂಲಕ ಅಂಹಿಸಾತ್ಮಕ ಸಮಾಜ ನಿರ್ಮಾಣ ಸಾಧ್ಯ. ಅವರು ರಚಿಸಿದ ರಾಮಾಯಣ ಗ್ರಂಥ ಸಾರ್ವಕಾಲಿಕ ಸತ್ಯ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು. ಕಚವಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಮಹಿಳಾ ಸಂಘ ಉದ್ಘಾಟಿಸಿ,  ಮಾನವ ಸಂಘಜೀವಿ. ಕೂಡಿ ಬಾಳುವುದೇ ಗುರಿ. ಮಹಿಳೆಯರು ಸಂಘಟಿತರಾಗಿ, ಅರ್ಥಿಕವಾಗಿ ಸಬಲರಾಗಬೇಕು ಎಂದರು. ತಾಪಂ ಇಒ ಡಿ.ಎಂ. ಜನವಾಡ, ಮೂಕಪ್ಪ ಬ್ಯಾಗವಾದಿ, ಚಂದ್ರಗೌಡ ಹಳ್ಳೂರ, ಶಿವಲಿಂಗಪ್ಪಗೌಡ ಪಾಟೀಲ, ರೇಣುಕಾ ಬಾರ್ಕಿ, ಪ್ರಮಿಲಾ ಬಿಷ್ಠಣ್ಣನವರ, ಸಿದ್ದಪ್ಪ ಹಂಪಣ್ಣನವರ, ಬಸಲಿಂಗಪ್ಪ ಗೌಡ್ರ, ಮುತ್ತು ಪಾಟೀಲ, ದಾದಾಪೀರ ರಾಣಿಬೆನ್ನೂರ, ಮಲ್ಲಿಕಾರ್ಜುನ ದೊಡ್ಡಬಸಣ್ಣನವರ, ರೇಖಾ ಬಾರ್ಕಿ, ಸಿದ್ದಪ್ಪ ಕೊಪ್ಪದಾಳ, ಈಶಪ್ಪ ಹಂಪಣ್ಣನವರ, ವೀರೇಶ ಕೋರಿಶೆಟ್ಟರ ಇದ್ದರು.
ಇಂದು, ನಾಳೆ, ಹಿಂದಿ ನಾಟಕ ಪ್ರದರ್ಶನ
ಹಾನಗಲ್ಲ: ಸಾಣೆಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸ್ಥಾಪಿಸಿದ ಶಿವಕುಮಾರ ಕಲಾತಂಡದಿಂದ ಹಾನಗಲ್ಲಿನ ಕುಮಾರೇಶ್ವರ ಬಯಲು ರಂಗ ಮಂದಿರದಲ್ಲಿ ಡಿ. 3 ಹಾಗೂ 4ರಂದು ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ. ಶಿವದೇಶ ಸಂಚಾರ ಅಭಿಯಾನ 2013 ನಾಟಕ ತಂಡ ಡಿ. 3ರಂದು ಹಾನಗಲ್ಲಿಗೆ ಆಗಮಿಸಲಿದ್ದು, ಸಂಜೆ 7ಕ್ಕೆ ಮೈ ಬಾವರಿ ಚೆನ್ನಾಕಿ ಹಾಗೂ ಡಿ. 4ರಂದು ಸಂಜೆ ಮರಣ ಹೀ ಮಹಾನವಮಿ ಹಿಂದಿ ಭಾಷಾ ನಾಟಕಗಳನ್ನು ಪ್ರದರ್ಶಿಸಲಿದೆ ಎಂದು ಸಂಚಾಲಕ ಕಲ್ಯಾಣಕುಮಾರ ಶೆಟ್ಟರ ತಿಳಿಸಿದ್ದಾರೆ.
ನಾಳೆ ವಿದ್ಯುತ್ ವ್ಯತ್ಯಯ
ಹಾವೇರಿ: ಸವಣೂರಿನ 110, 33 ಹಾಗೂ 11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ. 4ರಂದು ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಈ ಕೇಂದ್ರದಿಂದ ಹೊರ ಹೋಗುವ ಎಲ್ಲ ಫೀಡರ್‌ಗಳಿಗೆ ಸಂಬಂಧಿಸಿದ ಸವಣೂರು ಪಟ್ಟಣ, ಶಿರಬಡಗಿ, ಯಲವಿಗಿ, ಜಲ್ಲಾಪುರ, ಕಾರಡಗಿ, ಚಿಲ್ಲೂರ ಬಡ್ನಿ, ತೆಗ್ಗಿಹಳ್ಳಿ, ಹುರಳಿಕುಪ್ಪಿ, ಕಳಸೂರು, ತೊಂಡೂರು ಮತ್ತು ಕುರುಬರಮಲ್ಲೂರು ಗ್ರಾಮಗಳಿಗೆ ಅಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಹಾವೇರಿ ವಿಭಾಗದ ಸಹಾಯಕ ಕಾ.ನಿ. ಅಭಿಯಂತ ಓ.ಎಸ್. ಶಶಿಧರ ವಿನಂತಿಸಿದ್ದಾರೆ.
ಓಲಿಂಪಿಯಾಡ್‌ಗೆ ಆಯ್ಕೆ
ಹಾನಗಲ್ಲ: ತಾಲೂಕಿನ ಮಹಾರಾಜಪೇಟೆ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಸಂಗಮೇಶ ಬಂಕಾಪುರಮಠ ಡಿ. 13ರಂದು ನಡೆಯಲಿರುವ ರಾಜ್ಯ ಮಟ್ಟದ ಓಲಿಂಪಿಯಾಡ್ ಪರೀಕ್ಷೆಗೆ ಆಯ್ಕೆಯಾಗಿದ್ದಾನೆ. ಮುಖ್ಯೋಪಾಧ್ಯಾಯ ಟಿ.ಆರ್. ವೇದಂಭಟ್ಟನವರ, ಎಸ್‌ಡಿಎಂಸಿ ಉಪಾಧ್ಯಕ್ಷ ಮೂಕಪ್ಪ ಅಂಗಡಿ, ಶಂಭಯ್ಯ ಬಂಕಾಪುರಮಠ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.
ಶಿಗ್ಗಾಂವಿ ಉರ್ದು ಶಾಲೆ ಮಕ್ಕಳು ರಾಜ್ಯ ಮಟ್ಟಕ್ಕೆ
ಶಿಗ್ಗಾಂವಿ: ಸವಣೂರಿನ ಸರ್ಕಾರಿ ಎಚ್‌ಪಿಯುಜಿಎಸ್ ಶಾಲೆಯಲ್ಲಿ ನಡೆದ ಹಾವೇರಿ ಜಿಲ್ಲಾ ಮಟ್ಟದ ಉರ್ದು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಶಿಗ್ಗಾಂವಿ ಅಲ್-ಮೇರಾಜ ಉರ್ದು ಶಾಲೆಯ ವಿದ್ಯಾರ್ಥಿನಿಯರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಏಕಪಾತ್ರ ಅಭಿನಯದಲ್ಲಿ ಆಫ್ರಿನಭಾನು ಸುಲ್ತಾನಖಾನವರ, ಆಶುಭಾಷಣದಲ್ಲಿ ನುಶ್ರತ ಯಳವಟ್ಟಿ, ಚರ್ಚಾ ಸ್ಪರ್ಧೆಯಲ್ಲಿ ಬೀಬಿ ನವಾಜ ನೀರಮನಿ ಪ್ರಥಮ ಸ್ಥಾನಗಳಿಸಿದ್ದಾರೆ. ಸಂಸ್ಥೆಯ ಅಧ್ಯಕ್ಷ ಸೈಯದ ಇರ್ಫಾನ್ ಇನಾಮದಾರ, ಮುಖ್ಯೋಪಾಧ್ಯಾಯ ಮಹ್ಮದ ಸಾದಿಕ್ ಮಿಯ್ಯಾಬೇಗ ಮತ್ತು ಮಾರ್ಗದರ್ಶಕ ಮುಶ್ತಾಕ ನದಾಫ ಸಾಧಕರನ್ನು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.