ಎಲ್ಲರೂ ಧರ್ಮದ ಹಾದಿಯಲ್ಲಿ ನಡೆಯಿರಿ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಡಿ. 7
ಭಗವಂತನು ತನ್ನಿಷ್ಟದಂತೆ ಸೃಷ್ಟಿಸಿರುವ ಎಲ್ಲ ಜೀವರಾಶಿಗಳು ಸೇರಿದಂತೆ ಪ್ರತಿಯೊಂದು ರೂಪ ಹಾಗೂ ಆಕಾರಗಳನ್ನು ನೋಡುವಂತಹ ಭಾಗ್ಯ ಮನುಷ್ಯನನ್ನು ಬಿಟ್ಟು ಬೇರ್ಯಾವ ಪ್ರಾಣಿ ಪಕ್ಷಿಗಳಿಗೂ ಸಿಕ್ಕಿಲ್ಲ. ಆದಕಾರಣ ಮನುಷ್ಯರಾದ ನಾವೆಲ್ಲರೂ ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದು ಸಿರಿಗೆರೆಯ ಬೃಹನ್ಮಠದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.
ತಾಲೂಕಿನ ಐತಿಹಾಸಿಕ ಪ್ರೇಕ್ಷಣಿಯ ಸ್ಥಗಳಲ್ಲೊಂದಾದ ಚಿಕ್ಕಕುರುವತ್ತಿ ಗ್ರಾಮದಲ್ಲಿ ಭಕ್ತರ ಸಹಕಾರದೊಂದಿಗೆ ಅಂದಾಜು ರು. 15 ಲಕ್ಷ ವೆಚ್ಚದಲ್ಲಿ ತುಂಗಭದ್ರಾ ನದಿಯ ದಡದಲ್ಲಿ ಕಟ್ಟಿರುವ ಗೂಳಿಬಸವೇಶ್ವರ ಹಾಗೂ ಗೌರಿ ದೇವಸ್ಥಾನಗಳ ಲೋಕಾರ್ಪಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯನ ಮನಸ್ಸು ದೇಶ ಕಾಲ ಹಾಗೂ ಪ್ರಪಂಚವೆಂಬ ವಿಶಾಲವಾದ ಜಗತ್ತಿನ್ನಾಚೆಯ ವಿಷಯಗಳನ್ನೆಲ್ಲ ಯೋಚಿಸುವಂತಹ ಮಹತ್ವದ ಶಕ್ತಿ ಹೊಂದಿದೆ. ವಿಶಾಲವಾದ ಪ್ರಪಂಚವನ್ನು ನೋಡುವ ಮಾನವ ಕುಲಕೋಟಿಗಳೆಲ್ಲ ಭಗವಂತನ ಸಾಕ್ಷಾತ್ಕಾರಕ್ಕಾಗಿ ಮುಕ್ತಿ ಹೊಂದಲು ಭಕ್ತಿಯ ಮಾರ್ಗದಲ್ಲಿ ನಡೆಯಬೇಕು. ನಂಬಿಕೆ, ಮೂಢ ನಂಬಿಕೆಗಳ ಕುರಿತು ಸರಿಯಾಗಿ ಅರ್ಥೈಸಿಕೊಳ್ಳಲು ಮುಂದಾಗಬೇಕು ಎಂದರು.
ಭಾರತದಲ್ಲಿರುವಷ್ಟು ಗುಡಿ, ಮಂದಿರ, ಮಸೀದಿ, ಚರ್ಚ್ಗಳು ಪ್ರಪಂಚದಲ್ಲಿನ ಯಾವ ರಾಷ್ಟ್ರಗಳಲ್ಲಿ ಇಲ್ಲ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಮಹತ್ವವನ್ನು ಭಾರತ ಪಡೆದಿದ್ದು, ಇಲ್ಲಿ ಜನ್ಮ ತಾಳಿರುವ ನಾವೇ ಧನ್ಯರು ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಬಿ. ಕೋಳಿವಾಡ ಮಾತನಾಡಿ, ಬೇರೆ ರಾಷ್ಟ್ರಗಳಿಗೂ ಹಾಗೂ ಭಾರತಕ್ಕೂ ಹೋಲಿಸಲಾಗಿ ಭಾರತದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತೇವೆ. ಮೂಢ ನಂಬಿಕೆ ನಿಷೇಧಕ್ಕಾಗಿ ಸರ್ಕಾರ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸುತ್ತಿದೆ. ಕಾನೂನು ಜಾರಿಗೆ ತಂದಿಲ್ಲ. ಇದರ ಕುರಿತು ಸಾರ್ವಜನಿಕರು ಜಾಗೃತರಾಗಬೇಕು.
ಇತ್ತೀಚೆಗೆ ಗುಲ್ಬರ್ಗದಲ್ಲಿ ನಡೆದ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ವಿರುದ್ಧವಾಗಿ ಕೆಲವರು ಶ್ವಾನ ಪಲ್ಲಕ್ಕಿ ಉತ್ಸವ ನಡೆಸಲು ಮುಂದಾಗುವುದರೊಂದಿಗೆ, ಜನರ ನಂಬಿಕೆ ವಿಶ್ವಾಸಗಳಿಗೆ ಧಕ್ಕೆ ತಂದಿರುವುದು ವಿಷಾದನೀಯ. ಆದ ಕಾರಣ ಧರ್ಮದ ಹಾದಿಯಲ್ಲಿ ನಡೆಯಲು ಸರ್ವರು ಮುಂದಾಗಬೇಕೆಂದು ಕೋಳಿವಾಡ ತಿಳಿಸಿದರು.
ಚೌಡಯ್ಯದಾನಪುರದ ಸಂಸ್ಥಾನಮಠದ ಚಿತ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ದೊಡ್ಡಪೇಟೆಯ ವಿರಕ್ತಮಠದ ಗುರುಬಸವ ಸ್ವಾಮೀಜಿ, ಲಿಂಗನಾಯಕನಹಳ್ಳಿಯ ಚನ್ನವೀರ ಶಿವಯೋಗಿಗಳು ಆಶೀರ್ವಚನ ನೀಡಿದರು.
ಚಿಕ್ಕಕುರುವತ್ತಿ ಗ್ರಾಮದ ಮುಖಂಡರಾದ ಸಿ.ಸಿ. ಸಣ್ಣಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಜಿ. ಶಿವಣ್ಣ, ಡಾ. ಬಿ.ಜಿ. ಪಾಟೀಲ, ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ಜಿಪಂ ಸದಸ್ಯೆ ಲಲಿತಾ ಜಾಧವ್, ತಾಪಂ ಸದಸ್ಯೆ ಪೂರ್ಣಿಮಾ ಕುರುವತ್ತಿ, ಗ್ರಾಪಂ ಅಧ್ಯಕ್ಷೆ ಸರೋಜಾ ಲಮಾಣಿ, ಉದ್ಯಮಿ ಬಿ.ಬಿ. ಕುರುಗೋಡಪ್ಪನವರ, ನಗರಸಭೆ ಮಾಜಿ ಸದಸ್ಯ ಮಂಜುನಾಥ ಗೌಡಶಿವಣ್ಣನವರ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕರಬಸಪ್ಪ ಮಾಕನೂರು, ಸಣ್ಣತಮ್ಮಪ್ಪ ಬಾರ್ಕಿ, ಮುಖಂಡರಾದ ಬಸವರಾಜಪ್ಪ ಹಲಗೇರಿ ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಬಿ. ಮಾಸಣಗಿ ಉಪನ್ಯಾಸ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ಗುರುಗಳನ್ನು ಭಕ್ತರು ವೇದಿಕೆಗೆ ಕರೆತಂದರು.
ಕಾಡಿನಲ್ಲಿ ಸಿಕ್ಕ ಕಲ್ಲನ್ನು ಶಿಲ್ಪಿಯೊಬ್ಬ ಕೆತ್ತಿ ಅದಕ್ಕೆ ದೇವರ ಸ್ವರೂಪ ನೀಡುತ್ತಾನೆ. ಆ ಮೂರ್ತಿಯನ್ನು ಗುಡಿಯಲ್ಲಿಟ್ಟು ಭಕ್ತರು ಪೂಜಿಸುತ್ತಾರೆ. ಅಲ್ಲಿಗೆ ಬಂದ ಶಿಲ್ಪಿಯ ಕಣ್ಣಿಗೆ ಅದು ಕಲ್ಲಾಗಿ ಕಾಣದೆ ದೇವರಾಗಿ ಕಾಣುವಂತೆ ಮಾನವರಾಗಿರುವ ನಮ್ಮನ್ನೆಲ್ಲ ಸೃಷ್ಟಿಸಿರುವ ಭಗವಂತ ನಾನು ಸೃಷ್ಟಿಸಿದ್ದೇನೆ ಎಂದು ಎಲ್ಲಿಯೋ ಹೇಳಿಲ್ಲ. ನಿರಾಕಾರ ಪರಮಾತ್ಮ ಧ್ಯಾನಕ್ಕೆ, ಮನಸ್ಸಿನ ಸಮಾಧಾನಕ್ಕೆ, ಮೂರ್ತಿಪೂಜೆ ನೆಪಮಾತ್ರಕ್ಕೆ ಸೀಮಿತವಾಗಿದೆ.
- ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

