ಹಾವೇರಿ

ಮೌಢ್ಯ ತಡೆಯಲು ಕಠಿಣ ಕಾನೂನು: ಸಿದ್ದಲಿಂಗಶ್ರೀ

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಡಿ. 10
ಮಠ-ಮಂದಿರ ಕಟ್ಟಲು ಸರ್ಕಾರದ ಹಣವೇ ಬೇಕಾಗಿಲ್ಲ. ಮಡಿ, ಮೈಲಿಗೆ ಹೆಸರಿನಲ್ಲಿ ಕಾದಾಟವೂ ಅಗತ್ಯವಿಲ್ಲ. ಮೌಢ್ಯಗಳನ್ನು ತಡೆಯಲು ಸಾಮಾಜಿಕ ಜವಾಬ್ದಾರಿಯ ಜತೆಗೆ ಕಠಿಣ ಕಾನೂನುಗಳು ಜಾರಿಗೆ ಬರಬೇಕಿದೆ ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಶಿಂಗಾಪುರ ಗ್ರಾಮದಲ್ಲಿ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿದ್ದ ಅವರು, ಈ ದೇಶ ಧರ್ಮ, ಸಂಸ್ಕೃತಿಯ ಜಾಗೃತಿಗೆ ಹೆಸರಾಗಿದೆ. ಮಠ-ಮಾನ್ಯಗಳು ಧಾರ್ಮಿಕ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಸೇವೆ ಸಲ್ಲಿಸಿ ಸರ್ಕಾರಕ್ಕಿಂತ ಹೆಚ್ಚು ಕೆಲಸ ಮಾಡಿವೆ. ಈಗ ಮಠಗಳ ಸೇವಾ ಕಾರ್ಯಕ್ಕೆ ಸರ್ಕಾರದತ್ತ ಕೈಚಾಚುವ ಅಗತ್ಯವಿಲ್ಲ. ಭಕ್ತ ಭಕ್ತಿ, ಶ್ರದ್ಧೆಯಿಂದ ದಾನ ನೀಡಿ ಧರ್ಮ ಕಾಪಾಡಿಕೊಳ್ಳುತ್ತಾನೆ ಎಂದರು.
ದೊಡ್ಡ ಸಾಧನೆ
ಹರಿಹರದ ಪಂಚಮಸಾಲಿ ಪೀಠ ಒಂದು ದಶಕದ ಅವಧಿಯಲ್ಲಿ ಬೃಹತ್ ಧಾರ್ಮಿಕ ಸಾಧನೆ ಮಾಡಿದೆ. ಭಕ್ತರ ದೇಣಿಗೆಯಿಂದಲೇ ರು. 10 ಕೋಟಿ ವೆಚ್ಚದಲ್ಲಿ ಮಠ ನಿರ್ಮಿಸಿ ನ್ಯಾಯಪೀಠ, ವ್ಯಕ್ತಿತ್ವ ವಿಕಸನ ಶಿಬಿರ, ಯುವಕರಿಗೆ ತರಬೇತಿ, 2008 ಅನಾಥ ಮಕ್ಕಳ ಪಾಲನೆ ಪೋಷಣೆ, ವಸತಿ ನಿಲಯ ಹಾಗೂ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಸಜ್ಜುಗೊಳ್ಳುತ್ತಿದೆ. ಕ್ರಮೇಣ ರು. 30 ಕೋಟಿ ವೆಚ್ಚದಲ್ಲಿ ಮಠದ ನಿರ್ಮಾಣಕ್ಕೆ ಭಕ್ತರು ಮುಂದಾಗಿದ್ದಾರೆ. ಪ್ರಜೆಗಳು ನೀಡುವ ಕರದಲ್ಲಿ ಸಾರ್ವಜನಿಕ ಕೆಲಸಗಳಾಗಬೇಕು. ಮಠ ನಿರ್ಮಾಣಕ್ಕೆ ಭಕ್ತರೇ ದಾನ ನೀಡಬೇಕು. ಧರ್ಮ-ಸಂಸ್ಕೃತಿಯ ಹೆಸರಿನಲ್ಲಿ ಮೌಢ್ಯಗಳ ಆಚರಣೆ ಬೇಡ. ಮಡೆಸ್ನಾನ ಮುಂತಾದ ಕಂದಾಚಾರಗಳಿಂದ ಮುಕ್ತವಾದ ಸಮಾಜ ನಿರ್ಮಿಸುವ ಕೆಲಸವಾಗಬೇಕು ಎಂದರು.
ಹಾನಗಲ್ಲಿನಲ್ಲಿ ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವೇಶ್ವರ ಹಾಗೂ ಸ್ವಾತಂತ್ರ್ಯ ಕ್ರಾಂತಿ ಕಹಳೆ ಊದಿದ ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ಸ್ಥಾಪನೆ ಮಾಡುತ್ತಿರುವುದು ಸ್ವಾಗತಾರ್ಹ. ಸಮಾಜಕ್ಕೆ ಕೊಡುಗೆ ನೀಡಿದ ಮಹಾತ್ಮರ ಆದರ್ಶ ಹಾಗೂ ಅವರ ಪ್ರತಿಬಿಂಬ ಕಣ್ಣೆದುರಿಗಿದ್ದು, ಮಾರ್ಗದರ್ಶನ ಮಾಡುವಂತಿರಬೇಕು ಎಂದರು.
ಶಕ್ತಿ ಕೇಂದ್ರ
ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಎಸ್.ಆರ್. ಅಂಗಡಿ ಮಾತನಾಡಿ, ಹರಿಹರ ಪೀಠದ ಮಠ ಸ್ವಾಭಿಮಾನದ ಸಂಕೇತ, ಶಕ್ತಿ ಕೇಂದ್ರವಾಗಿ ಸಮಾಜದ ಉನ್ನತಿಗೆ ಶ್ರಮಿಸುತ್ತದೆ. ಮಠದ ನಿರ್ಮಾಣಕ್ಕೆ ಭಕ್ತರು ನಿರೀಕ್ಷೆ ಮೀರಿ ದೇಣಿಗೆ ನೀಡುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಮೊದಲ ಪಾದಯಾತ್ರೆ ಯಶಸ್ವಿಯಾಗಿದೆ. ಸತ್ಕಾರ್ಯಕ್ಕೆ ಸಮಾಜ ಸ್ಪಂದಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.
ಜಿಪಂ ಸದಸ್ಯ ಮಹದೇವಪ್ಪ ಭಾಗಸರ, ತಾಪಂ ಸದಸ್ಯ ಕಲವೀರಪ್ಪ ಪವಾಡಿ, ಸಮಾಜದ ತಾಲೂಕು ಘಟಕದ ಅಧ್ಯಕ್ಷ ಮಾಲತೇಶ ಸೊಪ್ಪಿನ, ಮಾಜಿ ಅಧ್ಯಕ್ಷ ಚಂದ್ರಣ್ಣ ಕಳ್ಳಿ, ಕಾರ್ಯದರ್ಶಿ ನಿಜಲಿಂಗಪ್ಪ ಮುದೆಪ್ಪನವರ, ಜಿಲ್ಲಾ ಘಟಕದ ಕಾರ್ಯದರ್ಶಿ ಎನ್.ಎಸ್. ಪಡೆಪ್ಪನವರ, ಜಿಲ್ಲಾ ನೌಕರರ ಘಟಕದ ಗೌರವಾಧ್ಯಕ್ಷ ಮಾರುತಿ ಶಿಡ್ಲಾಪುರ, ಗಣ್ಯರಾದ ಬಸವಣ್ಣೆಪ್ಪ ಬೆಂಚಳ್ಳಿ, ಎನ್.ಬಿ. ಪೂಜಾರ, ಭರಮಣ್ಣ ಶಿವೂರ, ರಾಜಣ್ಣ ಬೆಟಗೇರಿ, ಶಿದ್ಲಿಂಗಪ್ಪ ಶಂಕ್ರಿಕೊಪ್ಪ, ಶಾಂತಣ್ಣ ದಾನಪ್ಪನವರ, ಶಂಬಣ್ಣ ಆಲದಕಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.