ಹಾವೇರಿ

ಸುಪಾರಿ ಕಿಲ್ಲರ್ ಸಾದಿಕ್ ಬಲೆಗೆ

Published On :

ಕನ್ನಡಪ್ರಭ ವಾರ್ತೆ, ಹಾವೇರಿ:, ಡಿ. 11
ಸುಪಾರಿ ಪಡೆದು ಹಿರೇಕೆರೂರು ತಾಲೂಕಿನ ಗುಡ್ಡದ ಮಲ್ಲಾಪುರದ ಶಾಂತಪ್ಪ ದೊಡ್ಡಮನಿ ಎಂಬುವರ ಕೊಲೆಗೆ ಯತ್ನಿಸಿ ತಲೆಮರೆಸಿಕೊಂಡಿದ್ದ ಸುಪಾರಿ ಹಂತಕ ಹಾವೇರಿಯ ಸಾದಿಕ್ ಧಾರವಾಡ ಎಂಬಾತನನ್ನು ಜಿಲ್ಲಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಹಿರೇಕೆರೂರು ತಾಲೂಕಿನ ಗುಡ್ಡದಮಲ್ಲಾಪುರ ಶಾಂತಪ್ಪ ದೊಡ್ಡಮನಿ ಅವರು 2013ರ ಸೆ. 22ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಚೊಗಚಿಕೊಪ್ಪ ತಾಂಡಾದ ಬಳಿ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಅವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದರು. ಆಗ ಗ್ರಾಮಸ್ಥರು ಬಂದಿದ್ದರಿಂದ ಆರೋಪಿಗಳು ಪರಾರಿಯಾಗಿದ್ದರು.
ಹಲ್ಲೆಗೊಳಗಾಗಿದ್ದ ದೊಡ್ಡಮನಿ ಹಿರೇಕೆರೂರು ತಾಲೂಕಿನ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಸ್ಪಿ ಎನ್. ಶಶಿಕುಮಾರ ಹಾಗೂ ಹೆಚ್ಚುವರಿ ಎಸ್ಪಿ ಡಿ.ಎಸ್. ಜಗಮೈನವರ ರಾಣಿಬೆನ್ನೂರು ಡಿವೈಎಸ್ಪಿ ಎಸ್.ಎಚ್. ಗಡಾದ ನೇತೃತ್ವದಲ್ಲಿ ಈ ಪ್ರಕರಣದ ತನಿಖೆಗೆ ತಂಡವನ್ನು ನೇಮಿಸಿದ್ದರು. ಪ್ರಕರಣದ ಬೆನ್ನು ಹತ್ತಿದಾಗ ಸಿಕ್ಕ ಮಾಹಿತಿ ಆಧರಿಸಿ ಗುಡ್ಡದಮಲ್ಲಾಪುರದ ಚನ್ನಬಸಪ್ಪ ಪೂಜಾರ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದಾಗ ಶಾಂತಪ್ಪ ದೊಡ್ಡಮನಿ ಕೊಲೆಗೆ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ.
ಹುಬ್ಬಳ್ಳಿ ಮೂಲದ ವೀರೇಶ ಬೆಸ್ತರಗೆ ಶಾಂತಪ್ಪ ದೊಡ್ಡಮನಿ ಕೊಲೆ ಮಾಡುವಂತೆ ಚನ್ನಬಸಪ್ಪ ಪೂಜಾರಿ ರು. 1.75 ಲಕ್ಷಕ್ಕೆ ಸುಪಾರಿ ನೀಡಿದ್ದ ಎನ್ನಲಾಗಿದೆ. ಸುಪಾರಿ ಪಡೆದ ವೀರೇಶ ಬೆಸ್ತರ, ಹಾವೇರಿಯ ಸಾಧಿಕ್ ಧಾರವಾಡನ ಜತೆ ಸೇರಿ ಚೊಗಚಿಕೊಪ್ಪ ತಾಂಡಾದ ಬಳಿ ದೊಡ್ಡಕೆರೆ ಸಮೀಪ ಶಾಂತಪ್ಪ ದೊಡ್ಡಮನಿ ಮೇಲೆ ಬೇಸ್ ಬಾಲ್ ಸ್ಟಿಕ್‌ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಅಲ್ಲಿಗೆ ಇಬ್ಬರು ಬೈಕ್ ಸವಾರರು ಬರುತ್ತಿರುವುದನ್ನು ಕಂಡು ಸುಪಾರಿ ಹಂತಕರು ಪರಾರಿಯಾಗಿದ್ದರು. ಮಾರಣಾಂತಿಕವಾಗಿ ಗಾಯಗೊಂಡಿದ್ದ ಶಾಂತಪ್ಪ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು.
ಪ್ರಕರಣದ ತನಿಖೆ ನಡೆಸಿದ ತಂಡ ಶಾಂತಪ್ಪನೊಂದಿಗೆ ಜಮೀನು ಹಾಗೂ ರಾಜಕೀಯ ವೈಷಮ್ಯ ಹೊಂದಿದ್ದ ಚನ್ನಬಸಪ್ಪ ಪೂಜಾರಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸುಫಾರಿ ಪ್ರಕರಣ ಬೆಳಕಿಗೆ ಬಂದಿದೆ. ಈ ಮೊದಲು ತನಿಖಾ ತಂಡ ವೀರೇಶ ಬೆಸ್ತರನನ್ನು ಬಂಧಿಸಿತ್ತು. ಬುಧವಾರ ಪ್ರಮುಖ ಆರೋಪಿ ಸಾಧಿಕ್‌ನನ್ನು ಸೆರೆ ಹಿಡಿಯಲಾಗಿದೆ.
ಎಸ್‌ಐ ರೋಹಿಣಿ ಪಾಟೀಲ ಹಾಗೂ ಸಿಬ್ಬಂದಿ ಪಿ.ಬಿ. ಹಿರೇಮಠ, ಸಿ.ಎಸ್. ಪಾಟೀಲ ತನಿಖೆಗೆ ಸಹಕರಿಸಿದ್ದರು. ತನಿಖಾ ತಂಡವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.