ಹಾವೇರಿ

ಕಳಕಳಿ ಇದ್ದರೆ ಇತಿಹಾಸ ನಿರ್ಮಾಣ

Published On :

ಹಾನಗಲ್ಲ: ಜನರ ನಾಡಿ ಮಿಡಿತ ಬಲ್ಲ, ಸಾಮಾಜಿಕ ಕಳಕಳಿ ಉಳ್ಳವರಿಂದ ಮಾತ್ರ ಇತಿಹಾಸ ಸ್ಥಾಪಿಸಲು ಸಾಧ್ಯ. ಜಗಜ್ಯೋತಿ ಬಸವಣ್ಣ, ವೀರ ಮಹಿಳೆ ಕಿತ್ತೂರ ರಾಣಿ ಚನ್ನಮ್ಮ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿರುವುದೇ ಇದಕ್ಕೆ ಸಾಕ್ಷಿ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.
ಹಾನಗಲ್ಲಿನಲ್ಲಿ ಜಗಜ್ಯೋತಿ ಬಸವೇಶ್ವರರ ಹಾಗೂ ವೀರರಾಣಿ ಕಿತ್ತೂರ ಚನ್ನಮ್ಮ ಅವರ ಪುತ್ಥಳಿ ಅನಾವರಣದ ನಿಮಿತ್ತ ಆಯೋಜನೆಗೊಂಡ ಶರಣರು ಹಾಗೂ ಹಾನಗಲ್ಲ ಕುಮಾರ ಶಿವಯೋಗಿಗಳವರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬಸವಣ್ಣನವರು 12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿ, ಸಮಾನತೆ ಸಾರಿದರು. ರಾಣಿ ಚನ್ನಮಾಜಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಕನ್ನಡ ನಾಡಿನ ಕೀರ್ತಿ ಪತಾಕೆ ಹಾರಿಸಿದ್ದರು ಎಂದರು.
ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಶರಣ ಪರಂಪರೆಯ ಅರಿವಿರಬೇಕು. ಹಾನಗಲ್ಲ ಕುಮಾರೇಶ್ವರರಂತೆ ಬದುಕುವುದು ಕಷ್ಟಸಾಧ್ಯ. ಅವರ ಪೀಠಕ್ಕೆ ಅತ್ಯದ್ಭುತ ಪರಂಪರೆ, ಶಕ್ತಿ ಇದೆ. ಜಂಜಡದ ಬದುಕಿನಲ್ಲಿ ಆಡಂಬರದ ಮಧ್ಯೆ ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ. ಆಧುನಿಕ ಶಿಕ್ಷಣದ ಆತುರದಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಲಾಗುತ್ತಿಲ್ಲ. ಪ್ರವಚನಗಳು ಬದುಕನ್ನು ಹಸನು ಮಾಡುತ್ತವೆ ಎಂದರು.
ಅಕ್ಕಿಆಲೂರು ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಸಂಸಾರದ ಜಂಜಾಟದಲ್ಲಿ ಅಧ್ಯಾತ್ಮದಿಂದ ದೂರವಾಗುತ್ತಿದ್ದೇವೆ. ಮಹಾತ್ಮರ ಜೀವನದ ಆದರ್ಶಗಳನ್ನು ಪಾಲಿಸಿದರೆ ಸುಂದರ, ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ರಾಜೂರಿನ ಕುಮಾರದೇವರು ಪ್ರವಚನ ನೀಡಿದರು. ಮಾಜಿ ಸಚಿವ, ಪುತ್ಥಳಿ ಅನಾವರಣ ಸಮಿತಿ ಅಧ್ಯಕ್ಷ ಸಿ.ಎಂ. ಉದಾಸಿ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ದೇವರು, ಶಿವಲಿಂಗ ದೇವರು ಉಪಸ್ಥಿತರಿದ್ದರು. ಎನ್.ಐ. ಕೋಮಾರ ಪ್ರಾರ್ಥಿಸಿದರು. ಪುರಸಭೆ ಸದಸ್ಯ ಕಲ್ಯಾಣಕುಮಾರ ಶೆಟ್ಟರ ಸ್ವಾಗತಿಸಿದರು. ಉಪನ್ಯಾಸಕ ವಿಶ್ವನಾಥ ಬೋಂದಾಡೆ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.