ಹಣ ಪಾವತಿಸದಿದ್ದರೆ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 19
ಕಬ್ಬು ಬೆಳೆಗಾರರಿಗೆ 15 ದಿನಗಳಲ್ಲಿ ಫೈನಲ್ ಬಿಲ್ ಪಾವತಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ರೈತರೊಂದಿಗೆ ಸೇರಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಸಂಘ ಎಚ್ಚರಿಕೆ ನೀಡಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಶಿವಾನಂದ ಗುರುಮಠ, ಸರ್ಕಾರ ರಾಜ್ಯ ಸಲಹಾ ದರ ಕಾನೂನು ಪ್ರಕಾರ ಕಬ್ಬಿಗೆ ದರ ನಿಗದಿ ಮಾಡಿದೆ. ಉತ್ತರ ಕರ್ನಾಟಕದ ಕಾರ್ಖಾನೆಗಳು ಫೀಲ್ಡ್ ಕೇನ್ ಪ್ರತಿ ಟನ್ನಿಗೆ ರು. 2500 ನಿಗದಿ ಮಾಡಿವೆ. ಬೆಳಗಾವಿ ಅಧಿವೇಶನದಲ್ಲಿ ಹೆಚ್ಚುವರಿಯಾಗಿ ಟನ್ ಕಬ್ಬಿಗೆ ರು. 150 ಪ್ರೋತ್ಸಾಹಧನ ನೀಡುವುದಾಗಿ ಸರ್ಕಾರ ಘೋಷಿಸಿದೆ. ಅಂದರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ರು. 2650 ಕಡೆಯ ಬಿಲ್ ನೀಡಬೇಕಿತ್ತು. ಆದರೆ ಸಕ್ಕರೆ ಕಾರ್ಖಾನೆಗಳು ಯಾವ ರೈತರಿಗೂ ಅಂತಿಮ ಬಿಲ್ ಕೊಟ್ಟಿಲ್ಲ ಎಂದು ಆರೋಪಿಸಿದರು.
ಸಂಗೂರು ಸಕ್ಕರೆ ಕಾರ್ಖಾನೆ ರೈತರಿಂದ ಪಡೆದ ಟನ್ ಕಬ್ಬಿಗೆ ರು. 1300 ಮುಂಗಡ ನೀಡಿದೆ. ಇದರಿಂದ ಟನ್ಗೆ ರು. 1350 ಬಾಕಿ ಉಳಿದಿದೆ. ಈ ಮಧ್ಯೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ನ್ಯಾಯಾಲಯಕ್ಕೆ ಹೋಗಿರುವುದರಿಂದ ಸರ್ಕಾರ ಹಾಗೂ ಕಾರ್ಖಾನೆಗಳ ನಡುವೆ ಗುದ್ದಾಟ ಮುಂದುವರಿದಿದೆ.
ರೈತರಿಗೆ 15 ದಿನಗಳಲ್ಲಿ ಅಂತಿಮ ಬಿಲ್ ಪಾವತಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಉತ್ತರ, ದಕ್ಷಿಣ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಯಾವವು ಎಂಬುದನ್ನು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಳಪೆ ಹತ್ತಿ ಬೀಜ ಬಿತ್ತಿ ನಷ್ಟ ಅನುಭವಿಸಿದ ರೈತರಿಗೆ ಬಿಟಿ ಹತ್ತಿ ಕಂಪನಿಗಳಿಂದ ಪರಿಹಾರ ಕೊಡಿಸುವುದಾಗಿ ಸರ್ಕಾರ ಹೇಳಿದೆ. ಆದರೆ ಯಾವ ರೈತರಿಗೂ ಪರಿಹಾರ ಸಿಕ್ಕಿಲ್ಲ. ಈಗಾಗಲೇ ರೈತರು ಹತ್ತಿ ಗಿಡಗಳನ್ನು ಕಡಿದು ಬೇರೆ ಬೆಳೆಗೆ ಅಣಿಯಾಗುತ್ತಿದ್ದಾರೆ. ನಷ್ಟ ಅನುಭವಿಸಿದ ರೈತರಿಗೆ ಶೀಘ್ರದಲ್ಲಿ ಪರಿಹಾರ ನೀಡಬೇಕು. 2012-13ನೇ ಸಾಲಿನ ಬೆಳೆವಿಮೆ ಹಣವನ್ನೂ ಸಹಕಾರಿ ಸಂಘಗಳ ಮೂಲಕ ರೈತರಿಗೆ ತಕ್ಷಣ ವಿತರಿಸಬೇಕು ಎಂದು ಗುರುಮಠ ಆಗ್ರಹಿಸಿದರು.
ರಾಜಕೀಯ, ಸಂಘಟನೆಗಳಲ್ಲಿ ದಕ್ಷಿಣ ಕರ್ನಾಟಕ ಪ್ರಾಬಲ್ಯವಿದೆ. ಅಲ್ಲಿನ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಬತ್ತಕ್ಕೆ ರು. 300 ಪ್ರೋತ್ಸಾಹಧನ, ಅಡಕೆ, ತೆಂಗು ಬೆಳೆಗೆ ಪರಿಹಾರ ನೀಡಲಾಗಿದೆ. ಪರಿಹಾರ ನೀಡಿಕೆಯಲ್ಲೂ ಉ.ಕ. ರೈತರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದರು. ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಜಶೇಖರ ಬೆಟಗೇರಿ, ರಾಮಣ್ಣ ದೊಡ್ಮನಿ, ನಿಂಗಪ್ಪ ಪೂಜಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

