ಅಭಿವೃದ್ಧಿ ಕಾಮಗಾರಿಗೆ ಅಸ್ತು
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಡಿ. 22
ನಗರದ ವಿವಿಧ ವಾರ್ಡ್ಗಳಲ್ಲಿ ರು. 2.31 ಕೋಟಿಗಳ 37 ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮತ್ತು ರು. 41.51 ಲಕ್ಷಗಳಲ್ಲಿ ನಗರದ ವಿವಿಧ ಬಡಾವಣೆಗಳಿಗೆ ನೀರು ಸರಬರಾಜು ಮಾಡುವುದಕ್ಕಾಗಿ ವಾರ್ಷಿಕ ಹೊರಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಹಾಗೂ ಸ್ವಚ್ಛ ಸುಂದರ ನಗರವನ್ನಾಗಿಸಲು ರು. 1.33 ಕೋಟಿಗಳಲ್ಲಿ 4 ಪ್ಯಾಕೇಜ್ ವಾರ್ಷಿಕ ಹೊರಗುತ್ತಿಗೆ ನೀಡಲು ನಗರಸಭೆ ಸರ್ವ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.
ಶನಿವಾರ ನಗರಸಭೆಯ ಸಭಾಭವನದಲ್ಲಿ ಪ್ರಭಾರಿ ಅಧ್ಯಕ್ಷ ಶಿವಪ್ಪ ಮಣೇಗಾರ ಅಧ್ಯಕ್ಷತೆಯಲ್ಲಿ ಕರೆದಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ನಗರದ ಸಾರ್ವಜನಿಕರಿಗೆ ಶುದ್ಧ ನೀರನ್ನು ಪೂರೈಸುವ ಉದ್ದೇಶದಿಂದ ತಾಲೂಕಿನ ಮುದೇನೂರು ಗ್ರಾಮದ ಹತ್ತಿರ ಹರಿದಿರುವ ತುಂಗಭದ್ರಾ ನದಿಯಲ್ಲಿ ನಿರ್ಮಿಸಿರುವ ಜಾಕ್ವೆಲ್ ಹತ್ತಿರ ನದಿಗೆ ಅಡ್ಡಲಾಗಿ ಅಂದಾಜು ರು. 9.50 ಲಕ್ಷ ವೆಚ್ಚದಲ್ಲಿ ಮರಳು ಚೀಲಗಳಿಂದ ತಡೆಗೋಡೆ ನಿರ್ಮಿಸಲು ಒಪ್ಪಿಗೆ ನೀಡಲಾಯಿತು.
ಶಾಂತಿನಗರ ಮತ್ತು ಚಿದಂಬರ ನಗರದ ಸಾರ್ವಜನಿಕರಿಗೆ ರು. 4.80 ಲಕ್ಷಗಳಲ್ಲಿ ಪೈಪ್ಲೈನ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವುದಕ್ಕಾಗಿ, ವಿಭಾಗ ನಂ. 17ರಲ್ಲಿ ಮಹಿಳಾ ಶೌಚಾಲಯಕ್ಕೆ ನೀರಿನ ತೊಟ್ಟಿ ನಿರ್ಮಿಸಿ, ಮೋಟಾರು ಅಳವಡಿಸಿ, ನೀರು ಸರಬರಾಜು ಮಾಡಲು, ಜುಮ್ಮಾ ಮಸೀದಿ ರಸ್ತೆ ಪಕ್ಕದಲ್ಲಿರುವ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡುವುದಕ್ಕಾಗಿ ಹೊಸದಾಗಿ ಪೈಪ್ಲೈನ್ ಅಳವಡಿಸುವುದು ಸೇರಿದಂತೆ ನಗರದ ವಿವಿಧ ಬಡಾವಣೆಗಳಿಗೆ ನೀರು ಸರಬರಾಜು ಮಾಡುವುದಕ್ಕಾಗಿ ರು. 20.16 ಲಕ್ಷಗಳಲ್ಲಿ ಹೊರಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ತೀರ್ಮಾನಿಸಲಾಯಿತು.
ನಗರದಲ್ಲಿ ಎಲ್ಲೆಂದರಲ್ಲಿ ಕಾಣುವ ಹಾಗೂ ಸ್ವಚ್ಛತಾ ಸಿಬ್ಬಂದಿಗೆ ತುಂಬಾ ಕಿರಿಕಿರಿಯನ್ನುಂಟು ಮಾಡುತ್ತಿರುವ ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ಸರ್ಕಾರ 2011ರಲ್ಲಿ ಜಾರಿಗೆ ತಂದಿರುವ ನಿಯಮದಂತೆ 40 ಮೈಕ್ರಾನ್ಗಿಂತ ಹೆಚ್ಚಿನ ದಪ್ಪದ ಪ್ಲಾಸ್ಟಿಕ್ ಬಳಕೆಗೆ ದರ ನಿರ್ಧರಿಸಲು ಹಾಗೂ ಸ್ವಚ್ಛ ಸುಂದರ ನಗರವನ್ನಾಗಿಸಲು ರು. 1.33 ಕೋಟಿಗಳಲ್ಲಿ 4 ಪ್ಯಾಕೇಜ್ಗಳಲ್ಲಿ ನಗರದಲ್ಲಿ ಸ್ವಚ್ಛತೆ ನಿರ್ವಹಿಸುವುದಕ್ಕಾಗಿ ವಾರ್ಷಿಕ ಹೊರಗುತ್ತಿಗೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಶಾಸಕ ಕೆ.ಬಿ. ಕೋಳಿವಾಡ, ಪೌರಾಯುಕ್ತೆ ಅಶ್ವಿನಿ ಬಿ.ಎಂ. ಇದ್ದರು. ಅಭಿಯಂತ ಪಾಟೀಲ ಸ್ವಾಗತಿಸಿದರು. ಜಿ.ಜಿ. ಕಾಟಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

