ಹಾವೇರಿ

ಮಹಾಪುರುಷರ ಆದರ್ಶ ಸಂಸ್ಕೃತಿಯ ಪ್ರತಿಬಿಂಬ: ಬಿಎಸ್‌ವೈ

Published On :

ಹಾನಗಲ್ಲ: ಧರ್ಮ ಸಂಸ್ಕಾರಗಳ ಮೂಲಕ ಪವಿತ್ರ ನಾಡಾಗಿರುವ ಭಾರತದಲ್ಲಿ ಸಂತ ಮಹಾತ್ಮರು ನೀಡಿದ ಕೊಡುಗೆ, ನಡೆದ ಆದರ್ಶಗಳು ಜನಮಾನಸದಲ್ಲಿ ಸುಸಂಸ್ಕೃತಿಯ ಪ್ರತಿಬಿಂಬವಾಗಿ ಜೀವಂತವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಹಾನಗಲ್ಲಿನ ಕುಮಾರೇಶ್ವರ ವಿರಕ್ತಮಠದ ಆವರಣದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮಾಜಿ ಅವರ ಕಂಚಿನ ಪುತ್ಥಳಿಗಳ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾನತೆಯ ಸಂದೇಶ ಸಾರಿದ ಬಸವಣ್ಣ, ಸ್ವಾತಂತ್ರ್ಯದ ಧ್ರುವತಾರೆ ಕಿತ್ತೂರು ಚನ್ನಮ್ಮ ಕನ್ನಡದ ಜ್ಞಾನ, ದೇಶ ಭಕ್ತಿಯ ಸಂಪತ್ತು. ಶರಣ ಧರ್ಮ ಶ್ರೀ ಸಮಾನತೆ ಸಾರಿತು. ಬ್ರಿಟಿಷರ ವಿರುದ್ಧ ಕಾದಾಡಿ ಸ್ವತಂತ್ರ ಭಾರತದ ಕನಸನ್ನು ನನಸಾಗಿಸಲು ಶ್ರಮಿಸಿದ ಸಾಧ್ವಿಯಾಗಿ ಚನ್ನಮ್ಮಾಜಿ ಮಿಂಚಿದರು ಎಂದರು.
ಬೆಂಗಳೂರಿನಲ್ಲಿ ರು. 25 ಕೋಟಿ ವೆಚ್ಚದಲ್ಲಿ ಬಸವೇಶ್ವರರ ಕುರಿತು ಸಂಶೋಧನಾ ಕೇಂದ್ರ ಆರಂಭಿಸಲು ಬಜೆಟ್‌ನಲ್ಲಿ ಹಣ ತೆಗೆದಿರಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಅದನ್ನು ಆರಂಭಿಸಬೇಕು. ಮುಂದಿನ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಪಕ್ಷಭೇದ ಮರೆತು ಶ್ರಮಿಸಿ ಸಾಮಾಜಿಕ ನ್ಯಾಯ ಒದಗಿಸಲು ಪ್ರಯತ್ನ ಮಾಡುತ್ತೇವೆ ಎಂದರು.
ಹಸ್ತಕ್ಷೇಪ ಮಾಡಲ್ಲ: ಸಕ್ಕರೆ ಹಾಗೂ ಮುಜರಾಯಿ ಇಲಾಖೆ ಸಚಿವ ಪ್ರಕಾಶ ಹುಕ್ಕೇರಿ ಮಾತನಾಡಿ, ಸರ್ಕಾರ ಧಾರ್ಮಿಕ ಕೇಂದ್ರಗಳ ಮೇಲೆ ಹಿಡಿತ ಸಾಧಿಸಲು ಮುಂದಾಗುವುದಿಲ್ಲ. ಮಠ-ಮಂದಿರಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಸರ್ಕಾರ ಅಧಿಕಾರ ಚಲಾಯಿಸುತ್ತದೆ ಎಂಬ ವದಂತಿಗೆ ಕಿವಿಗೊಡಬೇಕಿಲ್ಲ. ಸರ್ಕಾರ ಮಠಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಮಠಗಳು ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗಾಗಿ ಶ್ರಮಿಸುತ್ತಿವೆ. ಹಾನಗಲ್ಲ ವಿರಕ್ತಮಠದ ಅಭಿವೃದ್ಧಿಗಾಗಿ ರು. 40 ಲಕ್ಷ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಿಸಿದರು.
ಹಾನಗಲ್ಲ ಶಾಸಕ ಮನೋಹರ ತಹಶೀಲ್ದಾರ ಮಾತನಾಡಿ, ಹಾನಗಲ್ಲ ವಿರಕ್ತಮಠದ ಆವರಣದಲ್ಲಿ ಲಿಂ. ಕುಮಾರ ಶಿವಯೋಗಿಗಳ ಕಂಚಿನ ಪುತ್ಥಳಿ ಸ್ಥಾಪಿಸಬೇಕಿದೆ. ವಿರಕ್ತಮಠದ ಅಭಿವೃದ್ಧಿ ಇಡೀ ಸಮುದಾಯದ ಅಭಿವೃದ್ಧಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಸಿ.ಎಂ. ಉದಾಸಿ ಮಾತನಾಡಿ, ಜಾತಿ-ಮತ-ಪಂಥಗಳ ಭೇದದಿಂದ ದೂರವುಳಿದು ಸಮಾನತೆಯ ಸಮೃದ್ಧ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಜಗಜ್ಯೋತಿ ಬಸವೇಶ್ವರ ಹಾಗೂ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಕಿತ್ತೂರು ರಾಣಿ ಚನ್ನಮ್ಮ ಅವರ ಕಂಚಿನ ಪುತ್ಥಳಿಗಳನ್ನು ಸ್ಥಾಪಿಸುವುದು ಬಹುಜನರ ಬೇಡಿಕೆಯಾಗಿತ್ತು. ಶ್ರೀಮಠ ಸಾಹಿತ್ಯ, ಶಿಕ್ಷಣ, ಸಂಸ್ಕೃತಿ, ಧರ್ಮಪ್ರಚಾರ ಕೇಂದ್ರವಾಗಿ ಜಾತ್ಯತೀತ ಮಠವಾಗಿದ್ದರಿಂದ ಇಲ್ಲಿಯೇ ಪುತ್ಥಳಿಗಳನ್ನು ಸ್ಥಾಪಿಸಲಾಯಿತು ಎಂದು ತಿಳಿಸಿದರು.
ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದರಾಜ ಯೋಗೀಂದ್ರ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಸಿದ್ದಲಿಂಗ ಸ್ವಾಮೀಜಿ, ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಬೆಳಗಾವಿ ರಾಜೂರು ಮಠದ ಕುಮಾರದೇವರು ಸಮ್ಮುಖ ವಹಿಸಿದ್ದರು.
ಪುತ್ಥಳಿಗಳ ದಾನಿಗಳಾದ ಹುಬ್ಬಳ್ಳಿಯ ಅಶೋಕ ಪಾಟೀಲ, ಮೋಟೆಬೆನ್ನೂರಿನ ಷಣ್ಮುಖಪ್ಪ ಬಳ್ಳಾರಿ, ಶಿಲ್ಪಿ ಬೆಳಗಾವಿಯ ಸಂಜಯ ಕಿಲ್ಲೇಕರ, ತಾಂತ್ರಿಕ ಸಹಕಾರ ನೀಡಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಿ.ವೈ. ಬಂಡಿವಡ್ಡರ ಅವರನ್ನು ಸನ್ಮಾನಿಸಲಾಯಿತು.
ಸಂಸದ ಶಿವಕುಮಾರ ಉದಾಸಿ, ಮಾಜಿ ಶಾಸಕ ನೆಹರು ಓಲೇಕಾರ ಇದ್ದರು. ಪುರಸಭೆ ಸದಸ್ಯ ಕಲ್ಯಾಣಕುಮಾರ ಶೆಟ್ಟರ ಸ್ವಾಗತಿಸಿದರು. ಮಾರುತಿ ಶಿಡ್ಲಾಪುರ, ವಿ.ವಿ. ಬೊಂದಾಡೆ ಕಾರ್ಯಕ್ರಮ ನಿರೂಪಿಸಿದರು. ನಿರಂಜನ ಗುಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.