ಕುಡಿವ ನೀರಿಗಾಗಿ ರಸ್ತೆ ತಡೆ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಡಿ. 24
ಸಮರ್ಪಕವಾಗಿ ಕುಡಿಯುವ ನೀರು ಪೂರೈಸದ ಪುರಸಭೆ ನಿರ್ಲಕ್ಷ್ಯ ಖಂಡಿಸಿ ಕೆಲ ನಿವಾಸಿಗಳು ಮಂಗಳವಾರ ಪಟ್ಟಣದ ಛತ್ರ ಕ್ರಾಸ್ ಬಳಿ ತಾಸಿಗೂ ಹೆಚ್ಚು ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಶೆಟ್ಟರ ಪ್ಲಾಟ್, ಒಡ್ಡರ ಓಣಿ, ಬಡಿಗೇರ ಚಾಳದ ನಿವಾಸಿಗಳು ಮುಂಜಾನೆ 7ರ ಸುಮಾರಿಗೆ ಚುಮುಚುಮು ಚಳಿಯಲ್ಲೇ ಖಾಲಿ ಕೊಡ ಹಾಗೂ ನೀರಿನ ಗಾಡಿಗಳೊಂದಿಗೆ ಬೀದಿಗಿಳಿದರು. ರಸ್ತೆ ಮಧ್ಯದಲ್ಲಿ ಕಲ್ಲುಗಳನ್ನಿಟ್ಟು ಪ್ರತಿಭಟನೆ ನಡೆಸಿದರು. ಇದರಿಂದ ಹಾವೇರಿ ಕಡೆಗೆ ತೆರಳುವ ವಾಹನಗಳು ಒಂದು ತಾಸು ತಡವಾಗಿ ಸಂಚರಿಸುವಂತಾಯಿತು.
ನಿವಾಸಿ ಪೀರಾಂಬಿ ದೇವಿಹೊಸೂರು ಮಾತನಾಡಿ, ವಾರದಿಂದ ಪಟ್ಟಣದ ಕೆಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವಂತೆ ಮಾಡಿದ್ದಾರೆ. ಕುಡಿಯುವ ನೀರಿಗಾಗಿ ಪರಿತಪಿಸಬೇಕಾಗಿದೆ. ಬಡವರೇ ಹೆಚ್ಚು ವಾಸವಾಗಿರುವ ಈ ಭಾಗದಲ್ಲಿ ಸ್ವಂತ ನಲ್ಲಿಯನ್ನು ಹೊಂದಿರುವುದಿಲ್ಲ. ಸಾರ್ವಜನಿಕ ನಳಗಳಲ್ಲೇ ಅಥವಾ ಖಾಸಗಿಯವರ ಬಳಿ ಕುಡಿಯುವ ನೀರು ತರುತ್ತಾರೆ ಎಂದರು.
ಕುಡಿಯುವ ನೀರಿಗಾಗಿ ಕೋಟಿಗಟ್ಟಲೆ ಅನುದಾನ ಬಂದಿದ್ದರೂ ಪಟ್ಟಣದ ಜನತೆಗೆ ನೀರಿನ ಬರ ತಪ್ಪಿಲ್ಲ. ಬಹುತೇಕ ಜನರು ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಈ ಪ್ರದೇಶಗಳಲ್ಲಿ ನಮ್ಮ ಸಮಸ್ಯೆ ಕೇಳುವವರೇ ಇಲ್ಲ ಎಂದರು.
ಎರಡು ತಿಂಗಳಿನಿಂದ ನದಿ ನೀರು ಪೂರೈಕೆ ಸ್ಥಗಿತಗೊಂಡಿದೆ. ಕೊಳವೆ ಬಾವಿ ನೀರು ಸುರಕ್ಷಿತ ಅಲ್ಲದಿದ್ದರೂ ಬದುಕುವುದಕ್ಕಾಗಿ ಆ ನೀರನ್ನೇ ಬಳಕೆ ಮಾಡಬೇಕಾಗಿದೆ. ಆದರೆ ಮೂರು ದಿನಗಳಿಂದ ಕೊಳವೆ ಬಾವಿ ನೀರು ಪೂರೈಕೆಯಾಗದೆ ಕೊಳಚೆ ಪ್ರದೇಶಗಳಲ್ಲಿ ಜೀವನ ಸಾಗಿಸುತ್ತಿರುವ ನಮ್ಮ ಗೋಳು ಪುರಸಭೆ ಅಧಿಕಾರಿಗಳ ಗಮನಕ್ಕೆ ಬರುತ್ತಿಲ್ಲ. ಶೆಟ್ಟರ್ ಪ್ಲಾಟ್ನ ಕುಡಿಯುವ ನೀರು ಹಾಗೂ ಇತರ ಸಮಸ್ಯೆ ಬಗೆಹರಿಸುವಂತೆ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.
ಎರಡು ತಿಂಗಳಿಂದ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಸಂಜೆಯಾದರೆ ಸಾಕು, ಸೊಳ್ಳೆಗಳ ಕಾಟ. ದುರ್ವಾಸನೆ ಹರಡುತ್ತಿದ್ದು, ಮೂಗು ಮುಚ್ಚಿಕೊಂಡು ಬದುಕಬೇಕಾಗಿದೆ. ಕಾಣದ ಕೈಗಳ ಒತ್ತಡಕ್ಕೆ ಮಣಿದಿರುವ ಪುರಸಭೆ ಸಿಬ್ಬಂದಿ ಈ ಪ್ರದೇಶವನ್ನು ಬಿಟ್ಟು ಹೋಗುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಿದ ಮೇಲೆ ನಿವಾಸಿಗಳು ಪ್ರತಿಭಟನೆಯನ್ನು ಕೈಬಿಟ್ಟರು. ಬೇಬಿಜಾನ್ ಶಿರಹಟ್ಟಿ, ಅನ್ವರ ಲಕ್ಷ್ಮೇಶ್ವರ, ಲಲಿತಾ ಡಾವಣಗೇರಿ, ಎಸ್. ರೇಣುಕಾ, ಸಂತೋಷ ವಡ್ಡರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

