ಹಾವೇರಿ

ಕನ್ನಡದ ಹಿರಿಮೆ-ಗರಿಮೆ ಅರಿಯಿರಿ

Published On :

ಹಿರೇಕೆರೂರು (ಸರ್ವಜ್ಞ ವೇದಿಕೆ), ಡಿ. 28
ಕನ್ನಡಿಗರಾದ ನಾವು ನಮ್ಮ ಭಾಷೆಯ ಹಿರಿಮೆ-ಗರಿಮೆಗಳನ್ನು ಮೊದಲು ಅರಿಯಬೇಕು. ದೃಶ್ಯ ಮಾಧ್ಯಮಗಳಲ್ಲಿ ಹೇರಳವಾಗಿ ಬಳಕೆಯಾಗುವ ಇಂಗ್ಲಿಷ್‌ಗೆ ಕಡಿವಾಣ ಹಾಕಬೇಕು. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ಎಂಬ ಸುನಾಮಿ ವಿರುದ್ಧ ಕನ್ನಡಿಗರು ಹೋರಾಡಿ, ಭಾಷೆ ಉಳಿಸಿಕೊಳ್ಳಬೇಕಿದೆ ಎಂದು ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕ, ಹಿರೇಕೆರೂರು ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ವಿ.ಎಸ್. ಆರಾಧ್ಯಮಠ ಕರೆ ನೀಡಿದರು.
ಅಬಲೂರು ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶನಿವಾರ ಹಮ್ಮಿಕೊಂಡ ಹಿರೇಕೆರೂರು ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿರೇಕೆರೂರು 128 ಗ್ರಾಮಗಳನ್ನು ಹೊಂದಿದ್ದು, ತಾಲೂಕಿನ ಎಲ್ಲ ಕೆರೆಗಳ ಹೂಳು ತೆಗೆಸಿ, ನೀರು ತುಂಬಿಸಬೇಕು. ಸಮರ್ಪಕ ವಿದ್ಯುತ್ ನೀತಿ ಜಾರಿಗೆ ಬರಬೇಕು. ಶಿಕ್ಷಣ, ಸಾಹಿತ್ಯ ಅಭಿವೃದ್ಧಿ ಇನ್ನಷ್ಟು ಆಗಬೇಕೆಂದು ಆಶಿಸಿದರು.
ಸರ್ವಜ್ಞ ಪ್ರಾಧಿಕಾರ ರಚಿಸಿ
ತ್ರಿಪದಿ ಕವಿ ಸರ್ವಜ್ಞನ ಊರಲ್ಲಿ ಕನ್ನಡದ ತೇರು ಜಾತ್ರೆಯಂತೆ ಸಾಗಿದೆ. 2100ಕ್ಕೂ ಹೆಚ್ಚು ಮೌಲಿಕ ತ್ರಿಪದಿಗಳನ್ನು ಬರೆದ ಸರ್ವಜ್ಞನ ಹೆಸರಿನಲ್ಲಿ ಪ್ರಾಧಿಕಾರ ರಚಿಸಲು ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಸರ್ವಜ್ಞನ ತ್ರಿಪದಿಗಳ ಕಿರು ಹೊತ್ತಿಗೆಗಳನ್ನು ಮುದ್ರಿಸಿ ಎಲ್ಲರಿಗೂ ಸುಲಭ ದರದಲ್ಲಿ ಸಿಗುವಂತೆ ಮಾಡಬೇಕು. ಮಹಾನುಭಾವರ ಮೂರ್ತಿಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದು ಅಪಮಾನ ಮಾಡಿದಂತೆ. ಮೂರ್ತಿ ನಿಲ್ಲಿಸಿದರೆ ರಕ್ಷಣೆ ಒದಗಿಸುವುದೂ ಮುಖ್ಯ ಎಂದರು.
ಸಾಹಿತಿ ಬಿ.ಜಿ. ಬಣಕಾರ ರಚಿಸಿದ ಸರ್ವಜ್ಞನ ಸಾಹಿತ್ಯ ಪುಸ್ತಕವನ್ನು ಪತ್ರಕರ್ತ ಮನೋಜ ಪಾಟೀಲ ಬಿಡುಗಡೆಗೊಳಿಸಿದರು.
ಅಬಲೂರು ಅಭಿವೃದ್ಧಿಗೆ ರು. 5 ಲಕ್ಷ
ಅಧ್ಯಕ್ಷತೆ ವಹಿಸಿದ್ದ ಶಾಸಕ ಯು.ಬಿ. ಬಣಕಾರ ಮಾತನಾಡಿ, ವಾಸ್ತವಿಕ ನೆಲೆಗಟ್ಟಿನ ತ್ರಿಪದಿಗಳ ಮೂಲಕ ಸಮಾಜವನ್ನು ಸರಿದಾರಿಗೆ ತಂದ ಕವಿ ಸರ್ವಜ್ಞ. ರಾಜಕೀಯ ಇಚ್ಛಾಶಕ್ತಿ ಸಾಲದೆ ಕನ್ನಡ ಭಾಷೆ ಸೊರಗಿದೆ. ಆಧುನಿಕ ತಂತ್ರಜ್ಞಾನದಲ್ಲಿ ಸವಾಲಾಗಿ ಸ್ವೀಕರಿಸಿ ಕನ್ನಡವನ್ನು ಬೆಳಸಬೇಕಾಗಿದೆ. ಅಬಲೂರಿನ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಲು ಯತ್ನಿಸಲಾಗುವುದು. ಗ್ರಾಮಕ್ಕೆ ಶಾಸಕರ ನಿಧಿಯಿಂದ ರು. 5 ಲಕ್ಷ ಅನುದಾನದ ಭರವಸೆ ನೀಡಿದರು.
ಜಗಳೂರು ತಾಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿ, ಶರಣರು, ಸಂತರು, ದಾರ್ಶನಿಕರು, ಅನುಭಾವಿಗಳು ಹಾಗೂ ಸಾಹಿತಿಗಳಿರುವ ಈ ನಾಡಿನಲ್ಲಿ ಎಲ್ಲರೂ ಪರೋಪಕಾರಿಗಳಾಗಿ ಜೀವಿಸಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಕಲಾ ಪ್ರದರ್ಶನ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ಎಸ್.ಪಿ. ಗೌಡರ್ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ವಿಧಾನಸಭಾಧ್ಯಕ್ಷ ಬಿ.ಜಿ. ಬಣಕಾರ, ಜಿಪಂ ಸದಸ್ಯೆ ಬಸಮ್ಮ ಅಬಲೂರು, ತಾಪಂ ಅಧ್ಯಕ್ಷೆ ರೇಣುಕಾ ಚಲವಾದಿ, ಸದಸ್ಯರಾದ ರೂಪಾ ಆಡೂರ, ಆರ್.ಎನ್. ಗಂಗೋಳ, ಬಸನಗೌಡ ಕಳ್ಳೇರ, ಚಂದ್ರು ಅಣ್ಣಪ್ಪನವರ, ಕರವೇ ಜಿಲ್ಲಾಧ್ಯಕ್ಷ ಕರಬಸಯ್ಯ ಬಸರಿಹಳ್ಳಮಠ, ಗಿರೀಶ ಬಾರ್ಕಿ, ಎಚ್.ಎಸ್. ಕೋಣನವರ ಇದ್ದರು.
ಭುವನೇಶ್ವರಿ ದೇವಿ, ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ
ಹಿರೇಕೆರೂರು: ಅಬಲೂರು ಗ್ರಾಮದಲ್ಲಿ ಜರುಗಿದ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಗ್ರಾಮದಲ್ಲಿ ಹಬ್ಬದ ಸಂಭ್ರಮ ಸೃಷ್ಟಿಸಿತ್ತು. ಗ್ರಾಮದ ಬೀದಿಗಳಲ್ಲಿ ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ದೇವಸ್ಥಾನದ ಆವರಣದಿಂದ ಕನ್ನಡ ನಾಡದೇವಿ ಭುವನೇಶ್ವರಿ ಭಾವಚಿತ್ರ, ಸಮ್ಮೇಳನಾಧ್ಯಕ್ಷ ವಿ.ಎಸ್. ಆರಾಧ್ಯಮಠ ದಂಪತಿಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಆಶುಕವಿ ಸರ್ವಜ್ಞನ ರೂಪಕ, ಸಾಂಸ್ಕೃತಿಕ ವೈಭವದ ಮೆರವಣಿಗೆಗೆ ಜಾನಪದ ಕಲಾ ತಂಡಗಳಾದ ಡೊಳ್ಳು, ಜಾಂಜ್, ಕಹಳೆ, ಕುದುರೆ ಕುಣಿತ, ಪುರವಂತಿಕೆ, ಕರಡಿಮಜಲು ಹಾಗೂ ಸ್ತಬ್ಧಚಿತ್ರಗಳು ಸೊಬಗು ನೀಡಿದವು. ತಹಸೀಲ್ದಾರ್ ಶಕುಂತಲಾ ಚೌಗುಲೆ ರಾಷ್ಟ್ರಧ್ವಜ, ತಾಲೂಕು ಕಸಾಪ ಅಧ್ಯಕ್ಷ ಎಸ್.ಪಿ. ಗೌಡರ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ಮೆರವಣಿಗೆಯಲ್ಲಿ ಮಾಜಿ ವಿಧಾನ ಸಭಾಧ್ಯಕ್ಷ ಬಿ.ಜಿ. ಬಣಕಾರ, ಜಿಪಂ ಸದಸ್ಯೆ ಬಸಮ್ಮ ಅಬಲೂರು, ತಾಪಂ ಅಧ್ಯಕ್ಷೆ ರೇಣುಕಾ ಚಲವಾದಿ, ಸದಸ್ಯರಾದ ರೂಪಾ ಆಡೂರ, ಆರ್.ಎನ್. ಗಂಗೋಳ, ಬಸನಗೌಡ ಕಳ್ಳೇರ, ಚಂದ್ರು ಅಣ್ಣಪ್ಪನವರ, ತಾಪಂ ಇಒ ಡಿ.ಎಂ. ಜನವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ. ಆನಂದ, ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ, ಪಪಂ ಉಪಾಧ್ಯಕ್ಷ ಮಹೇಂದ್ರ ಬಡಳ್ಳಿ, ರಾಘವೇಂದ್ರ ಹಂಚಿನಮನಿ, ಅಶೋಕ ಗೊಲ್ಲರ, ಕರವೇ ಜಿಲ್ಲಾಧ್ಯಕ್ಷ ಕರಬಸಯ್ಯ ಬಸರಿಹಳ್ಳಮಠ, ತಾಲೂಕಾಧ್ಯಕ್ಷ ಗಿರೀಶ ಭಾರ್ಕಿ, ನ್ಯಾಯವಾದಿ ಎಚ್.ಎಸ್. ಕೋಣನವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.