ಉತ್ತಮ ಹವ್ಯಾಸಗಳಿಂದ ಬದುಕು ಕ್ರಿಯಾಶೀಲ: ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ
ಗದಗ: ಸಂಗೀತ-ಸಾಹಿತ್ಯ-ಸಾಂಸ್ಕೃತಿಕ ರಂಗದ ಅಭಿರುಚಿಯ ಸಾಧನೆಯ ಹವ್ಯಾಸಗಳು ಮಾನವನ ಯಾಂತ್ರಿಕ ಬದುಕನ್ನು ಕ್ರಿಯಾಶೀಲಗೊಳಿಸಿ ಸೃಜನಶೀಲತೆ ನೀಡುವವು ಎಂದು ಜ. ತೋಂಟದ ಡಾ. ಸಿದ್ದಲಿಂಗ ಶ್ರೀಗಳು ಹೇಳಿದರು. ಜ. ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ 2151ನೇ ಶಿವಾನುಭವದಲ್ಲಿ ರಾಷ್ಟ್ರಕವಿ ಶಿವರುದ್ರಪ್ಪ ಅವರಿಗೆ ನುಡಿನಮನ ಹಾಗೂ ಗದುಗಿನ ರಾಜೇಶ್ವರಿ ಕಲಾ ಕುಟೀರದ 12ನೇ ವಾರ್ಷಿಕೋತ್ಸವ ನಿಮಿತ್ತ ನಡೆದ ಸಂಗೀತ ನೃತ್ಯೋಲ್ಲಾಸ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ನಿಧನದಿಂದ ಕುವೆಂಪು ಅವರ ಅಗ್ರಗಣ್ಯ ಸಾಂಸ್ಕೃತಿಕ ವಾರಸುದಾರಿಕೆ ಪರಂಪರೆ ಬಡವಾಗಿದೆ ಎಂದರು. ಡಿಜಿಎಂ ಆಯುರ್ವೇದಿಕ್ ಕಾಲೇಜಿನ ಪ್ರಾಧ್ಯಾಪಕ ಡಾ. ಆರ್.ಆರ್. ಜೋಶಿ ಅಧ್ಯಕ್ಷತೆ ವಹಿಸಿದ್ದರು. ರಾಜೇಶ್ವರಿ ಕಲಾ ಕುಟೀರದ ವಿದ್ಯಾರ್ಥಿಗಳ ನೃತ್ಯ, ಸಂಗೀತ ಕಾರ್ಯಕ್ರಮ ಮನ ಸೆಳೆಯಿತು. ಹಿರಿಯ ದೊಡ್ಡಾಟ ಕಲಾವಿದ ಬಸಣ್ಣ ಸರಲಾ, ಚೈತನ್ಯ ಸಂಗೀತ ಪಾಠಶಾಲೆ ಮುಖ್ಯಸ್ಥ ಆರ್.ಎಲ್. ಪುರಾಣಿಕ ಅವರನ್ನು ಸನ್ಮಾನಿಸಲಾಯಿತು. ಅರುಣಕುಮಾರ ಯರಾಶಿ, ಮಲ್ಲಿಕಾರ್ಜುನ ಯರಾಶಿ, ರಾಜು ವೆರ್ಣೇಕರ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಾ ಕುರಡಗಿ, ಕಾರ್ಯದರ್ಶಿ ಈರಣ್ಣ ಹೊನಗಣ್ಣವರ, ಸಹಕಾರ್ಯದರ್ಶಿ ಗುರುಬಸವಲಿಂಗ ತಡಸದ, ಕೋಶಾಧ್ಯಕ್ಷ ಪ್ರಭಯ್ಯ ಹಿರೇಮಠ, ಮುರಳೀಧರ ಹರಿದಾಸ ಇದ್ದರು. ರಾಷ್ಟ್ರಕವಿ ದಿ. ಜಿ.ಎಸ್. ಶಿವರುದ್ರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಸ್.ಎನ್. ಆದಿ ಸ್ವಾಗತಿಸಿದರು. ಅಂದಾನೆಪ್ಪ ವಿಭೂತಿ ನಿರೂಪಿಸಿದರು.
ಮಡಿವಾಳರ ಜಾಗೃತಿ ಸಮಾವೇಶಕ್ಕೆ 10 ಸಾವಿರ ಜನ: ಗುಡಿಮನಿ
ಹಾನಗಲ್ಲ: ಕರ್ನಾಟಕ ರಾಜ್ಯ ಮಡಿವಾಳರ ಸಂಘದಿಂದ ಬೆಂಗಳೂರಿನಲ್ಲಿ ಜ. 5ರಂದು ಏರ್ಪಡಿಸಲಾಗಿರುವ ರಾಜ್ಯ ಮಡಿವಾಳರ ಜಾಗೃತಿ ಸಮಾವೇಶದಲ್ಲಿ ಹಾನಗಲ್ಲ ತಾಲೂಕಿನಿಂದ 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಮಡಿವಾಳ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ ಎಂದು ಸಂಘದ ತಾಲೂಕು ಅಧ್ಯಕ್ಷ ಪಿ.ವೈ. ಗುಡಗುಡಿ ಹೇಳಿದ್ದಾರೆ. ಹಾನಗಲ್ಲಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿವಾಳರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕೆಂಬ ಉದ್ದೇಶದಿಂದ ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜ. 5ರಂದು ಬೆಳಗ್ಗೆ ಸಮಾವೇಶ ನಡೆಯಲಿದೆ. ಪಾಲ್ಗೊಳ್ಳುವವರಿಗೆ ವಾಹನ ಮತ್ತು ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ದೇಶದ 17 ರಾಜ್ಯಗಳಲ್ಲಿ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ನಮ್ಮಲ್ಲೂ ಪ್ರೊ ಅನ್ನಪೂರ್ಣಾ ವರದಿಯಂತೆ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸುವುದು, ಸಮುದಾಯದ ಕುಲಗುರು ಮಾಚಿದೇವರ ಜನ್ಮಸ್ಥಳ ಬಿಜಾಪುರ ಜಿಲ್ಲೆಯ ದೇವರಹಿಪ್ಪರಗಿಯನ್ನು ಅಭಿವೃದ್ಧಿಪಡಿಸಿ, ಅದರ ನಿರ್ವಹಣೆಗೆ ಮಾಚಿದೇವ ಪ್ರಾಧಿಕಾರ ರಚಿಸುವುದು, ಮಾಚಿದೇವ ಅಧ್ಯಯನ ಪೀಠ ಮತ್ತು ಮಾಚಿದೇವರ ಜನ್ಮದಿನವನ್ನು ಸರ್ಕಾರದ ವತಿಯಿಂದ ಆಚರಿಸುವುದು ಮುಂತಾದ ಬೇಡಿಕೆಗಳ ಮನವಿಯನ್ನು ಸಮಾವೇಶದಲ್ಲಿ ಭಾಗವಹಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುತ್ತದೆ ಎಂದರು. ಸಂಘದ ಉಪಾಧ್ಯಕ್ಷ ಗುತ್ತೆಪ್ಪ ಮಡಿವಾಳರ, ಕಾರ್ಯದರ್ಶಿ ಪರಸಪ್ಪ ಈರಪ್ಪ ಮಡಿವಾಳರ, ಮುಖಂಡರಾದ ಭರಮಣ್ಣ ಮಡಿವಾಳರ, ಸತೀಶ ಸಾಗರವಳ್ಳಿ, ಸುರೇಶ ಮಡಿವಾಳರ, ಮಹೇಶ ವಾಸನದ, ಶಶಿಧರ ಶಕುನವಳ್ಳಿ, ಬಂಗಾರಪ್ಪ ಹೋತನಹಳ್ಳಿ, ಶಿವಪುತ್ರಪ್ಪ ಶಕುನವಳ್ಳಿ ಇದ್ದರು.
ಜ. 1ರಂದು ಓಲೇಕಾರ ಜನ್ಮದಿನ ಕಾರ್ಯಕ್ರಮ
ಹಾವೇರಿ: ಮಾಜಿ ಶಾಸಕ ನೆಹರೂ ಓಲೇಕಾರ ಅವರ 57ನೇ ಹುಟ್ಟು ಹಬ್ಬವನ್ನು ಜ. 1ರಂದು ಬೆಳಗ್ಗೆ 11 ಗಂಟೆಗೆ ತಾಲೂಕಿನ ಹೊಸರಿತ್ತಿಯ ಹುತಾತ್ಮ ಮೈಲಾರ ಮಹಾದೇವ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ. ನೆಹರೂ ಓಲೇಕಾರ ಅಭಿಮಾನಿ ಬಳಗ ಆಯೋಜಿಸಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾಯಾಧ್ಯಕ್ಷ ಬಿ.ಜಿ. ಗೌರಿಮನಿ ವಹಿಸಲಿದ್ದಾರೆ. ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನರ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ತಾಪಂ ಉಪಾಧ್ಯಕ್ಷ ಪ್ರಕಾಶ ಬಣಕಾರ, ಶಿವಬಸವ ವನಳ್ಳಿ, ಎಪಿಎಂಸಿ ಅಧ್ಯಕ್ಷ ಮುರುಗೇಶ ಅಂಗಡಿ, ನಿಂಗಪ್ಪ ಮೈಲಾರ, ರುದ್ರಪ್ಪ ಹಾವೇರಿ, ಅಭಿಮಾನಿ ಬಳಗದ ಅಧ್ಯಕ್ಷ ಕೆ.ಸಿ. ಕೋರಿ, ಉಪಾಧ್ಯಕ್ಷ ಶಿವಕುಮಾರ ಸಂಗೂರ ಭಾಗವಹಿಸಲಿದ್ದಾರೆ. ಪ್ರಾಚಾರ್ಯ ಲಿಂಗಯ್ಯ ಬಿ. ಹಿರೇಮಠ ನೆಹರೂ ಓಲೇಕಾರ ಕುರಿತು ಅಭಿಮಾನದ ನುಡಿ ಆಡಲಿದ್ದಾರೆ. ಡಾ ರುದ್ರಪ್ಪ ಹಳ್ಳಿಕೇರಿ, ಭೀಮಣ್ಣ ಅಂಬಿಗೇರ, ಧೀರೇಂದ್ರ ಏಕಬೋಟೆ, ಮಹಾದೇವಪ್ಪ ಕಾರಂಜಿ, ಮಂಜುನಾಥ ಬಳ್ಳಾರಿ ಅವರಿಗೆ ಸನ್ಮಾನ, 250 ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್, ಪೆನ್ ವಿತರಣೆ ಹಾಗೂ ರಕ್ತದಾನ ಶಿಬಿರ ನಡೆಸಲಾಗುವುದು. ದೂರದರ್ಶನ ಕಲಾವಿದ ಧಾರವಾಡದ ಮಹಾದೇವ ಸತ್ತಿಗೇರಿ ಅವರ ಹಾಸ್ಯ, ಮಹಾಂತೇಶ ಹಡಪದ ಅವರ ಮಿಮಿಕ್ರಿ ಇದೆ ಎಂದು ಅಭಿಮಾನಿ ಬಳಗದ ಸುರೇಶ ಹೊಸಮನಿ ವಿನಂತಿಸಿದ್ದಾರೆ.
ಹಿರೇಬಿದರಿ ಗ್ರಾಪಂ ಅಧ್ಯಕ್ಷರಾಗಿ ಮಾದೇವಕ್ಕ ಆಯ್ಕೆ
ರಾಣಿಬೆನ್ನೂರು: ತಾಲೂಕಿನ ಹಿರೇಬಿದರಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಮಾದೇವಕ್ಕ ನೀಲಪ್ಪ ಬೇಲೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆದಿತ್ತು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಹನುಮಂತಪ್ಪ ಬಡದಾಳ ಕರ್ತವ್ಯ ನಿರ್ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ರೇಣುಕವ್ವ ಕಡೇಮನಿ, ಸದಸ್ಯರಾದ ಹೊಳಿಬಸನಗೌಡ ಪಾಟೀಲ, ಶಾಂತವ್ವ ಸಂಗಾನವರ, ಕರಿಯಪ್ಪ ಬಿರಾಳ, ಮಮತಾ ಸಾವಕ್ಕಳವರ, ರೇಣುಕಾ ಕಡೆಮನಿ, ಛತ್ರಪ್ಪ ದಿಬ್ಬದ, ಸುರೇಶ ಬಿರಾಳ, ರೇಣುಕವ್ವ ಜಾಲಗಾರ, ಮರಿಯಪ್ಪ ಕೊಟ್ರಪ್ಪರ, ಗ್ರಾಪಂ ಪ್ರಭಾರ ಪಿಡಿಒ ಪ್ರಕಾಶ ದುಳೆಹೊಳಿ, ಉಪ ತಹಸೀಲ್ದಾರ್ ಚಿಕ್ಕೇಶ, ಮೆಡ್ಲೇರಿ ನಾಡ ಕಚೇರಿಯ ಕಂದಾಯ ಅಧಿಕಾರಿ ಎಂ.ಎಂ. ಸೌದಾಗರ, ಜಿ.ಆರ್, ತಹಶೀಲ್ದಾರ ಮುಂತಾದವರು ಇದ್ದರು.
ಜ. 11ಕ್ಕೆ ವಾಲ್ಮೀಕಿ ಸಮಾವೇಶ
ಶಿಗ್ಗಾಂವಿ: ರಾಜ್ಯ ಮಟ್ಟದ ವಾಲ್ಮೀಕಿ ನಾಯಕ ಜನಾಂಗದ ಸಮಾವೇಶವನ್ನು ಅಬಕಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಜ. 11ರಂದು ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಪೂರ್ವಭಾವಿ ಸಭೆ ನಡೆಯಿತು. ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಡಾ ಬಿ.ಎಚ್. ವೀರಣ್ಣನವರ, ಮುಖಂಡರಾದ ಗುರುನಗೌಡ ಪಾಟೀಲ, ಜನತಾ ಬಜಾರ್ ಅಧ್ಯಕ್ಷ ಎಂ.ಪಿ. ಪಾಟೀಲ, ನಿವೃತ್ತ ಶಿಕ್ಷಕ ಎಂ. ಎಚ್. ಚೋಟಪ್ಪನವರ, ರಾಜ್ಯ ಕಾಂಗ್ರೆಸ್ ಎಸ್ಟಿ ಮೋರ್ಚಾ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಎಲ್ಲಪ್ಪಗೌಡ ಪಾಟೀಲ, ಶಾಂತಪ್ಪ ತಳವಾರ, ಸಿ.ಆರ್. ಪಾಟೀಲ ಮುಂತಾದವರು ಸಭೆಯಲ್ಲಿದ್ದರೆಂದು ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ವಾಲಿಕಾರ, ಸಹಕಾರ್ಯದರ್ಶಿ ರಾಮು ತಳವಾರ ತಿಳಿಸಿದ್ದಾರೆ.
ಇಂದು ಸುಗಮ ಸಂಗೀತ
ರಾಣಿಬೆನ್ನೂರು: ತಾಲೂಕಿನ ಇಟಗಿ ಗ್ರಾಮದ ಹಾಲಸ್ವಾಮಿ ಸೇವಾ ಟ್ರಸ್ಟ್ ಸಮಿತಿ, ಶಾಂತಿ ನಿಕೇತನ ಕಾನ್ವೆಂಟ್ ಹಾಗೂ ಹಿರಿಯ ಪ್ರಾಥಮಿಕ ಶಾಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಡಿ. 30ರಂದು ಸಂಜೆ 6 ಗಂಟೆಗೆ ಇಟಗಿ ಗ್ರಾಮದ ಹಾಲಸ್ವಾಮಿ ರಂಗಮಂದಿರದಲ್ಲಿ ಕಿರುತೆರೆಯ ಸಂಗೀತ ಕಲಾವಿದ ಬಿ.ಎ. ಸುನೀಲ್ ಹಾಗೂ ಸಂಗಡಿಗರಿಂದ ಸುಗಮ ಸಂಗೀತ, ಭಕ್ತಿಲಹರಿ ಮತ್ತು ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ. ಸಮಿತಿ ಅಧ್ಯಕ್ಷ ನಿಂಗಪ್ಪ ಬಡಪ್ಪನವರ ಅಧ್ಯಕ್ಷತೆ ವಹಿಸುವರು. ಶಾಸಕರಾದ ಕೆ.ಬಿ. ಕೋಳಿವಾಡ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯರಾದ ಜ್ಯೋತಿ ರಾಮಲಿಂಗಣ್ಣನವರ, ಜಿಪಂ ಮಾಜಿ ಉಪಾಧ್ಯಕ್ಷ, ನ್ಯಾಯವಾದಿ ಎಸ್.ಎಸ್. ರಾಮಲಿಂಗಣ್ಣನವರ, ತಾಪಂ ಮಾಜಿ ಅಧ್ಯಕ್ಷ, ರಾಜ್ಯ ರೈತ ಸಂಘದ ಸಂಚಾಲಕ ರವಿಂದ್ರಗೌಡ ಎಫ್. ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಶಶಿಕಲಾ ಹುಡೇದ, ವಿಕಾರ್ಡ್ ಸಂಸ್ಥೆಯ ಅಧ್ಯಕ್ಷ ಏಕಾಂತ ಮುದಿಗೌಡ್ರ, ದಯಾಲಾಲ ಸಂಘದ ವಿ.ಜೆ.ಎಂ. ಮಠದ ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.
ಇಂದು ರಕ್ತದಾನ ಶಿಬಿರ
ರಾಣಿಬೆನ್ನೂರು: ಇಲ್ಲಿನ ಗಂಗಾ ವಿವಿಧೋದ್ದೇಶ ಸಹಕಾರಿ ಸಂಘ ಹಾಗೂ ಹಾವೇರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಆಶ್ರಯದಲ್ಲಿ ಸಂಘದ ಸಭಾಭವನದಲ್ಲಿ ಡಿ. 30ರಂದು ಬೆಳಗ್ಗೆ 10.30ಕ್ಕೆ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಶಿಬಿರದಲ್ಲಿ ಜಿಲ್ಲಾಸ್ಪತ್ರೆ ವೈದ್ಯ ಡಾ ಬಿ.ಎಸ್. ಅಂಗಡಿ, ಡಾ ಎನ್.ಎಸ್. ದೊಡ್ಮನಿ, ತರಳಬಾಳು ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ ಶಿವಲಿಂಗಪ್ಪ, ಆರ್ಟಿಐಎಸ್ ಕಾಲೇಜಿನ ಅಧ್ಯಕ್ಷ ಸುಭಾಸ ಸಾಹುಕಾರ, ಬಿಎಜೆಎಸ್ಎಸ್ ಮಹಿಳಾ ಕಾಲೇಜಿನ ಆಡಳಿತಾಧಿಕಾರಿ ಡಾ ಆರ್.ಎಂ. ಕುಬೇರಪ್ಪ, ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಕೆ. ಶಿವಲಿಂಗಪ್ಪ, ಮುಖಂಡರಾದ ಕೃಷ್ಣಮೂರ್ತಿ ಸುಣಗಾರ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದ ಡಾ ಮುರಳೀಧರ, ವರ್ತಕ ಚಂದ್ರಣ್ಣ ತಿಳುವಳ್ಳಿ ಆಗಮಿಸುವರು.
ಹೊಸ ವರ್ಷಕ್ಕೆ ಸ್ವಾಗತ: ಮಕ್ಕಳಿಗೆ ವಿವಿಧ ಸ್ಪರ್ಧೆ
ಹಾವೇರಿ: ನಗರದ ಓಂ ತಂಡದ ಯುವಕರ ವತಿಯಿಂದ ಪ್ರತಿ ವರ್ಷದಂತೆ ಈ ಸಲವೂ ಹೊಸ ವರ್ಷದ ನಿಮಿತ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಡಿ. 31ರಂದು ಬೆಳಗ್ಗೆ 6.30ರಿಂದ 8 ಗಂಟೆಯ ವರೆಗೆ 1ರಿಂದ 10ನೇ ತರಗತಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ಥಳದಲ್ಲಿಯೇ ಬಹುಮಾನ ವಿತರಿಸಲಾಗುವುದು. ಬೆಳಗ್ಗೆ 6.30ರ ಒಳಗೆ ಬಂದವರಿಗೆ ಮಾತ್ರ ಅವಕಾಶ. ಆಸಕ್ತರು ಮಾಹಿತಿಗೆ ಪ್ರಶಾಂತ ಅಸುಂಡಿ (ಮೊ. 7204339604) ಮತ್ತು ಗಣೇಶ ರಾಯ್ಕರ (ಮೊ. 8553711812) ಸಂಪರ್ಕಿಸಲು ಕೋರಲಾಗಿದೆ.
ಇಂದಿನಿಂದ ರಥೋತ್ಸವ
ಬ್ಯಾಡಗಿ: ಬಿಸಲಹಳ್ಳಿ ಗ್ರಾಮದ ಹೊಳಿಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವ, ಗುಗ್ಗಳ ಹಾಗೂ ರಥೋತ್ಸವ ಡಿ. 30 ಹಾಗೂ 31ರಂದು ನಡೆಯಲಿವೆ. ಡಿ. 30ರಂದು ಮುಂಜಾನೆ 6ಕ್ಕೆ ರೇವಣಸಿದ್ದಸ್ವಾಮಿಗಳ ಸಾನ್ನಿಧ್ಯದಲ್ಲಿ ಹೊಳಿಬಸವೇಶ್ವರ ಸ್ವಾಮಿ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಂಜೆ 7ಕ್ಕೆ ಚೌಡೇಶ್ವರಿ ದೇವಿಗೆ ಕುಂಕುಮಾರ್ಚನೆ ನಡೆಯಲಿದೆ. ರಾತ್ರಿ 9ಕ್ಕೆ ಗ್ರಾಮದ ಹೊಳಿ ಬಸವೇಶ್ವರ, ಬಸವಣ್ಣದೇವರು, ಆಂಜನೇಯಸ್ವಾಮಿ, ಮಾಲತೇಶಸ್ವಾಮಿ, ಕರಿಯಮ್ಮದೇವಿ, ಮರಿಯಮ್ಮದೇವಿ, ಕಲ್ಮೇಶ್ವರ ಸ್ವಾಮಿ, ಬೀರೇಶ್ವರಸ್ವಾಮಿ, ಬನಶಂಕರಿದೇವಿ, ದುರ್ಗಾದೇವಿ ಹಾಗೂ ರಾಮಲಿಂಗೇಶ್ವರ ಸ್ವಾಮಿಗೆ ಕಾರ್ತಿಕೋತ್ಸವ ನಡೆಯಲಿದೆ. ಡಿ. 31ರ ಮುಂಜಾನೆ 8ಕ್ಕೆ ಹೊಳಿಬಸವೇಶ್ವರ ಸ್ವಾಮಿ ಮಠದಿಂದ ಗುಗ್ಗಳ ಹಾಗೂ ರಥೋತ್ಸವ ಮುತ್ತೈದೆಯರ ಆರತಿ ಮತ್ತು ಸಕಲ ವಾದ್ಯ ವೈಭವದೊಂದಿಗೆ ಜರುಗಲಿದೆ. ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ 3ಕ್ಕೆ ಹೊಳಿ ಬಸ ವೇಶ್ವರ ಸಭಾಭವನದಲ್ಲಿ ಸಂಗೀತ ಸೇವೆ ಹಾಗೂ ರೇವಣಸಿದ್ದ ಸ್ವಾಮಿಗಳ ಆಶೀರ್ವಚನ ನಡೆಯಲಿದೆ. ರಾತ್ರಿ 10ಕ್ಕೆ ಸ್ಥಳೀಯ ಹೊಳಿಬಸವೇಶ್ವರ ತರುಣ ಕಲಾ ನಾಟ್ಯಸಂಘದಿಂದ 'ಸಾವು ತಂದ ಸೌಭಾಗ್ಯ' ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ದೇವಸ್ಥಾನ ಸೇವಾ ಸಮಿತಿ ತಿಳಿಸಿದೆ.
ಜ. 2ರಿಂದ ಕಬಡ್ಡಿ ಆಯ್ಕೆ ಟ್ರಯಲ್ಸ್
ಬ್ಯಾಡಗಿ: ಧಾರವಾಡದ ಭಾರತೀಯ ಕ್ರೀಡಾ ಪ್ರಾಧಿಕಾರದ ಕ್ರೀಡಾ ಹಾಸ್ಟೆಲ್ಗೆ (ಕಬಡ್ಡಿ) ಆಯ್ಕೆ ಪ್ರಕ್ರಿಯೆ ಜ. 2ರಿಂದ 5ರ ವರೆಗೆ ಪ್ರತಿದಿನ ಬೆಳಗ್ಗೆ 9 ಗಂಟೆಗೆ ನಡೆಯಲಿದೆ. 12ರಿಂದ 15 ವಯೋವುತಿಯ ಬಾಲಕರು ಆಯ್ಕೆ ಪ್ರಕ್ರಿಯೆಗೆ ಅರ್ಹರು. ಆಯ್ಕೆಯಾದ ಕ್ರೀಡಾಪಟುಗಳಿಗೆ ಊಟ, ವಸತಿ, ಶಿಕ್ಷಣ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುವುದು. ರಹವಾಸಿ, ಜನನ, ವ್ಯಾಸಂಗ, ನಡತೆ, ವೈದ್ಯಕೀಯ ಹಾಗೂ ಕ್ರೀಡಾ ಸಾಧನೆ ಪ್ರಮಾಣ ಪತ್ರಗಳನ್ನು (ಮೂಲ ದಾಖಲಾತಿ ಮತ್ತು ಯಥಾಪ್ರತಿ) ಕಡ್ಡಾಯವಾಗಿ ಹಾಜರಿಪಡಿಸತಕ್ಕದ್ದು. ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದ ಕಬಡ್ಡಿ ಕೂಟಗಳಲ್ಲಿ ಭಾಗವಹಿಸಿದ್ದರೆ ಆದ್ಯತೆ ನೀಡಲಾಗುವುದು. ಉತ್ತಮ ದೇಹದಾರ್ಢ್ಯ ಹೊಂದಿರುವ ಆಸಕ್ತ ಕಬಡ್ಡಿ ಕ್ರೀಡಾಪಟುಗಳು ಹೆಚ್ಚಿನ ವಿವರಗಳಿಗಾಗಿ ಆಡಳಿತಾಧಿಕಾರಿ ಗಣೇಶ್ ವಾಡ್ಕರ್(9480369154), ತರಬೇತುದಾರ ಡಾ ಈಶ್ವರ ಅಂಗಡಿ (9845566732), ಜಿಲ್ಲಾ ಕಬಡ್ಡಿ ಸಂಸ್ಥೆ ಕಾರ್ಯದರ್ಶಿ ಶಿವಾನಂದ ಮಲ್ಲನಗೌಡರ (9916622602) ಅವರನ್ನು ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

