ಹಾವೇರಿ

ಬೆಳೆವಿಮೆ, ಬರಪರಿಹಾರ ಕೈಗೊಳ್ಳಿ

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಫೆ.4
ರೈತ ಸಮುದಾಯದತ್ತ ಲಕ್ಷ್ಯ ವಹಿಸದ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮಳೆ ವೈಫಲ್ಯದಿಂದ ಹಾನಗಲ್ಲ ತಾಲೂಕಿನ ಬೆಳೆ ನಷ್ಟವಾಗಿದ್ದರೂ ಬೆಳೆ ವಿಮೆಗೆ ಗಮನಹರಿಸದೆ, ಬರ ಪರಿಹಾರ ಕಾರ್ಯಗಳತ್ತಲೂ ಲಕ್ಷ್ಯ ವಹಿಸದೆ ರೈತ ವಿರೋಧಿ ಚಟುವಟಿಕೆ ಅನುಸರಿಸುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶೀಘ್ರ ಬೆಳೆ ವಿಮೆ ಬಿಡುಗಡೆಗೊಳಿಸಿ ಹಾಗೂ ಬರಪರಿಹಾರ ಕಾಮಗಾರಿ ಆರಂಭಿಸಬೇಕೆಂದು ರೈತರು ಒತ್ತಾಯಿಸಿದರು.
ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಹಾನಗಲ್ಲಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ವಿವಿಧ ಬೇಡಿಕೆಗಳು: ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಪಡೆದ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ನೀರಾವರಿ ಪಂಪ್‌ಗಳಿಗೆ ಪ್ರತಿನಿತ್ಯ ನಿರಂತರ ಕನಿಷ್ಠ 12 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಕೆ, ಬರುವ ಹಂಗಾಮಿಗಾಗಿ ಮೇ ತಿಂಗಳ ಆರಂಭದಲ್ಲಿಯೇ ಉಚಿತ ಬೀಜ ಹಾಗೂ ಗೊಬ್ಬರ ಪೂರೈಸುವುದು, ಪ್ರಸಕ್ತ ವರ್ಷದ ಬೆಳೆ ಹಾನಿಗೆ ಸಂಬಂಧಿಸಿ ಪ್ರತಿ ಎಕರೆಗೆ ರು. 10 ಸಾವಿರ ಪರಿಹಾರ ನೀಡುವುದು, ಗೋವಿನ ಜೋಳ ಹಾಗೂ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ರು. 2 ಸಾವಿರ ಬೆಂಬಲ ಬೆಲೆ ನಿಗದಿಪಡಿಸುವುದು, ರಾಸಾಯನಿಕ ಗೊಬ್ಬರದ ಸಹಾಯಧನ ಹೆಚ್ಚಿಸಿ, ಕಡಿಮೆ ಬೆಲೆಯಲ್ಲಿ ಗೊಬ್ಬರ ಪೂರೈಸುವುದು, 60 ವರ್ಷಕ್ಕಿಂತ ಹಿರಿಯರಾದ ರೈತರಿಗೆ ತಿಂಗಳಿಗೆ ರು. 2 ಸಾವಿರ ಪಿಂಚಣಿ ಮಂಜೂರಿ ಮಾಡುವುದು, ಕೃಷಿ ಇಲಾಖೆಯಿಂದ ಕೊಡಮಾಡುವ ಸೌಲಭ್ಯಗಳು ಪಾರದರ್ಶಕವಾಗಿ ಅರ್ಹ ರೈತರಿಗೆ ಸಿಗುವಂತೆ ಕ್ರಮ ಜರುಗಿಸುವುದು, ಪಂಪ್‌ಸೆಟ್‌ಗಳ ಹಳೆಯ ವಿದ್ಯುತ್ ಬಿಲ್ ಮನ್ನಾ ಮಾಡುವುದು, ಅಕ್ರಮ ವಿದ್ಯುತ್ ಸಂಪರ್ಕ ಸಕ್ರಮಗೊಳಿಸುವುದು, ಭೂಕಂದಾಯ ಹಾಗೂ ನೀರಿನ ಬಿಲ್ ಮನ್ನಾ ಮಾಡುವುದು ಹಾಗೂ ಉತಾರಗಳನ್ನು ಪಡೆಯಲು ರು. 5 ಶುಲ್ಕ ನಿಗದಿಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಕೃತಿ ದಹನ: ಸ್ಥಳೀಯ ಮಹಾತ್ಮಾ ಗಾಂಧಿ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ತಾಲೂಕಿನಲ್ಲಿ ಗಂಭೀರ ಬರಪರಿಸ್ಥಿತಿ ಇದ್ದಾಗಲೂ ಇದಕ್ಕೆ ವ್ಯತಿರಿಕ್ತವಾಗಿ ಸಮೃದ್ಧಿ ಇದೆ ಎಂದು ಹೇಳಿಕೆ ನೀಡಿದರೆಂಬ ಕಾರಣಕ್ಕೆ ಕೆಜೆಪಿ ಮುಖಂಡ ಎ.ಎಸ್. ಬಳ್ಳಾರಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪ್ರತಿಭಟನಕಾರರು ವಿರಕ್ತಮಠದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ, ತಹಸೀಲ್ದಾರ್ ರಮೇಶ ಕೋನರೆಡ್ಡಿ ಅವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಮಹಲಿಂಗ ಅಕ್ಕಿವಳ್ಳಿ, ಅಡಿವೆಪ್ಪ ಆಲದಕಟ್ಟಿ, ಪರಶುರಾಮ ಖಂಡೂನವರ್, ವಾಸುದೇವ ಕಮಾಟಿ, ಕೃಷ್ಣಾ ಹುಲಗನಹಳ್ಳಿ, ಗೋಪಾಲ ಮೂಡ್ಲಿಯವರ್, ವಿರೂಪಾಕ್ಷಿ ಕಡಬಗೇರಿ, ಮಲ್ಲೇಶಪ್ಪ ಕೂಡಳ್ಳಿ, ಸೋಮಪ್ಪ ಜಡೇಗೊಡ್ಡರ, ಶಂಭು ಕೊಂಡೋಜಿ, ಮಾರ್ತಾಂಡ ಬ್ಯಾತನಾಳ, ನೇತೃತ್ವ ವಹಿಸಿದ್ದರು. ಬ್ಯಾತನಾಳ, ಬಾಳಿಹಳ್ಳಿ, ಕಿರವಾಡಿ, ಹಿರೂರು, ಯಲ್ಲಾಪುರ, ಶೇಷಗಿರಿ ರೈತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.