ನೀರಿಗಾಗಿ ಖಾಲಿ ಕೊಡಗಳ ಪ್ರದರ್ಶನ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 6
ನಗರದ ಪುರದ ಓಣಿ, ಅಂಬೇಡ್ಕರ್ ನಗರ, ಗಾಂಧಿ ರಸ್ತೆ ಹಾಗೂ ಸ್ಟೇಶನ್ ರಸ್ತೆ ನಿವಾಸಿಗಳು ಇಲ್ಲಿನ ಐತಿಹಾಸಿಕ ಪುರಸಿದ್ದೇಶ್ವರ ದೇವಸ್ಥಾನದ ಎದುರು ರಸ್ತೆ ಮೇಲೆ ಖಾಲಿ ಕೊಡಗಳನ್ನಿರಿಸಿ ಹಾವೇರಿ-ಹೊಸಪೇಟೆ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ರಸ್ತೆ ತಡೆ ನಡೆಸಿದರು.
ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರು ಸುಮಾರು ಎರಡು ತಾಸು ಪ್ರತಿಭಟನೆ ನಡೆಸಿ, ನಗರಸಭೆಯ ನಿರ್ಲಕ್ಷ್ಯವನ್ನು ಖಂಡಿಸಿದರು. ನಗರಸಭೆ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆ ನಡೆಸಿದರು. ರಸ್ತೆ ಮೇಲೆ ಕುಳಿತವರನ್ನು ಒತ್ತಾಯಪೂರ್ವಕ ಎಬ್ಬಿಸಲು ಯತ್ನಿಸಿದ ಪೊಲೀಸರ ಜತೆಗೂ ಮಾತಿನ ಚಕಮಕಿ ನಡೆಸಿದರು.
ಪುರಸಭೆ ಮಾಜಿ ಅಧ್ಯಕ್ಷ ಪರಶುರಾಮ ಅಡಕಿ ಮಾತನಾಡಿ, ಒಂದುವರೆ ತಿಂಗಳಿನಿಂದ ಕುಡಿಯುವ ನೀರು ಪೂರೈಸುತ್ತಿಲ್ಲ. ನಗರಸಭೆ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಹಾಗೂ ಜಿಲ್ಲಾಧಿಕಾರಿಗಳೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸಾರ್ವಜನಿಕರ ಸಮಸ್ಯೆ ಯಾರ ಮುಂದೆ ಹೇಳಿಕೊಳ್ಳಬೇಕು ಎಂದು ಪೊಲೀಸರನ್ನು ಪ್ರಶ್ನಿಸಿದರು.
ಶೀಘ್ರ ದುರಸ್ತಿ-ಭರವಸೆ: ನೀರು ಪೂರೈಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ, ಕೊಳವೆ ಬಾವಿ ಪಂಪ್ಸೆಟ್ ಕೆಟ್ಟು ತಿಂಗಳೇ ಗತಿಸಿವೆ. ದುರಸ್ತಿ ಮಾಡಿಲ್ಲ. ಕೂಡಲೇ ಕುಡಿಯುವ ನೀರು ಪೂರೈಸುವ ಜತೆಗೆ ಕೊಳವೆ ಬಾವಿ ದುರಸ್ತಿ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಅಭಿಯಂತರ ನಾಯಕ, ಕೊಳವೆ ಬಾವಿ ಹಾಗೂ ಪಂಪ್ಸೆಟ್ ದುರಸ್ತಿಗೆ ಸಿಬ್ಬಂದಿಯನ್ನು ಕಳುಹಿಸಿದ್ದು, ತಕ್ಷಣವೇ ನೀರು ಪೂರೈಸುವ ಭರವಸೆ ನೀಡಿದರು.
ಅದು ದುರಸ್ತಿ ಆಗುವವರೆಗೆ ಎಂಜಿನಿಯರ್ ಸ್ಥಳದಿಂದ ಕದಲಬಾರದು. ದುರಸ್ತಿ ಆದ ಮೇಲೆಯೇ ತಾವು ಪ್ರತಿಭಟನೆ ಕೈಬಿಡುವುದಾಗಿ ಪಟ್ಟು ಹಿಡಿದರು. ಎಂಜಿನಿಯರ್ ನಾಯಕ ಸಮ್ಮತಿಸಿದ ಬಳಿಕ ಸಾರ್ವಜನಿಕರು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ಮುಖಂಡರಾದ ಬಸವರಾಜ ಹಾಲಪ್ಪನವರ, ಸೋಮು ಚರಂತಿಮಠ, ನವೀನ ಬ್ಯಾಳಿ, ಶಿವಗಂಗಮ್ಮ ಚೌಕಿಮಠ, ಸುಶೀಲಮ್ಮ ಹಿರೇಮಠ, ಶಿವಬಸಪ್ಪ ಕೊಪ್ಪದ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

