ಹಾವೇರಿ

ಮಹಿಳೆ, ಮಕ್ಕಳ ಶೋಷಣೆ ನಿಲ್ಲಲಿ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಫೆ.12
ಮಹಿಳೆ ಮತ್ತು ಮಕ್ಕಳ ಸಾಗಾಟ ಪ್ರಕರಣಗಳ ಕುರಿತಂತೆ ವಿವಿಧ ಇಲಾಖೆಗಳು ಕ್ರಮ ಜರುಗಿಸುತ್ತಿವೆ. ಆದರೂ ಈ ಪ್ರಕರಣಗಳನ್ನು ಜಿಲ್ಲಾ ಕಾನೂನು ನೆರವು ಸಮಿತಿಯೇ ಇತ್ಯರ್ಥಪಡಿಸುತ್ತದೆ. ಆದರೆ ಇಂಥ ಪ್ರಕರಣಗಳು ಉಚಿತ ಕಾನೂನು ನೆರವು ಸಮಿತಿ ಮುಂದೆ ದಾಖಲಾಗುತ್ತಿಲ್ಲ. ಬಾಧಿತರು ಈ ಸಮಿತಿಯ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು ಎಂದು ಮುಖ್ಯ ನ್ಯಾಯಿಕ ದಂಡಾಧಿಕಾರಿ ಬಿ.ವೆಂಕಟೇಶ ಕರೆ ನೀಡಿದರು.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ವಿರುದ್ಧ ಬೃಹತ್ ಆಂದೋಲನದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಸಮಾಜದ ಕೆಲ ವ್ಯಕ್ತಿಗಳು ಕೆಳಸ್ಥರದ ಬಡವರ ಸಾಮಾಜಿಕ ಹಾಗೂ ಶೈಕ್ಷಣಿಕ ಕೊರತೆ ಮತ್ತು ಆರ್ಥಿಕ ದು-ಸ್ಥಿತಿಯ ದುರ್ಲಾಭ ಪಡೆದು ಮಹಿಳೆ ಮತ್ತು ಮಕ್ಕಳನ್ನು ಶೋಷಿಸುತ್ತಿದ್ದಾರೆ. ಇದಕ್ಕೆ ಸಮಾಜ ಅವಕಾಶ ಕೊಡದೇ ರಕ್ಷಾಕವಚವಾಗಿ ಕಾರ್ಯನಿರ್ವಹಿಸಬೇಕಿದೆ. ತಪ್ಪಿತಸ್ಥರನ್ನು ಮಟ್ಟಹಾಕಲು ಸಂಬಂಧಿಸಿದ ಅಧಿಕಾರಿಗಳು ಹೊಣೆಗಾರಿಕೆ ನಿಭಾಯಿಸಬೇಕು. ಆಗ ಮಹಿಳೆ ಮತ್ತು ಮಕ್ಕಳ ಸಾಗಾಣಿಕೆದಾರರು ಕಠಿಣ ಕಾನೂನು ಮತ್ತು ಸಮಾಜದ ಭಯದಿಂದ ಇಂಥ ಕೃತ್ಯದಿಂದ ದೂರ ಸರಿಯಲು ಸಾಧ್ಯ ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸಿ.ವಿ. ಹೊರಟ್ಟಿ ಮಾತನಾಡಿ, ಬಾಲಕಾರ್ಮಿಕ ಕಾಯ್ದೆಯಡಿ ಉದ್ದಿಮೆ ಮತ್ತು ಅಪಾಯಕಾರಿ ಉದ್ದಿಮೆಗಳಲ್ಲಿ ಮಕ್ಕಳ ನಿರಂತರ ಶೋಷಣೆ ನಡೆಯುತ್ತಿದ್ದು, ಮಕ್ಕಳನ್ನು ಕಾರ್ಮಿಕರನ್ನಾಗಿ ಬಳಸಿಕೊಂಡವರಿಗೆ ಶ್ರಮಶಿಕ್ಷೆ ಹಾಗೂ ದಂಡವಿದೆ. ಕಾನೂನಿನ ಪರಿಣಾಮಕಾರಿ ಅನುಷ್ಠಾನಕ್ಕೆ ಮತ್ತು ಕಣ್ಗಾವಲಿಗೆ ಸರ್ಕಾರ ವಿವಿಧ ಇಲಾಖೆಗಳ ಅಧಿಕಾರಿಗಳ ದೊಡ್ಡ ಪಡೆಯನ್ನೇ ಗೊತ್ತುಪಡಿಸಿದ್ದರೂ, ಬಾಲಕಾರ್ಮಿಕ ಪದ್ಧತಿಯ ಸಂರ್ಪೂ ನಿರ್ಮೂಲನೆ ಸಾಧ್ಯವಾಗಿಲ್ಲ. ಇದಕ್ಕೆ ಸಮುದಾಯದ ಬೆಂಬಲ ಅಗತ್ಯವಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ನ್ಯಾಯವಾದಿ ರೆಹಾನಾ ಚನ್ನಪಟ್ಟಣ, ಮಹಿಳೆಯರು ಲೈಂಗಿಕವಾಗಿ ಬಲವಂತದ ಶೋಷಣೆಗೆ ಒಳಗಾಗುತ್ತಿರುವುದು ಅಬಾಧಿತವಾಗಿದೆ. ಸಣ್ಣಮಕ್ಕಳನ್ನು ಅಪಹರಿಸಿ, ಕಣ್ಣು ಮತ್ತು ಕಿಡ್ನಿ ಮಾರಾಟ ಮಾಡುವುದು, ವಯೋವಾನದ ಹುಡುಗಿಯರನ್ನು ಅಪಹರಿಸಿ ಬಲವಂತದ ವೇಶ್ಯಾವಾಟಿಕೆಗೆ ತಳ್ಳುವುದು ಇಲ್ಲವೇ ಬಲವಂತದ ಮನೆಗೆಲಸಕ್ಕೆ ನೂಕುವುದು ಅವ್ಯಾಹತವಾಗಿ ನಡೆದಿದೆ. ಇದರಲ್ಲಿ ಕೆಲವರು ಅಪಹರಣ ಇಲ್ಲವೇ ಸಾಗಾಣಿಕೆಗೊಳಗಾಗಿ ದುಃಸ್ಥಿತಿ ಅನುಭವಿಸುತ್ತಾರೆ. ಆದ್ದರಿಂದ ಪಾಲಕರು ಹೆಣ್ಣು ಮಕ್ಕಳನ್ನು ಶಾಲೆ, ಗ್ರಂಥಾಲಯ, ಆಟದ ಮೈದಾನದಂಥ ಕಡೆಗಳಲ್ಲಿ ಮುಕ್ತವಾಗಿ ಬಿಟ್ಟು ಮೈಮರೆಯಬಾರದು ಎಂದು ಎಚ್ಚರಿಸಿದ ಅವರು, ಮಕ್ಕಳು ಮತ್ತು ಮಹಿಳೆಯರ ಅಪಹರಣ ಅಥವಾ ಸಾಗಣೆ ವಿಚಾರ ತಿಳಿಯುತ್ತಿದ್ದಂತೆಯೇ ನೆರೆಹೊರೆಯವರು ಅಥವಾ ಸಂಘ ಸಂಸ್ಥೆಗಳವರು ತಕ್ಷಣ ಪೋಲೀಸರಿಗೆ ಮಾಹಿತಿ ನೀಡಿ, ಅವರನ್ನು ಬಂಧ ಮುಕ್ತಗೊಳಿಸಲು ಶ್ರಮಿಸಿ ಎಂದು ಕರೆ ನೀಡಿದರು.
ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಎಸ್.ಎಸ್.ಕುದರಿ ಮಾತನಾಡಿದರು. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಚನ್ನಮ್ಮ ಹೊಳಿಹೊಸೂರ, ಮಹಿಳೆ ಹಾಗೂ ಮಕ್ಕಳ ಸಾಗಣೆಯಿಂದ ಸಮಾಜ ಮತ್ತು ಬಾಧಿತ ಕುಟುಂಬಗಳ ಮೇಲೆ ಉಂಟಾಗುವ ಪರಿಣಾಮ ಆಗಾಧವಾಗಿದೆ. ಇದರ ಗಂಭೀರತೆ ಅರಿತು ಇದರ ನಿಯಂತ್ರಣಕ್ಕೆ ಸರ್ಕಾರದ ಜೊತೆಗೆ ಸಮಾಜ ಕೈಜೋಡಿಸಬೇಕಾದ ಅಗತ್ಯವಿದೆ ಎಂದರು.
ಹಾವೇರಿಯ ಬೆನಕ ಕಲಾ ತಂಡದ ಸದಸ್ಯರು ಮಹಿಳೆ ಮತ್ತು ಮಕ್ಕಳ ಸಾಗಣೆಯ ದುಷ್ಪರಿಣಾಮವನ್ನು ಬಿಂಬಿಸುವ ಬೀದಿ ನಾಟಕವನ್ನು ಪ್ರದರ್ಶಿಸಿದರು. ಅಧೀಕ್ಷಕಿ ಅನ್ನಪೂರ್ಣ ಮಡಿವಾಳರ ನಿರ್ವಹಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.