ಹಾವೇರಿ

ಆಹಾರ ಪೂರೈಕೆ ತಾರತಮ್ಯ: ಮುತ್ತಿಗೆ

Published On :

ಬ್ಯಾಡಗಿ: ಮಕ್ಕಳಿಗೆ ಸಮರ್ಪಕ ಆಹಾರ ಪೂರೈಸದ ಹಾಗೂ ಇದನ್ನು ಪ್ರಶ್ನಿಸಿದ ಗ್ರಾಮಸ್ಥರೊಂದಿಗೆ ಅನುಚಿತವಾಗಿ ವರ್ತಿಸಿದ ಅಂಗನವಾಡಿ ಕೇಂದ್ರದ ಇಬ್ಬರು ಕಾರ್ಯಕರ್ತೆಯರನ್ನು ಕೂಡಲೇ ಅಮಾನತುಗೊಳಿಸುವಂತೆ ಆಗ್ರಹಿಸಿ ರಾಮಗೊಂಡನಹಳ್ಳಿ ಗ್ರಾಮಸ್ಥರು ಸೋಮವಾರ ಸ್ಥಳೀಯ ಶಿಶು ಅಭಿವೃದ್ಧಿ ಕಚೇರಿಗೆ ಮುತ್ತಿಗೆ ಹಾಕಿ ಹಠಾತ್ ಪ್ರತಿಭಟನೆ ನಡೆಸಿದರು.
ಮೂರ್ನಾಲ್ಕು ವಾಹನಗಳಲ್ಲಿ ಆಗಮಿಸಿದ ಗ್ರಾಮಸ್ಥರು ದಿಢೀರನೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಆರಂಭಿಸಿದರು.
ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆಯರಾದ ರತ್ನವ್ವ ಕಾಡಮ್ಮನವರ ಹಾಗೂ ಪ್ರೇಮಾ ಭಾಗಮ್ಮನವರ ವಿರುದ್ಧ ಘೊಷಣೆ ಕೂಗಿದರು. ದಿಢೀರ್ ಪ್ರತಿಭಟನೆಯಿಂದ ಕೆಲಕಾಲ ವಿಚಿಲಿತರಾದಂತೆ ಕಂಡುಬಂದ ಸಿಬ್ಬಂದಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರಾದರೂ ಫಲ ನೀಡಲಿಲ್ಲ.
ಗರ್ಭಿಣಿಯರ ಗೋಳು: ಪ್ರತಿಭಟನಾಕಾರರನ್ನುದ್ದೇಶಿಸಿ ಹನುಮಂತಪ್ಪ ಹಿರೇಅಣಜಿ ಮಾತನಾಡಿ, ಗ್ರಾಮದ ಅಂಗನವಾಡಿ ಎರಡೂ ಕೇಂದ್ರಗಳಲ್ಲಿ ಮಕ್ಕಳಿಗೆ ಸಮರ್ಪಕ ಆಹಾರ ಒದಗಿಸುತ್ತಿಲ್ಲ. ಮಹಿಳೆಯರಾಗಿದ್ದರೂ ಬಾಣಂತಿಯರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎಂದರು. ಇವರಿಬ್ಬರು ಕೇಂದ್ರಕ್ಕೆ ವಕ್ಕಿರಿಸಿದ ದಿನದಿಂದಲೇ ಗ್ರಾಮದಲ್ಲಿ ಅಪೌಷ್ಟಿಕ ಮಕ್ಕಳ ಜನನವಾಗುತ್ತಿದೆ ಇದಕ್ಕೆ ಕಾರ್ಯಕರ್ತೆಯರೇ ಹೊಣೆ ಎಂದು ಆರೋಪಿಸಿದರು.
ಆಹಾರ ಕಳ್ಳ ಸಾಗಣೆ: ಕಳೆದ ಕೆಲ ದಿನಗಳ ಹಿಂದೆ ಇಬ್ಬರೂ ಕಾರ್ಯಕರ್ತೆಯರು ಕೇಂದ್ರಕ್ಕೆ ಪೂರೈಸಿದ ಆಹಾರವನ್ನು ಕಳ್ಳ ಸಾಗಣೆ ಮಾಡುತ್ತಿದ್ದುದನ್ನು ಗ್ರಾಮಸ್ಥರು ಪತ್ತೆಹಚ್ಚಿ, ಮಾಡಿದ ತಪ್ಪನ್ನು ತಿದ್ದಿಕೊಳ್ಳುವಂತೆ ಸಲಹೆ ನೀಡಿದ್ದರೂ, ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಇಬ್ಬರು ತಮ್ಮ ಚಾಳಿ ಮುಂದುವರೆಸಿದ್ದು, ಕೂಡಲೇ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದರು.
ಲಂಚದ ಆರೋಪ: ಬಸವರಾಜ ಮುದಿಗೌಡ್ರ ಮಾತನಾಡಿ, ಬಡ ಕುಟುಂಬಗಳಿಗೆ ಸರ್ಕಾರ ನೀಡುತ್ತಿರುವ ಭಾಗ್ಯಲಕ್ಷ್ಮೀ ಬಾಂಡ್‌ಗಳನ್ನು ವಿತರಿಸುವ ವೇಳೆ ಪ್ರತಿ ಫಲಾನುಭವಿಯಿಂದ ರು. 500 ಹಣ ಕೀಳುತ್ತಿದ್ದಾರೆ. ಹಣ ನೀಡುವವರೆಗೂ ಯಾವುದೇ ಕಾರಣಕ್ಕೂ ಬಾಂಡ್‌ಗಳನ್ನು ನೀಡುವುದಿಲ್ಲ. ಇವರ ವರ್ತನೆಯಿಂದ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದ್ದು, ಈ ಕುರಿತು ನಾಲ್ಕು ಬಾರಿ ಮೇಲ್ವಿಚಾರಕಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ತಪ್ಪಿಸ್ಥರ ಮೇಲೆ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಮೇಲಾಧಿಕಾರಿಗೆ ತಿಳಿಸುವೆ: ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜೆ.ಟಿ. ಶಿರೋಳಕರ ಮಾತನಾಡಿ, ನಾಳೆ ಗ್ರಾಮಕ್ಕೆ ತೆರಳಿ ಬಾಲ ವಿಕಾಸ ಸಮಿತಿ ಸಭೆ ನಡೆಸಿ, ಸ್ಥಾನಿಕ ಚೌಕಾಶಿಯೊಂದಿಗೆ ಪರಿಶೀಲನೆ ನಡೆಸಿ ಅಗತ್ಯ ವರದಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಈರಪ್ಪ ಮುದಿಗೌಡ್ರ, ಕೆಂಚಪ್ಪ ಮುದಿಗೌಡ್ರ, ಕುಮಾರ ಹಾವೇರಿ, ಈರಪ್ಪ ಒಲೇಕಾರ, ಬೀರಪ್ಪ ಕೆಂಚನಗೌಡ್ರ, ಭರಮಪ್ಪ ಬಾಗಮ್ಮನವರ, ಬಸವರಾಜ ಬಸೆಟ್ಟೇರ, ಇನ್ನಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.