ಪೊಲೀಸ್ ಸರ್ಜರಿ: ಬೆವರುತ್ತಿರುವ ಖದೀಮರು
ಬಿ.ಕೆ. ಮಹೇಂದ್ರ
ಕನ್ನಡಪ್ರಭ ವಾರ್ತೆ, ಹಾವೇರಿ, ಜು. 6
ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿದ್ದು, ಅಕ್ರಮ ದಂಧೆಯನ್ನೇ ಅವಲಂಬಿಸಿರುವ ಖದೀಮರ ನಿದ್ದೆಗೆಡುವಂತೆ ಮಾಡಿದೆ. ಕಠಿಣ ನಿಲುವಿನ ಅಧಿಕಾರಿಗಳು ಜಿಲ್ಲೆಯ ಆಯಾಕಟ್ಟಿನ ಹುದ್ದೆಗಳನ್ನು ಅಲಂಕರಿಸಿದ್ದಲ್ಲಿ ತಮ್ಮ ವ್ಯವಹಾರ ಮುಂದುವರಿಸಿಕೊಂಡು ಹೋಗುವುದು ಹೇಗೆ ಎಂಬ ಚಿಂತೆ ಅಕ್ರಮ ಕುಳಗಳಿಗೆ ಇದೀಗ ಕಾಡತೊಡಗಿದೆ.
ಇದಕ್ಕೆ ಹಾವೇರಿ ಜಿಲ್ಲೆಯೂ ಹೊರತಾಗಿಲ್ಲ. ನಿರ್ಗಮಿತ ಎಸ್ಪಿ ಚೇತನಸಿಂಗ್ ರಾಠೋರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ವ್ಯವಹಾರಗಳನ್ನು ಮಟ್ಟ ಹಾಕಲು ಸಾಕಷ್ಟು ಶ್ರಮವಹಿಸಿದ್ದರಾದರೂ ಕೆಲವೇ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಕ್ರಮ ದಂಧೆಕಾರರೊಂದಿಗೆ ಶಾಮೀಲಾಗಿದ್ದರಿಂದ ಅನೇಕ ಅಕ್ರಮ ವ್ಯವಹಾರಗಳು ತೆರೆಮರೆಯಲ್ಲಿ ನಡೆದುಕೊಂಡು ಹೊರಟಿದ್ದವು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಹಾವೇರಿ ಎಸ್ಪಿಯಾಗಿದ್ದ ರಾಠೋರ್ರನ್ನು ಬಳ್ಳಾರಿ ಎಸ್ಪಿಯಾಗಿ ಸರ್ಕಾರ ವರ್ಗಾವಣೆ ಮಾಡಿದ್ದು, ಈ ಸ್ಥಾನಕ್ಕೆ ಚಿಕ್ಕಮಗಳೂರಿನ ಎಸ್ಪಿ ಶಶಿಕುಮಾರರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ. ಆದರೆ, ಒಂದು ಮೂಲದ ಪ್ರಕಾರ ಶಶಿಕುಮಾರ, ಹಾವೇರಿ ಜಿಲ್ಲಾ ಎಸ್ಪಿಯಾಗಿ ಬರಲು ಮನಸ್ಸು ಮಾಡುತ್ತಿಲ್ಲ ಎನ್ನಲಾಗಿದ್ದು, ಕೊನೆಯ ಹಂತದಲ್ಲಿ ಜಿಲ್ಲಾ ಎಸ್ಪಿಯಾಗಿ ಬೇರೆ ಅಧಿಕಾರಿ ಬರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಮಟ್ಕಾ ಬಲು ಜೋರು: ಹಾವೇರಿ ಜಿಲ್ಲಾದ್ಯಂತ ಮಟ್ಕಾ ಜೂಜಾಟ ಬಲು ಜೋರಾಗಿಯೇ ನಡೆದಿದೆ ಎನ್ನಲಾಗುತ್ತಿದೆ. ಈ ವಿಷಯ ಪೊಲೀಸ್ ಅಧಿಕಾರಿಗಳಿಗೆ ತಿಳಿದಿಲ್ಲ ಅಂತಿಲ್ಲ. ಆದಾಗ್ಯೂ, ಸಂಬಂಧಪಟ್ಟ ಅಧಿಕಾರಿಗಳು ಈ ಅಕ್ರಮ ವ್ಯವಹಾರ ತಡೆಗಟ್ಟಲು ನಿರೀಕ್ಷಿತ ಮಟ್ಟದಲ್ಲಿ ಪ್ರಯತ್ನಿಸಿಲ್ಲ.
ಇದರಿಂದಾಗಿಯೇ, ಸಣ್ಣಪುಟ್ಟ ಪಾನ್ಬೀಡಾ ಅಂಗಡಿಗಳಿಂದ ಹಿಡಿದು ಕೆಲ ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಈ ವ್ಯವಹಾರ ರಾಜಾರೋಷವಾಗಿ ನಡೆಯುವಂತಾಗಿದೆ. ಪೊಲೀಸ್ ಇಲಾಖೆಯ ಅಪರಾಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಈ ಅಕ್ರಮ ಕುಳಗಳಿಂದ ಪ್ರತಿ ತಿಂಗಳು ಕಾಣಿಕೆ(ಲಂಚ) ಸ್ವೀಕರಿಸುತ್ತಿರುವುದರಿಂದ ಈ ಅಕ್ರಮ ವ್ಯವಹಾರ ಅಷ್ಟರ ಮಟ್ಟಿಗೆ ಬೆಳಕಿಗೆ ಬಂದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕ್ರಿಕೆಟ್ ಬೆಟ್ಟಿಂಗ್: ರಾಣಿಬೆನ್ನೂರು, ಹಾನಗಲ್ ಹಾಗೂ ಬ್ಯಾಡಗಿಯಲ್ಲಿ ನೆಲೆಯೂರಿರುವ ಆರು ಜನರ ಸಿಂಡಿಕೇಟ್ವೊಂದು ಕ್ರಿಕೆಟ್ ಬೆಟ್ಟಿಂಗ್ ವ್ಯವಹಾರ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆಸಿಕೊಂಡು ಹೊರಟಿದೆ ಎಂದು ಹೇಳಲಾಗುತ್ತಿದೆ. ಈ ಬುಕ್ಕಿಗಳು ಆರ್ಥಿಕವಾಗಿ ಸಾಕಷ್ಟು ಸಬಲರಾಗಿದ್ದಾರಲ್ಲದೆ, ರಾಜಕೀಯ ಪ್ರಭಾವವನ್ನೂ ಹೊಂದಿದ್ದಾರೆ ಎಂದು ಗೊತ್ತಾಗಿದೆ. ಜಿಲ್ಲೆಗೆ ಕಠಿಣ ನಿಲುವಿನ ಅಧಿಕಾರಿ ಬಂದಲ್ಲಿ, ರಾಜಕೀಯ ಪ್ರಭಾವದಿಂದ ಆ ಅಧಿಕಾರಿಯನ್ನು ಬುಟ್ಟಿಗೆ ಹಾಕಿಕೊಳ್ಳಲು ಈ ಬುಕ್ಕಿಗಳು ಯತ್ನಿಸುತ್ತಾರೆ ಎಂದು ಹೆಸರು ಹೇಳಲು ಇಚ್ಛಿಸದ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು 'ಕನ್ನಡಪ್ರಭ'ಕ್ಕೆ ತಿಳಿಸಿದರು. ಇದಕ್ಕೂ ಅಧಿಕಾರಿ ಬಗ್ಗದಿದ್ದಲ್ಲಿ ಬೆಂಗಳೂರು ಮಟ್ಟದಿಂದಲೇ ಅಧಿಕಾರಿಯನ್ನು ಜಿಲ್ಲೆಯಿಂದ ಎತ್ತಂಗಡಿ ಮಾಡಿಸಲು ಫಿಕ್ಸಿಂಗ್ ಮಾಡಿಕೊಳ್ಳುತ್ತಾರೆ ಎಂದೂ ಹೇಳಲಾಗುತ್ತಿದೆ.
ಇಸ್ಪೀಟ್ ಕ್ಲಬ್: ಜಿಲ್ಲೆಯ ಐದು ತಾಲೂಕುಗಳಲ್ಲಿ ಇಸ್ಪೀಟ್ ಕ್ಲಬ್ಗಳು ಹಗಲು-ರಾತ್ರಿ ಎನ್ನದೇ ಕಾರ್ಯನಿರ್ವಹಿಸುತ್ತಿವೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ. ಎಸ್ಪಿ ಕಚೇರಿಯ ಅಕ್ಕಪಕ್ಕದಲ್ಲೇ ಕಾರ್ಯಸ್ಥಾನವನ್ನಾಗಿಸಿಕೊಂಡಿರುವ ವ್ಯಕ್ತಿಗಳಿಬ್ಬರು ಈ ದಂಧೆಯನ್ನು ನಿಯಂತ್ರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಾತ್ತೆತ್ತಿದರೆ ತಮಗೆ ಎಸ್ಪಿ ಸಾಹೇಬ್ರು ಹಾಗೂ ಜಿಲ್ಲೆಯ ಶಾಸಕರು ಸಾಕಷ್ಟು ಕ್ಲೋಸ್ ಆಗಿದ್ದಾರೆ ಎಂದು ಫೋಸ್ ನೀಡುವ ಇವರು, ಅಕ್ರಮ ದಂಧೆಕಾರರಿಂದ ಲಕ್ಷಾಂತರ ರು. ಪಡೆದು ಕಳಹಂತದ ಅಧಿಕಾರಿಗಳಿಗೆ ಸಾವಿರಾರು ರು.ಗಳನ್ನು ನೀಡಿ ಇಸ್ಪೀಟ್ ಜೂಜಾಟ ಅಡ್ಡಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದಂತೆ ಕಟ್ಟೆಚ್ಚರವಹಿಸುತ್ತಿದ್ದಾರೆ ಎನ್ನಲಾಗಿದೆ.
ಕಾಳಸಂತೆಕೋರರು: ಪಡಿತರ ಧಾನ್ಯಗಳನ್ನು ಕಾಳಸಂತೆಯಲ್ಲಿ ಖರೀದಿಸಿ ಹೊರ ರಾಜ್ಯಗಳಲ್ಲಿ ಮಾರಾಟ ಮಾಡುವ ದೊಡ್ಡ ರ್ಯಾಕೆಟ್ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬುದು ಕಟುವಾಸ್ತವ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳ ಅಧಿಕಾರಿಗಳ ಕೃಪಾದೃಷ್ಟಿಯಿಂದಾಗಿ ಕಾಳಸಂತೆಕೋರರ ಅವ್ಯವಹಾರಕ್ಕೆ ಈವರೆಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂಬ ಗುಸುಗುಸು ಜಿಲ್ಲಾದ್ಯಂತ ಕೇಳಿ ಬರುತ್ತಿದೆ.
ಜಿಲ್ಲೆಯ ಆಯಾ ತಾಲೂಕುಗಳ ಹೊರ ವಲಯಗಳ ರಹಸ್ಯ ಸ್ಥಳಗಳಲ್ಲಿ ಗೋದಾಮು ಹಾಗೂ ಪಾಲಿಷ್ ಯಂತ್ರಗಳನ್ನು ಹೊಂದಿರುವ ಈ ಖದೀಮರು, ಪಡಿತರ ಫಲಾನುಭವಿಗಳಿಗೆ ಸೇರಬೇಕಾದ ಅಕ್ಕಿ-ಗೋದಿ ಸಂಗ್ರಹಿಸಿಕೊಂಡು ರಾಜ್ಯದಿಂದ ಹೊರಗಡೆಗೆ ಸರಬರಾಜು ಮಾಡುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕೆಲ ಅಧಿಕಾರಿಗಳು ಹಾಗೂ ನ್ಯಾಯಬೆಲೆ ಅಂಗಡಿಕಾರರು ಸಾಥ್ ನೀಡುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಾಗಿ ರೈತರು ಹಾಗೂ ಕೃಷಿ ಕಾರ್ಮಿಕರೇ ವಾಸವಾಗಿರುವ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ನಿರಾತಂಕವಾಗಿ ನಡೆಯುತ್ತಲೇ ಸಾಗಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಗಮಿಸುವ ಅಧಿಕಾರಿ ಈ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವ ಮೂಲಕ ಜಿಲ್ಲೆಯ ಜನರಿಗೆ ನೆಮ್ಮದಿಯ ಬದುಕು ಕಲ್ಪಿಸಿಕೊಡಬೇಕಾದ ಮಹತ್ತರ ಜವಾಬ್ದಾರಿ ಯಾವ ರೀತಿಯಾಗಿ ನಿಭಾಯಿಸುತ್ತಾರೆ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.
ದಶಕಗಳಿಂದಲೂ ಒಂದೇ ಹುದ್ದೆಯಲ್ಲಿ
ಎಸ್ಪಿ ಕಚೇರಿಯಲ್ಲಿ ದಶಕಗಳಿಂದಲೂ ಹೆಚ್ಚಿನ ಅವಧಿಯಿಂದ ಪೇದೆಗಳಿಬ್ಬರು ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇವರುಗಳೇ ಅಕ್ರಮ ಚಟುವಟಿಕೆ ನಡೆಸುವ ಖದೀಮರಿಗೆ ಆಶ್ರಯದಾತರಾಗಿದ್ದಾರೆ ಎಂದು ಎಸ್ಪಿ ಕಚೇರಿಯ ಕಂಬಗಳೇ ಮಾತನಾಡಿಕೊಳ್ಳುತ್ತಿವೆ. ಈ ಇಬ್ಬರು ಪೇದೆಗಳ್ಯಾರು ಎಂಬುದು ಜಿಲ್ಲೆಯ ಪೊಲೀಸ್ ಇನ್ಸ್ಪೆಕ್ಟರ್ಗಳಿಂದ ಹಿಡಿದು ಪೇದೆಗಳಿಗೂ ತಿಳಿದಿದೆ. ಇವರುಗಳ ಕಾರ್ಯವೈಖರಿ ಬಗ್ಗೆ ಹಿರಿಯ ಅಧಿಕಾರಿಗಳಲ್ಲಿ ಯಾರಾದರೂ ದೂರು ನೀಡಲು ಮುಂದಾದರೆ ಅಂತಹ ಅಧಿಕಾರಿ ಒಂದು ವರ್ಗಾವಣೆಗೊಳ್ಳುತ್ತಾರೆ ಅಥವಾ ಅಮಾನತಿಗೆ ಒಳಗಾಗುತ್ತಾರೆ. ಇಷ್ಟರ ಮೇಲೆಯೇ ತಿಳಿದುಕೊಳ್ಳಬಹುದು ಈ ಇಬ್ಬರು ಪೇದೆಗಳು ಹೊಂದಿರುವ ಪವರ್ ಎಂತಹದ್ದು ಎಂಬುದು. ನೂತನ ಎಸ್ಪಿಯಾಗಿ ಯಾರೇ ಬರಲಿ, ಇಡೀ ಜಿಲ್ಲಾ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ತರುವಂತೆ ಕರ್ತವ್ಯ ನಿರ್ವಹಿಸುತ್ತಿರುವ ಈ ಪೇದೆಗಳನ್ನು ಗುರುತಿಸಿ ಎತ್ತಂಗಡಿಗೆ ಕ್ರಮಕೈಗೊಳ್ಳುವರೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

