ಹಾವೇರಿ

ಪಂಚಭೂತಗಳಲ್ಲಿ ಜೈನ ಮುನಿ ಲೀನ

Published On :

ಹಾವೇರಿ: ಭಾನುವಾರ ಇಹಲೋಕ ತ್ಯಜಿಸಿದ ಜೈನ ದಿಗಂಬರ 108 ಶ್ರೀ ಧರ್ಮಸಾಗರ ಮುನಿ ಮಹಾರಾಜರ ಅಂತ್ಯಕ್ರಿಯೆ ಜೈನ ಧರ್ಮದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಧರ್ಮಗುರುಗಳ ಉಪಸ್ಥಿತಿಯಲ್ಲಿ ಸೋಮವಾರ ಸಂಜೆ ನೆರವೇರಿತು. ನಗರದ ಇಜಾರಿ ಲಕಮಾಪುರದಲ್ಲಿರುವ ಜೈನ ಧರ್ಮದ ರುದ್ರಭೂಮಿಯಲ್ಲಿ ನೆರವೇರಿದ ಅಂತ್ಯ ಸಂಸ್ಕಾರದಲ್ಲಿ ಜೈನಮುನಿ ಮಹಾರಾಜ 108 ಶ್ರೀ ಪ್ರಸನ್ನ ಮುನಿ ಮಹಾರಾಜ, 108 ಪುಣ್ಯಸಾಗರ ಮುನಿಮಹಾರಾಜ, 108 ಸುಧರ್ಮ ಗುಪ್ತ ಮುನಿಮಹಾರಾಜರು, ಸೋಂದಾ ಮಠದ ಅಕಳಂಕ ಭಟ್ಟಾರಕರು, ವರೂರಿನ ಧರ್ಮಸೇನ ಭಟ್ಟಾರಕರು, ಲಕ್ವಳ್ಳಿಮಠದ ವೃಷಭಸೇನಾ ಭಟ್ಟಾರಕರು, ನಗರದ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಶ್ರೀ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಮಾಜಿ ಶಾಸಕ ನೆಹರು ಓಲೇಕಾರ, ಜೈನ ಸಮಾಜದ ಅಪಾರ ಬಾಂಧವರು ಹಾಗೂ ಶಿಷ್ಯರು ಪಾಲ್ಗೊಂಡಿದ್ದರು.
ಪಾದಯಾತ್ರೆ: ತೀವ್ರ ಹೃದಯಾಘಾತಕ್ಕೊಳಗಾಗಿ ಭಾನುವಾರ ಜಿನೈಕ್ಯರಾದ ಧರ್ಮಸಾಗರ ಮುನಿಮಹಾರಾಜರಿಗೆ 72 ವಯಸ್ಸಾಗಿತ್ತು. ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಕಳಸೂರನಲ್ಲಿ ಚಾರ್ತುಮಾಸ ನಡೆಸಲು ಪಾದಯಾತ್ರೆ ಕೈಗೊಂಡಿದ್ದರು. ಈ ಸಂದರ್ಭದಲ್ಲೇ ಶ್ರೀಗಳು ಹೃದಯಾಘಾತಕ್ಕೊಳಗಾಗಿದ್ದರು. ಜಿನೈಕ್ಯ ಮುನಿಗಳ ಪಾರ್ಥಿವ ಶರೀರವನ್ನು ಭಕ್ತರ ಅಂತಿಮ ದರ್ಶನಕ್ಕಾಗಿ ಹಾವೇರಿಯಲ್ಲಿನ ಜೈನ ಬಸದಿಯಲ್ಲಿ ಇರಿಸಲಾಗಿತ್ತು. ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಭಕ್ತರು ಮುನಿಗಳ ಅಂತಿಮ ದರ್ಶನ ಪಡೆದರು.
ಒಂದೇ ಕುಟುಂಬದ ಮೂವರ ಕೊಲೆ
ಶಿವಮೊಗ್ಗ: ಜಮೀನು ವಿವಾದವೊಂದು ಮೂವರ ಬರ್ಬರ ಕೊಲೆಗೆ ಕಾರಣವಾದ ಪ್ರಸಂಗ ಹೊಳೆಹೊನ್ನೂರು ಸಮೀಪದ ಭದ್ರಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.  ಸಹೋದರರಾದ ಪ್ರಕಾಶ್(35), ರಮೇಶ್(30) ಮತ್ತು ಚಂದ್ರ(28)ಕೊಲೆಯಾದವರಾಗಿದ್ದು, ಹಲವು ವರ್ಷಗಳ ವೈಷಮ್ಯ ಒಂದೇ ಬಳ್ಳಿಯ ಮೂವರನ್ನು ಬಲಿತೆಗೆದುಕೊಂಡಿದೆ.  ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರಕಾಶ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ನಂತರ ಪ್ರಕಾಶ್ ಆಕ್ರೋಶ ಭರಿತರಾಗಿದ್ದು, ಇದೇ ಸಂದರ್ಭದಲ್ಲಿ ದುಷ್ಕರ್ಮಿಗಳು ಮತ್ತಿಬ್ಬರು ಸಹೋದರರನ್ನೂ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮೃತ ಸಹೋದರರ ಕುಟುಂಬದ ಪಕ್ಕದಲ್ಲಿರುವ ತೋಟದ ಶೇಖರಪ್ಪ, ಪರಮೇಶ್, ಹನುಮಂತ, ಹರೀಶ್ ಮತ್ತು ಗೋಪಿ ಕೊಲೆಗೆ ಕಾರಣರಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ: ಶೇಖರಪ್ಪ ಎಂಬವರಿಗೆ ಸೇರಿದ ತೋಟದ ಪಕ್ಕದಲ್ಲಿಯೇ ಪ್ರಕಾಶ್ ಅವರ ಗದ್ದೆ ಇದ್ದು, ಇಲ್ಲಿಗೆ ಹೋಗಿಬರಲು ಶೇಖರಪ್ಪ ಅವರ ತೋಟದ ಕಡೆಯಿಂದಲೇ ಹೋಗಬೇಕಾಗಿತ್ತು. ಇವರ ಗದ್ದಗೆ ಓಡಾಡಲು ಪರ್ಯಾಯ ರಸ್ತೆಯಿರಲಿಲ್ಲ. ಹೀಗಾಗಿಯೇ ಪ್ರಕಾಶ್, ನಮ್ಮ ಗದ್ದೆಗೆ ಹೋಗಲು ಶೇಖರಪ್ಪ ಅವರ ತೋಟದ ಒಳಭಾಗದಿಂದ ದಾರಿ ಬಿಡುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಕೋರ್ಟ್ ರಸ್ತೆಗೆ ಅವಕಾಶ ನೀಡುವಂತೆ ಆದೇಶ ನೀಡಿತ್ತು. ಆದರೆ, ಇದಕ್ಕೆ ಈ ತೋಟದ ಮಾಲೀಕರು ಅವಕಾಶ ನೀಡಿರಲಿಲ್ಲ.ಈ ಕುರಿತಂತೆ ಎರಡು ಕುಟುಂಬದವರ ನಡುವೆ ಹಲವು ವರ್ಷಗಳಿಂದ ಜಮೀನಿನ ವಿಚಾರವಾಗಿ ಗಲಾಟೆ, ತಕರಾರು ನಡೆಯುತ್ತಲೇ ಇತ್ತು. ಪೊಲೀಸ್ ಠಾಣೆ, ಕೋರ್ಟ್‌ಮೆಟ್ಟಿಲು ಏರಿದ್ದರು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.