ಹಾವೇರಿ

ಸಮರ್ಥವಾಗಿ ಕಾನೂನು, ಸುವ್ಯವಸ್ಥೆ ಕಾಪಾಡಿ: ಎನ್. ಶಶಿಕುಮಾರ

Published On :

ಹಾನಗಲ್ಲ: ಸಾರ್ವಜನಿಕರು ಹಾಗೂ ಸರ್ಕಾರದ ಇತರ ಇಲಾಖೆಗಳ ಸಹಕಾರದಿಂದ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಮರ್ಥವಾಗಿ ಮುಂದಾಗಬೇಕಾಗಿದೆ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ತಿಳಿಸಿದರು. ಮಂಗಳವಾರ ಹಾನಗಲ್ಲ ತಾಲೂಕಿಗೆ ಪ್ರಥಮ ಬಾರಿಗೆ ಭೇಟಿ ನೀಡಿದ ಅವರು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಡೆದ ನಾಗರಿಕ ಸಮಿತಿ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು. ಇತ್ತೀಚೆಗೆ ಜಿಲ್ಲೆಯಲ್ಲಿ ಯುವತಿಯರ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಹಿಂದಿರುವ ವ್ಯವಸ್ಥಿತ ಜಾಲ ಹಾನಗಲ್ಲ ತಾಲೂಕಿನಲ್ಲಿದೆ ಎಂದ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ನಿಂಗಪ್ಪ ಗಾಳೆಮ್ಮನವರ ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣದ ಹಿಂದಿರುವ ಜಾಲದ ಕುರಿತು ತುರ್ತು ತನಿಖೆ ಮಾಡಲಾಗುತ್ತಿದೆ ಎಂದು ವರಿಷ್ಠಾಧಿಕಾರಿ ತಿಳಿಸಿದರು. ಗ್ರಾಮೀಣ ಭಾಗದ ಜಮೀನುಗಳಲ್ಲಿ ಬೆಳೆದು ನಿಂತಿರುವ ತೇಗದ ಮರಗಳ ಕಳ್ಳತನ ಹೆಚ್ಚುತ್ತಿದ್ದು, ರೈತರಿಗೆ ರಕ್ಷಣೆ ನೀಡುವಂತೆ ಕೊಪ್ಪರಸಿಕೊಪ್ಪದ ವಿಷ್ಣುಕಾಂತ ಜಾಧವ ಮನವಿ ಮಾಡಿದರು. ರೋಶನಿ ಸಮಾಜ ಸೇವಾಸಂಸ್ಥೆಯ ಕೆ.ಎಫ್. ನಾಯ್ಕರ, ಗ್ರಾಮಗಳಲ್ಲಿನ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟಬೇಕು ಎಂದು ಮನವಿ ಮಾಡಿದರು. ಹಾನಗಲ್ಲ ಗ್ರಾಮದೇವಿಯ ಆಭರಣ ಕಳವು ಸೇರಿದಂತೆ ಪಟ್ಟಣದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪುರಸಭೆ ಮಾಜಿ ಸದಸ್ಯ ಚಮನಸಾಬ್ ಕಿತ್ತೂರ ಗಮನ ಸೆಳೆದರು. ಸಮಸ್ಯೆಗಳಿಗೆ ಸ್ಪಂದಿಸಿ ಪ್ರತಿಕ್ರಿಯಿಸಿದ ವರಿಷ್ಠಾಧಿಕಾರಿ ಶಶಿಕುಮಾರ, ನಗರಗಳಿಂದ ನೇರವಾಗಿ ಗ್ರಾಮಗಳಿಗೆ ಪೂರೈಕೆಯಾಗುವ ಸರಾಯಿ ವ್ಯವಸ್ಥೆ ತಡೆಯಬೇಕು. ಈ ಸಂಬಂಧ ಹಾನಗಲ್ಲ-ಆಡೂರು ಠಾಣೆಗಳ ಸಿಬ್ಬಂದಿ ಸಭೆ ನಡೆಸಿ ಅಕ್ರಮ ಸರಾಯಿ ಸಾಗಾಟಕ್ಕೆ ಕಡಿವಾಣ ಹಾಕಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.