ಹಾವೇರಿ

ರೈತಪರ ಎಂದು ಹೇಳಲು ಸರ್ಕಾರಕ್ಕೆ ನೈತಿಕ ಹಕ್ಕಿಲ್ಲ: ಗಂಗಣ್ಣ ಎಲಿ

Published On :

ಬ್ಯಾಡಗಿ:  ಸಾಲ ಮನ್ನಾ ಮಾಡಿದ ಸಹಕಾರಿ ಸಂಘದ ಸಾಲದ ಮೊತ್ತವನ್ನು ಬಿಡುಗಡೆ ಮಾಡದ ರಾಜ್ಯ ಸರ್ಕಾರಕ್ಕೆ ರೈತಪರ ಎಂದು ಹೇಳಿಕೊಳ್ಳಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಸ್ಥಳೀಯ ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷ ಗಂಗಣ್ಣ ಎಲಿ ಆಪಾದಿಸಿದರು. ಮಂಗಳವಾರ ಈ ಕುರಿತು ಪ್ರಕಟಣೆಯೊಂದನ್ನು ನೀಡಿರುವ ಅವರು, ಕೃಷಿ ಪ್ರಧಾನ ದೇಶದಲ್ಲಿ ರೈತ ಎಲ್ಲವನ್ನೂ ಹೋರಾಟ ಮಾಡಿಯೇ ಪಡೆದುಕೊಳ್ಳಬೇಕಾಗಿದ್ದು, ಒಂದು ದುರಂತ ಎಂದು ಬಣ್ಣಿಸಿರುವ ಅವರು, ಅಂತೆಯೇ ಇತ್ತೀಚೆಗೆ ರೈತರ ರು. 25 ಸಾವಿರ ಸಾಲಮನ್ನಾ ಮಾಡಿರುವುದು ಕೂಡ ಅದರಲ್ಲಿ ಒಂದಾಗಿದೆ ಎಂದರು. ಸಾಲಮನ್ನಾ ಯೋಜನೆಯ ವ್ಯಾಪ್ತಿಯಲ್ಲಿ ಬರುವ ರೈತರು, ಸಾಲವನ್ನು ಮರಳಿ ಪಡೆಯಲಾಗದೇ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಈಗಾಗಲೇ ಮುಂಗಾರು ಹಂಗಾಮು ಅರಂಭವಾಗಿದ್ದು, ಬೀಜ, ಗೊಬ್ಬರ ಪಡೆಯಲು ಹಣಕ್ಕಾಗಿ ಖಾಸಗಿ ಜನರ ಬಳಿ ಅಲೆಯುಂತಾಗಿದ್ದು, ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಆರೋಪಿಸಿದ್ದಾರೆ. ಬ್ಯಾಡಗಿ ತಾಲೂಕೊಂದರಲ್ಲೇ ಸರ್ಕಾರದಿಂದ ವಿಎಸ್‌ಎಸ್ ಬ್ಯಾಂಕ್‌ಗಳಿಗೆ ನವೆಂಬರ್‌ನಿಂದ ಇತ್ತೀಚೆಗೆ ರು. 6.76 ಕೋಟಿ ಬಿಡುಗಡೆಯಾಗಬೇಕಾಗಿದೆ. ಒಟ್ಟು 4,195 ರೈತರ ಪೈಕಿ ಕೇವಲ 1,319 ಫಲಾನುಭವಿಗಳಿಗೆ ಸಾಲಮನ್ನಾದ ಮೊತ್ತ ಜಮಾ ಆಗಿದೆ. ಒಟ್ಟು ಮನ್ನಾ ಆದ ಮೊತ್ತ ರು. 9.53 ಕೋಟಿಯಲ್ಲಿ ಕೇವಲ ರು. 2.77 ಕೋಟಿ ಮಾತ್ರ ನೀಡಿದೆ. ಹಣ ಪಡೆಯದಿರುವ ರೈತರು ಅನವಶ್ಯಕವಾಗಿ ಬ್ಯಾಂಕ್‌ಗಳಿಗೆ ಅಲೆಯುವಂತಾಗಿದ್ದು, ರೈತರು ಮಾಡಿರುವ ತಪ್ಪಾದರೂ ಏನು.. ಎಂದು ಪ್ರಶ್ನಿಸಿದ್ದಾರೆ.
ಹೋರಾಟಕ್ಕೆ ಸಿದ್ಧ: ಶೂನ್ಯ ಬಡ್ಡಿ ದರದಲ್ಲಿ ರು. 2 ಲಕ್ಷ ಸಾಲ ಘೋಷಿಸಿರುವ ಸರ್ಕಾರ ಮೊದಲು ಸಾಲಮನ್ನಾದ ಹಣ ಬಿಡುಗಡೆಗೊಳಿಸುವ ಮೂಲಕ ವಿಎಸ್‌ಎಸ್ ಬ್ಯಾಂಕ್‌ಗಳನ್ನು ಆರ್ಥಿಕವಾಗಿ ಸಬಲೀಕರಣಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಈ ಹಿನ್ನೆಲೆಯಲ್ಲಿ ಬರುವ 15 ದಿನಗಳಲ್ಲಿ ಸಾಲದ ಮೊತ್ತ ಬಿಡುಗಡೆಯಾಗದಿದ್ದಲ್ಲಿ ರೈತಪರ ಸಂಘಟನೆಗಳೊಂದಿಗೆ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.