ಹಾವೇರಿ

ಸುರಕ್ಷಿತ ಸ್ಥಳಕ್ಕೆ ತೆರಳಲು ಜನರಿಗೆ ತಹಸೀಲ್ದಾರ್ ಸೂಚನೆ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಜು. 27
ನದಿಗಳಿಗೆ ಹೆಚ್ಚಿನ ನೀರು ಬರುತ್ತಿರುವುದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲು ನದಿ ದಡದಲ್ಲಿ ಪ್ರವಾಹ ಭೀತಿ ಎದುರಾಗುವ ಸಂಭವಿದ್ದುದರಿಂದ ಹಾವೇರಿ ತಹಸೀಲ್ದಾರ್ ಶಿವಲಿಂಗು ಅವರು ಶನಿವಾರ ಕಂಚಾರಗಟ್ಟಿ ಗ್ರಾಮ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಭೇಟಿ ನೀಡಿ ನದಿ ದಡದಲ್ಲಿ ವಾಸವಾಗಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಿದ್ದಾರೆ.
ಡಿಸಿ ಪಾಂಡುರಂಗ ನಾಯಕ ನಿರ್ದೇಶನದ ಮೇರೆಗೆ ನದಿ ದಡದಲ್ಲಿರುವ ಹಾವನೂರ, ಬೆಳವಿಗಿ, ಗಳಗನಾಥ, ತೆರೆದಹಳ್ಳಿ, ಗ್ರಾಮದ ಗ್ರಾಪಂ ಅಧ್ಯಕ್ಷರು, ಸದಸ್ಯರು, ಊರಿನ ಜನರೊಂದಿಗೆ ಮಾತನಾಡಿ ನದಿ ದಡದಲ್ಲಿರುವ ಜನರು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಹೋಗಲು ಗ್ರಾಮಸ್ಥರಿಗೆ ತಿಳಿಸಿದರು. ನದಿ ದಡದಲ್ಲಿ ಬರುವ ಗ್ರಾಮಗಳಾದ ಕಂಚಾರಗಟ್ಟಿ, ಹರಳಹಳ್ಳಿ, ಶಾಖಾರ, ಹಾಂವಶಿ, ಗುಯಿಲಗುಂದಿ, ಗಳಗನಾಥ, ಮೇವುಂಡಿ, ಬೆಳವಿಗಿ, ಸಂಗೂರ, ವೆಂಕಟಾಪುರ, ಬೆಂಚಿಹಳ್ಳಿ, ನಾಗನೂರ, ವರದಾಹಳ್ಳಿಗಳಲ್ಲಿ ತುಂಗಭದ್ರಾ, ವರದಾ ನದಿಗಳಿಗೆ ಹೆಚ್ಚಿನ ನೀರು ಹರಿಯುತ್ತಿದ್ದು, ತುಂಗಭದ್ರಾ ನದಿಗೆ ಲಕ್ಕೋಳ್ಳಿ ಡ್ಯಾಂನಿಂದ ಭಾನುವಾರ ಹೆಚ್ಚಿಗೆ ನೀರು ಬಿಡುವ ಸಂಭವವಿದೆ. ಜಾನುವಾರು ಹಾಗೂ ನದಿ ದಡದಲ್ಲಿ ವಾಸವಾಗಿರುವ ಜನರು ಸುರಕ್ಷಿತ ಸ್ಥಳಗಳಿಗೆ ಹೋಗಲು ಸೂಚಿಸಿದರು. ಗ್ರಾಮಗಳಲ್ಲಿ ಡಂಗೂರು ಮೂಲಕ ತಿಳಿಯಪಡಿಸಿ ಜನರಿಗೆ ಎಚ್ಚರಿಕೆ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ತಹಸೀಲ್ದಾರ್ ಸೂಚನೆ ನೀಡಿದರು. ಡಂಗೂರ ಸೂಚನೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಯಾವುದೇ ತುರ್ತು ಸಂದರ್ಭದಲ್ಲಿ ಜನಸಾಮಾನ್ಯರು ದೂರವಾಣಿ: 236468ಗೆ ಸಂಪರ್ಕಿಸಲು ತಿಳಿಸಲಾಗಿದೆ ಎಂದರು. ಪ್ರಸ್ತುತ ತುಂಗಭದ್ರಾ, ವರದಾ ನದಿಗೆ ಡ್ಯಾಂನಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುತ್ತಿದೆ. ನದಿ ದಡದಲ್ಲಿ ವಾಸವಾಗಿರುವ ಜನರು ತಮ್ಮ ಮನೆತನದ ಸಾಮಗ್ರಿಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಹಸೀಲ್ದಾರ್ ಸಾರ್ವಜನಿಕರಿಗೆ ತಿಳಿಸಿದ್ದಾರೆ. ತಾಲೂಕು ಕಚೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.