ಹಾವೇರಿ

ಮೈಲಾರ ಮಹದೇವಪ್ಪ ಪಠ್ಯಕ್ಕಾಗಿ ಪ್ರಸ್ತಾವನೆ

Published On :

ಹಾವೇರಿ: ಮಕ್ಕಳಲ್ಲಿ ದೇಶಾಭಿಮಾನ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಅರಿವು ಮೂಡಿಸಲು ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಮೈಲಾರ ಮಹದೇವಪ್ಪನವರ ಹೋರಾಟದ ಹೆಜ್ಜೆಗುರುತುಗಳನ್ನು ಪಠ್ಯದಲ್ಲಿ ಸೇರಿಸಲು ಶೀಘ್ರದಲ್ಲಿಯೇ ಸರ್ಕಾರಕ್ಕೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಅವರು ಹೇಳಿದರು.
ನಗರದ ಮುನಸಿಪಲ್ ಹೈಸ್ಕೂಲ್‌ನಲ್ಲಿ ಮಂಗಳವಾರ ಹುತಾತ್ಮ ಮೈಲಾರ ಮಹಾದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾವೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸಮರವೀರರ ಸ್ವಾತಂತ್ರ್ಯ ಒಂದು ಸ್ಮರಣೆ ವಿಷಯ ಕುರಿತು ಹಾವೇರಿ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಮೈಲಾರ ಮಹಾದೇವ ರಾಷ್ಟ್ರೀಯ ಟ್ರಸ್ಟ್‌ನಿಂದ ಉತ್ತಮ ಕಾರ್ಯಗಳು ಸಾಗಿದ್ದು, ಇನ್ನೂ ಅಧಿಕ ಪ್ರಮಾಣದಲ್ಲಿ ಟ್ರಸ್ಟ್‌ನಿಂದ ಕಾರ್ಯಕ್ರಮ ಆಯೋಜಿಸಲಾಗುವುದು. ಇದರ ಪ್ರಥಮ ಹಂತವಾಗಿ ಇಂದಿನಿಂದ ಆಗಸ್ಟ್‌ರವರೆಗೆ ತಾಲೂಕಿನ ಆಯ್ದ ಪ್ರೌಢಶಾಲೆಗಳಲ್ಲಿ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂತಹ ರಸಪ್ರಶ್ನೆ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಮೂಡುವುದರೊಂದಿಗೆ ಹೋರಾಟದ ಮನೋಭಾವ ಅಳವಡಿಸಿಕೊಳ್ಳಲು ಸಹಕಾರಿ ಎಂದರು.
ರಾಷ್ಟ್ರಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಮೈಲಾರ ಮಹದೇವರ ಪಾತ್ರ ಅಪಾರ. ಇಂದಿನ ವಿದ್ಯಾರ್ಥಿಗಳು ಅವರ ಕುರಿತು ಅರಿಯುವುದು ಅತ್ಯವಶ್ಯಕವಾಗಿದ್ದು, ಶಿಕ್ಷಕರು ಬೋಧನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಮಜಲುಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಟ್ರಸ್ಟ್ ಸದಸ್ಯ ಪರಮಣ್ಣ ಹರಕಂಗಿ ಅವರು, ಓ ತಾಯಿ ಭಾರತದ ಭಂಟ, ಎಂತು ನೆನೆಯಲಿ ಆ ದಿನದ ನಂಟ... ಎಂದು ಮಹಾದೇವರ ಕುರಿತ ಕವನವನ್ನು ಹೇಳುವುದರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಮೈಲಾರರೊಂದಿಗೆ ಕಳೆದ ಘಟನೆಗಳನ್ನು ಮೇಲಕು ಹಾಕುವುದರೊಂದಿಗೆ ಭಾವುಕರಾಗಿ ಮಾತನಾಡಿದರು.
ಟ್ರಸ್ಟ್ ಸದಸ್ಯ ವಿ.ಎನ್. ತಿಪ್ಪನಗೌಡ್ರ ಮಾತನಾಡಿ, ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಜೀವನ ಬಲಿದಾನ ಮಾಡಿದ ವೀರರ ಹೋರಾಟಗಾರರನ್ನು ನೆನಪಿಸಿಕೊಂಡು, ಅವರ ಧ್ಯೇಯ, ಗುರಿಯಲ್ಲಿ ನಾವೇಲ್ಲರೂ ಮುನ್ನಡೆಯೋಣ. ಮೈಲಾರ ಮಹದೇವರ ಕುರಿತು ಹಂತಹಂತವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಟ್ರಸ್ಟ್‌ನೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಹನುಮಂತಗೌಡ ಗೊಲ್ಲರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುನಿಸಿಪಲ್ ಹೈಸ್ಕೂಲ್ ಮುಖ್ಯಾಧ್ಯಾಪಕಿ ಶೋಭಾ ಜಾಗಟಗೇರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕಿ ನಿರ್ದೇಶಕಿ ಶಶಿಕಲಾ ಹುಡೇದ ಇದ್ದರು. ಕಲಾವಿದರಾದ ವೀರೇಶ ಸಂಕಿನಮಠ, ಎ.ಬಿ. ಗುಡ್ಡಳ್ಳಿ, ಹನುಮಂತಪ್ಪ ಹಾಗೂ ಸಂಗಡಿಗರು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕರಾದ ಕೆ.ಆರ್. ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.