ಮನಸ್ಸು, ಬುದ್ಧಿ ಶುಚಿತ್ವದಿಂದ ಶಾಂತಿ, ನೆಮ್ಮದಿ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಜೂ. 4
ಮನುಜನು ತನ್ನ ಜೀವಿತದ ಕಾಲದಲ್ಲಿ ಮನಸ್ಸು, ಬುದ್ಧಿ ಎಲ್ಲಿಯವರೆಗೂ ಶುದ್ಧವಾಗಿರವುದಿಲ್ಲವೋ ಅಲ್ಲಿಯವರೆಗೂ ಶಾಂತಿ, ನೆಮ್ಮದಿ ಹಾಗೂ ಸಂತೃಪ್ತಿ ಮತ್ತು ಮುಕ್ತಿ ಸಿಗುವುದಿಲ್ಲ ಎಂದು ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಪೀಠಾಧಿಪತಿ ಡಾ ಶಿವಾನಂದಭಾರತಿ ಸ್ವಾಮೀಜಿ ನುಡಿದರು.
ತಾಲೂಕಿನ ಖಂಡೇರಾಯನಹಳ್ಳಿಯ ಸಿದ್ಧಾರೂಢ ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀ ಸಿದ್ಧಾರೂಢರ 178ನೇ ಜಯಂತಿ ಅಂಗವಾಗಿ ನಡೆದ 13ನೇ ವೇದಾಂತ ಪರಿಷತ್ ಹಾಗೂ ಡಾ ಶಿವಾನಂದಭಾರತಿ ಸ್ವಾಮಿಗಳ 73ನೇ ಜಯಂತ್ಯುತ್ಸವ ಮತ್ತು ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಆಶೀರ್ವಚನ ನೀಡಿದರು.
ಮನಸ್ಸು, ಬುದ್ದಿ, ಚಿತ್ತಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಸದ್ಗುರುವಿನ ಉಪದೇಶ ಆಲಿಸಿದಾಗಲೇ ಮನುಜ ಸದ್ಗತಿ ಪಡೆಯಲು ಸಾಧ್ಯವೆಂದು ಶ್ರೀಗಳು ತಿಳಿಸಿದರು.
ಮನ-ಪರಿವರ್ತನೆಯಿಂದ ಎಲ್ಲ ಸಾಧ್ಯ: ಮಹಾತ್ಮರ ದರ್ಶನ ಫಲದಿಂದಾಗಿ ಕಠೋರತೆಯಿಂದ ಕಾಡಿನಲ್ಲಿ ಜೀವಿಸುತ್ತಿದ್ದ ವಾಲ್ಮೀಕಿ ಶ್ರೀ ರಾಮನ ದರ್ಶನ ಪಡೆದ ಕಾರಣ ಸಾಕ್ಷಾತ್ಕಾರ ಹೊಂದಿ ರಾಮಾಯಣ ರಚಿಸಿ ಆದಿಕವಿ ವಾಲ್ಮೀಕಿ ಮಹರ್ಷಿಯಾದರು.
ಸತ್ಸಂಗವು ಮನುಷ್ಯನನ್ನು ಒತ್ತಡದ ಜೀವನದಿಂದ ಬಿಡುಗಡೆ ಪಡೆದು ಮುಕ್ತಿಯ ಕಡೆಗೆ ಕೊಂಡೊಯ್ಯುವ ಸನ್ಮಾರ್ಗವಾಗಿದೆ ಎಂದು ಡಾ ಶಿವಾನಂದಭಾರತಿ ಸ್ವಾಮಿಜಿ ತಿಳಿಸಿದರು.
ಮಹಾತ್ಮರ ಮಾರ್ಗದಲ್ಲಿ ನಡೆಯಿರಿ: ಸಾನ್ನಿಧ್ಯ ವಹಿಸಿದ್ದ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಮಾತನಾಡಿ, ಶಿವಾವತಾರಿ ಭೂಲೋಕವಾಸಿಯಾದ ಸಿದ್ಧಾರೂಢರು ಸರ್ವ ಜೀವಿಗಳೂ ಸುಖ, ಶಾಂತಿ, ನೆಮ್ಮದಿ, ಮುಕ್ತಿ ಪಡೆಯಲೆಂಬ ಸಂಕಲ್ಪದಿಂದ ಜಾತಿ, ಮತ, ಪಂಥಗಳ ಭೇದವಿಲ್ಲದೆ ಶಾಂತಿಮಂತ್ರ ಬೋಧಿಸಿದ ಮಹಾತ್ಮ ಸಿದ್ಧಾರೂಢರು. ಅಂತವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಜಾತಿಯ ಸೋಂಕು ತಗುಲದೆ ಸರ್ವರೂ ಒಂದಾಗಿ ಬಾಳಲು ಸಾಧ್ಯ ಎಂದು ಶ್ರೀಗಳು ನುಡಿದರು.
ಶ್ರೀ ಮಠದ ನಾಗರಾಜನಂದ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಚಳಗೇರಿ ಕಟಗಿಹಳ್ಳಿಮಠದ ಡಾ ಮಹಾಂತೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಐರಣಿ ಹೊಳೆಮಠದ ಬಸವರಾಜ ದೇಶಿಕೇಂದ್ರ ಸ್ವಾಮಿಜಿ, ತೆಲಗಿಯ ಪೂರ್ಣಾನಂದ ಸ್ವಾಮಿಜಿ, ಗುಡ್ಡದ ಅನ್ವೇರಿಯ ಶಿವಯೋಗೀಶ್ವರ ಸ್ವಾಮಿಜಿ, ಹುಲಗೇರಿಯ ವೀರಯ್ಯ ಸ್ವಾಮೀಜಿಗಳು ನಿಜಗುಣ ಶಿವಯೋಗಿಗಳ ಪದ್ಯದಲ್ಲಿಯ ಒಂದು ಚರಣ ಆಧಾರವಾಗಿಟ್ಟುಕೊಂಡು 'ಸಾಧೂನಾಂ ದಶನಂ ಪುಣ್ಯಂ' ಎಂಬ ವಿಷಯ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ 15 ಜೋಡಿ ನವ ವಧು-ವರರು ನೂತನ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು. ಶಾಸಕ ರುದ್ರಪ್ಪ ಲಮಾಣಿ, ಕೆಪಿಸಿಸಿ ಕಾರ್ಯದರ್ಶಿ ರುಕ್ಮಿಣಿ ಸಾಹುಕಾರ, ಗ್ರಾಪಂ ಉಪಾಧ್ಯಕ್ಷ ಜನಾರ್ದನ ಕಡೂರ, ಟ್ರಸ್ಟ್ ಅಧ್ಯಕ್ಷ ಫಕ್ಕೀರಪ್ಪ ಗೌಡ್ರ ಮತ್ತಿತರರು ಉಪಸ್ಥಿತರಿದ್ದರು. ಮಲ್ಲೇಶ್ವರ ಶರಣರು ನಿರೂಪಿಸಿದರು. ಸಿ.ಎನ್. ನಾಗರಾಜ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

