ಹಾವೇರಿ

ಅಭಿವೃದ್ಧಿ: ಸಂವಹನ ಕೊರತೆ ಬೇಡ

Published On :

ಹಾವೇರಿ: ಜಿಲ್ಲೆಯ ವಿವಿಧ ಅಭಿವೃದ್ಧಿ ಇಲಾಖೆಗಳನ್ನು ಸಂಯೋಜಿಸಿಕೊಂಡು ಅಭಿವೃದ್ಧಿ ತೀವ್ರಗೊಳಿಸಬೇಕಾದ ಹಂತದಲ್ಲಿ ಅನುಷ್ಠಾನ ಇಲಾಖೆಗಳು ಹಾಗೂ ಬ್ಯಾಂಕಿಂಗ್ ವ್ಯವಸ್ಥೆ ಮಧ್ಯ ಸೂಕ್ತ ಸಂವಹನ ವ್ಯವಸ್ಥೆ ಬಲಪಡಿಸಬೇಕೆಂದು ಸಂಸದ ಶಿವಕುಮಾರ ಉದಾಸಿ ಜಿಲ್ಲಾ ಅಗ್ರಣಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ 2013-14ನೇ ಸಾಲಿನ ರು. 1,387 ಕೋಟಿ ಸಾಲ ಯೋಜನೆ ಬಿಡುಗಡೆ ಮಾಡಿ ಮಾತನಾಡಿದರು.
ಜಿಲ್ಲಾ ಅಗ್ರಣಿ ಬ್ಯಾಂಕ್ ಆದ ವಿಜಯಾ ಬ್ಯಾಂಕ್ ವಿವಿಧ ಬ್ಯಾಂಕ್‌ಗಳ ನೇತೃತ್ವದಲ್ಲಿ ಕಳೆದ ಬಾರಿಗಿಂತ ಶೇ. 35 ರಷ್ಟು ಹೆಚ್ಚುವರಿ ಗುರಿ ಹೊಂದಿ ಸಿದ್ಧಪಡಿಸಿರುವ ಸಾಲ ಯೋಜನೆ ಕಳೆದ ಬಾರಿಯಂತೆ ಉತ್ತಮ ಸಾಧನೆ ತೋರಲಿ ಎಂದು ಹಾರೈಸಿದರು.
ಸಂವಹನದಿಂದ ಪ್ರಗತಿ ಹೊಂದಲಿ
ಸರ್ಕಾರಿ ಇಲಾಖೆ ಹಾಗೂ ಬ್ಯಾಂಕ್‌ಗಳ ಮಧ್ಯ ಉತ್ತಮ ಸಮನ್ವಯ ಸಾಧಿತವಾದರೆ ಜಿಲ್ಲಾ ಅಗ್ರಣಿ ಬ್ಯಾಂಕ್ ಇನ್ನೂ ಹೆಚ್ಚಿನ ಸಾಧನೆಗೈಯಲು ಸಾಧ್ಯವಿದೆ. ಆ ದಿಕ್ಕಿನಲ್ಲಿ ಸರ್ಕಾರಿ ಇಲಾಖೆ ಅಧಿಕಾರಿ- ಸಿಬ್ಬಂದಿ ಹಾಗೂ ಬ್ಯಾಂಕ್ ಅಧಿಕಾರಿ- ಸಿಬ್ಬಂದಿ ಸಕಾರಾತ್ಮಕವಾಗಿ ಕಾರ್ಯ ಮಾಡಲಿ, ವಿವಿಧ ಯೋಜನೆಗಳ ಲಾಭ ಫಲಾನುಭವಿಗಳಿಗೆ ಸಕಾಲಕ್ಕೆ ದೊರೆತು, ಜಿಲ್ಲೆ ತೀವ್ರ ಪ್ರಗತಿಗೆ ತೆರೆದುಕೊಳ್ಳಲಿ ಎಂದು ಆಶಿಸಿದರು.
ಸಾಲ ನೀಡಿಕೆ: 2013-14ರ ಸಾಲ ಯೋಜನೆ ಕೃಷಿ ಕ್ಷೇತ್ರದ ಸಾಲ ನೀಡಿಕೆಗೆ ಶೇ. 37( 997 ಕೋಟಿ), ಕೈಗಾರಿಕೆ ಹಾಗೂ ಸೇವಾ ರಂಗದಲ್ಲಿ ಶೇ. 89( 70 ಕೋಟಿ), ಇತರೆ ಆದ್ಯತಾ ರಂಗದಲ್ಲಿ ಶೇ. 20 ( 215 ಕೋಟಿ) ಹೀಗೆ ಒಟ್ಟು ಆದ್ಯತಾ ರಂಗಕ್ಕೆ ರು. 942 ಕೋಟಿಯಿಂದ ರು. 1,278 ಕೋಟಿ (ಶೆ.35)ಗಳ ಸಾಲ ನೀಡಿಕೆಗೆ ಮುಂದಾಗಿರುವುದು ವಿಶೇಷ ಎಂದರು.
ಕೃಷಿ ಕ್ಷೇತ್ರಕ್ಕೆ ಆದ್ಯತೆ: ಕಳೆದೆರಡು ಮೂರು ವರ್ಷಗಳಿಂದ ಜಿಲ್ಲೆ ಬರ ಎದುರಿಸಿದ ಹಿನ್ನೆಲೆಯಲ್ಲಿ ರೈತರ ಅನುಕೂಲಕ್ಕಾಗಿ ಅವರ ಅಲ್ಪಾವಧಿ ಸಾಲವನ್ನು ದೀರ್ಘಾವಧಿ ಸಾಲವನ್ನಾಗಿ ಪರಿವರ್ತಿಸುವುದು ಕೂಡ ಅಗತ್ಯವಿದ್ದು, ಈ ಬಗ್ಗೆ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಬ್ಯಾಂಕುಗಳು ಚಿಂತಿಸಬೇಕು ಎಂದು ಸಲಹೆ ಮಾಡಿದ ಅವರು, ಕಳೆದ ಸಾಲಿನಲ್ಲಿ ಆದ್ಯತಾ ಕ್ಷೇತ್ರಗಳ ಸಾಲ ನೀಡಿಕೆಯಲ್ಲಿ  ಶೇ. 104, ಆದ್ಯತಾ ರಹಿತ ರಂಗದಲ್ಲಿ ಶೇ. 144ರಷ್ಟು ಹಾಗೂ ಕೃಷಿ ಕ್ಷೇತ್ರದಲ್ಲಿ ಶೇ. 100ರಷ್ಟು ಸಾಧನೆ ಮಾಡಿದುದು ಗಮನಾರ್ಹವಾಗಿದೆ. ಬ್ಯಾಂಕುಗಳು ಕಾರ್ಯನಿರ್ವಹಣೆಯಲ್ಲಿ ಅಂಕಿ-ಅಂಶಗಳ ವಿಶ್ವಾಸಾರ್ಹತೆ ಹೆಚ್ಚಾಗಬೇಕಾದ ಅಗತ್ಯವಿದೆ ಎಂದು ಸಲಹೆ ಮಾಡಿದರು.
ನಿಖರ ಮಾಹಿತಿ ಒದಗಿಸಿ: ಶಿವಮೊಗ್ಗ ವಿಜಯಾ ಕ್ಷತ್ರಿಯ ಬ್ಯಾಂಕ್‌ನ ಸಹಾಯಕ ಮಹಾ ಪ್ರಬಂಧಕ ರಾಧಾಕೃಷ್ಣಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಸರ್ಕಾರಿ ಇಲಾಖೆಗಳು ಸ್ವ-ಸಹಾಯ ಗುಂಪುಗಳ ಬಗ್ಗೆ ಬ್ಯಾಂಕುಗಳಿಗೆ ಸಕಾಲಕ್ಕೆ ನಿಖರವಾದ ಮಾಹಿತಿ ಒದಗಿಸಬೇಕೆಂದು ಸಲಹೆ ಮಾಡಿದರು.
ಗ್ರಾಮೀಣಕ್ಕೆ ಆದ್ಯತೆ ನೀಡಿ: ಭಾರತೀಯ ರಿಜರ್ವ್ ಬ್ಯಾಂಕ್‌ನ ಹಾವೇರಿ ಜಿಲ್ಲಾ ಉಸ್ತುವಾರಿ ಅಧಿಕಾರಿ ಶಂಕರ ಬಿಸ್ವಾಸ್ ಮಾತನಾಡಿ, ಬ್ಯಾಂಕುಗಳು ರಿಜರ್ವ್ ಬ್ಯಾಂಕ್ ನಿರ್ದೇಶನಗಳ ಅನ್ವಯ ಗ್ರಾಮೀಣ ಪ್ರದೇಶದಲ್ಲಿ ನಿಯಮಾನುಸಾರ ಅಧಿಕ ಸಂಖ್ಯೆಯ ಬ್ಯಾಂಕ್ ಶಾಖೆಗಳನ್ನು ತೆರೆದು ಸೇವೆ ನೀಡಲು ಮುಂದಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ಲ ಮಾತನಾಡಿ, ಬ್ಯಾಂಕುಗಳಲ್ಲಿ ಫಲಾನುಭವಿಗಳ ವಿವಿಧ ಯೋಜನೆಗಳ ಸಾಲ ಸೌಲಭ್ಯದ ಅರ್ಜಿಗಳನ್ನು ಸಣ್ಣಪುಟ್ಟ ತಾಂತ್ರಿಕ ಕಾರಣಗಳಿಗಾಗಿ ತಿರಸ್ಕರಿಸದೇ ಅವರಿಗೆ ಸೂಕ್ತಮಾರ್ಗದರ್ಶನ ಮಾಡಿ ಅರ್ಜಿಗಳನ್ನು ಪಡೆದು ಸಕಾಲಿಕವಾಗಿ ವಿಲೇವಾರಿ ಮಾಡುವ ಮೂಲಕ ಬ್ಯಾಂಕ್‌ಗಳು ಸಾಲ ನೀಡಬೇಕೆಂದು ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಿ. ಜಗದೀಶ, ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ, ಉಪಾಧ್ಯಕ್ಷರಾದ ಗೀತಾ ಅಂಕಸಖಾನಿ, ನಬಾರ್ಡ್ ಜಿಲ್ಲಾ ಕಚೇರಿ ಸಹಾಯಕ ಮಹಾಪ್ರಬಂಧಕ ಎಂ.ಎನ್. ವಿದ್ಯಾಗಣೇಶ ಪಾಲ್ಗೊಂಡಿದ್ದರು. ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಎಂ. ಉಮೇಶಬಾಬು ಸ್ವಾಗತಿಸಿ, 2012-13ರ ಸಾಲಿನ ಬ್ಯಾಂಕ್ ಸಾಧನೆಯ ವಿವಿರ ನೀಡಿ, ಹೆಚ್ಚಿನ ಸಾಧನೆಗೆ ಸರ್ಕಾರಿ ವಿವಿಧ ಅಭಿವೃದ್ಧಿ ಇಲಾಖೆಗಳ ಸಕಾಲಿಕ ಸ್ಪಂದನೆಗೆ ಮನವಿ ಮಾಡಿದರು. ಸಭೆಯಲ್ಲಿ ವಿವಿಧ ಅಭಿವೃದ್ಧಿ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ತಾಲೂಕು ತಾಪಂ ಇಓಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.