ಸಮಾಜಮುಖಿ ಸೇವೆ ಜನ ಮರೆಯೊಲ್ಲ
ಕನ್ನಡಪ್ರಭ ವಾರ್ತೆ, ಹಾವೇರಿ, ಜೂ. 11
ಸೇವಾ ಜೀವನದಲ್ಲಿ ಸಮಯ ಪ್ರಜ್ಞೆ, ಕರ್ತವ್ಯ ಪ್ರಜ್ಞೆ, ಪ್ರಾಮಾಣಿಕತೆ ಹಾಗೂ ದಕ್ಷತೆ ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಜನರು ಬಹುಕಾಲ ಸ್ಮರಿಸುವುದರಲ್ಲಿಯೇ ಸಿಬ್ಬಂದಿ ಸೇವೆಯ ಸಾರ್ಥಕತೆ ಅಡಗಿದೆ ಎಂದು ಅಪರ ಜಿಲ್ಲಾಧಿಕಾರಿ ಜಿ. ಜಗದೀಶ ಹೇಳಿದರು.
ಇತ್ತೀಚೆಗೆ ನಗರದಲ್ಲಿ ಕರ್ನಾಟಕ ರಾಜ್ಯ ಬಿಇಡಿ ಪದವೀಧರ ನಿಲಯ ಮೇಲ್ವಿಚಾರಕರ ಸಂಘ ಹಾವೇರಿ ಜಿಲ್ಲಾ ಘಟಕ, ಸಮಾಜ ಕಲ್ಯಾಣ ಇಲಾಖಾ ಆಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ಗ್ರುಫ್ ಡಿ ನೌಕರರ ಸಂಘದ ಆಶ್ರಯದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸುದೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಎಸ್.ಸಿ. ತಿರ್ಲಾಪುರ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಜನತೆ ಮೆಚ್ಚುವಂತೆ ಕಾರ್ಯನಿರ್ವಹಿಸಿ: ತೆಂಗಿನ ಮರದ ಗರಿಯು ತಾನು ಉದುರುವುದಕ್ಕಿಂತ ಪೂರ್ವ ಮರದಲ್ಲಿ ಹೇಗೆ ಶಾಶ್ವತವಾದ ತನ್ನ ಗುರುತನ್ನು ಉಳಿಸಿ ಉದುರುತ್ತದೆಯೋ ಹಾಗೆಯೇ ಸರ್ಕಾರಿ ಅಧಿಕಾರಿ, ನೌಕರರು ತಾವು ಕಾರ್ಯನಿರ್ವಹಿಸಿದ ಸ್ಥಳಗಳಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಸದಾ ಜನಮಾನದಲ್ಲಿ ಅಚ್ಚಳಿಯದೇ ಉಳಿಯಬೇಕು. ಎಸ್.ಸಿ. ತಿರ್ಲಾಪುರ ಅವರು ಇಂತಹ ಸೇವೆ ಮಾಡಿದ್ದಾರೆಂದು ಆ ಇಲಾಖೆ ಸಿಬ್ಬಂದಿ ಅವರನ್ನು ಗೌರವಿಸುತ್ತಿರುವುದು ಅವರ ಸೇವಾ ಜೀವನದ ಸಾರ್ಥಕತೆ ಬಿಂಬಿಸುತ್ತದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎ.ಎನ್. ನಾಗರಹಳ್ಳಿ, ಸಾಮಾಜಿಕ ಕಾರ್ಯಕರ್ತ ವಾಸುದೇವ ಬಸವ್ವನವರ ಮಾತನಾಡಿ, ಪರಿಶಿಷ್ಟ ಜಾತಿ ವರ್ಗಗಳ ಜನರಿಗೆ ಸೌಲಭ್ಯ ದೊರಕಿಸುವಲ್ಲಿ ಎಸ್.ಸಿ. ತಿರ್ಲಾಪುರ ಅವರ ಸೇವೆ ಶ್ಲಾಘನೀಯ ಎಂದರು.
ಮುಂದೆಯೂ ಸೇವೆಗೆ ಸಿದ್ಧ: ಹಾಸ್ಟೇಲ್ ವಾರ್ಡನ್ ಆಂಜನೇಯ ಹುಲ್ಲಾಳ ಅವರು ಎಸ್.ಸಿ. ತಿರ್ಲಾಪುರ ಅವರ ಸೇವಾ ಜೀವನ ಕುರಿತು ಬರೆದ ಸ್ವ-ರಚಿತ ಕವನ ವಾಚಿಸಿದರು. ಎಸ್.ಸಿ. ತಿರ್ಲಾಪುರ ಮಾತನಾಡಿ, ಸೇವಾ ನಿವೃತ್ತಿ ಸಂದರ್ಭದಲ್ಲಿ ಇಲಾಖಾ ಸಿಬ್ಬಂದಿ ಹಾಗೂ ಸಾರ್ವಜನಿಕರು ತಮ್ಮ ಸೇವೆಯನ್ನು ಗುರುತಿಸಿದ್ದು, ನನ್ನ ಸೇವಾ ಜೀವನವನ್ನು ಗೌರವಿಸಿದಂತಾಗಿದೆ ಎಂದ ಅವರು, ನಿವೃತ್ತಿ ನಂತರವೂ ತಮ್ಮ ಕೈಲಾದ ಸೇವೆ ಮುಂದುವರಿಸುವುದಾಗಿ ಅವರು ತಿಳಿಸಿದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ(ಪ್ರಭಾರ) ಮಲ್ಲೇಶಪ್ಪ ಹೊರಪೇಟೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ನೌಕರರು ಸಮಾಜಮುಖಿಯಾಗಿ ಸೇವೆ ಸಲ್ಲಿಸಿದಲ್ಲಿ ಸಮಾಜ ಅವರನ್ನು ಗೌರವಿಸುತ್ತದೆ ಎಂದರು.
ಸಮಾರಂಭದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಮಧುಸೂದನ, ಪರಿಶಿಷ್ಟ ವರ್ಗಗಳ ಇಲಾಖೆ ಅಧಿಕಾರಿ ಡಾ ರಾಜು ಕೋಲೆರ, ಎಂಡಿಆರ್ಎಸ್ ಶಿಗ್ಗಾಂವಿ ಸಂಸ್ಥೆಯ ಪ್ರಾಚಾರ್ಯ ಎಂ.ಎನ್. ಭೋಸ್ಲೆ, ವಿವಿಧ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲೆಯ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ
ಶಾಲೆಗಳ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಮತ್ತು ಸಮಾಜ ಕಲ್ಯಾಣ ಇಲಾಖಾ ಸಿಬ್ಬಂದಿ, ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

