ಬಾಲಕಾರ್ಮಿಕ ಪದ್ಧತಿ ತೊಲಗಿಸಿ
ಹಿರೇಕೆರೂರು: ಬಾಲಕಾರ್ಮಿಕ ಪದ್ಧತಿ ಅನಿಷ್ಟ ಸಂಪ್ರದಾಯವಾಗಿದ್ದು, ಇದನ್ನು ನಿವಾರಣೆ ಮಾಡಲು ಸಮಾಜದ ಪ್ರತಿಯೊಬ್ಬ ನಾಗರಿಕರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ತಹಸೀಲ್ದಾರ್ ಹನುಮಂತಪ್ಪ ಬಡದಾಳ ಕರೆ ನೀಡಿದರು.
ತಾಲೂಕಿನ ರಟ್ಟಿಹಳ್ಳಿ ಗ್ರಾಮದ ಕಬ್ಬಿಣಕಂಥಿಮಠದ ಸಿದ್ಧಲಿಂಗೇಶ್ವರ ವಿದ್ಯಾಪೀಠ ಹಾಗೂ ಹಾವೇರಿಯ ಕದಂಬ ಬಾಲ ಕಾರ್ಮಿಕರ ಯೋಜನಾ ಸಂಘದ ಆಶ್ರಯದಲ್ಲಿ ಕದಂಬ ಬಾಲಕಾರ್ಮಿಕ ವಿಶೇಷ ಶಾಲೆಯ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ರೈತರ, ದೀನ ದಲಿತರ, ದುರ್ಬಲ ವರ್ಗದ ಮಕ್ಕಳ ಏಳ್ಗೆಗೆ ಶೈಕ್ಷಣಿಕ ಕೊಡುಗೆ ಅಗತ್ಯವಾಗಿದ್ದು, ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಮಠದ ಕಾರ್ಯ ಶ್ಲಾಘನೀಯ ಎಂದರು. ಬಾಲ ಕಾರ್ಮಿಕರು ಕಲಿಕೆಗೆ ಆಸಕ್ತಿ ತೋರಿ ಅನಿಷ್ಟ ವಿಚಾರಗಳನ್ನು ತೊರೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸಿ.ವಿ. ಹೊರಟ್ಟಿ ಮಾತನಾಡಿ, ರಾಜ್ಯದಲ್ಲಿ 19 ಲಕ್ಷ ಬಾಲ ಕಾರ್ಮಿಕರಿದ್ದು, ಅವರಿಗೆ ಪುನರ್ವಸತಿ ಹಾಗೂ ಶಿಕ್ಷಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಮಹತ್ತರವಾದ ಯೋಜನೆ ರೂಪಿಸಿದೆ. ಮಂಡಕ್ಕಿ ಬಟ್ಟಿ, ಇಟ್ಟಿಗೆ ನಿರ್ಮಾಣ, ಕುರಿ ಸಾಕಾಣಿಕೆ, ಹೊಟೇಲ್ ಉದ್ಯಮದಲ್ಲಿ ಕೆಲಸ ಮಾಡುವ ಮಕ್ಕಳನ್ನು ಈ ಯೋಜನೆಗೆ ಸೇರಿಸಿಕೊಳ್ಳಲಾಗುವುದು ಎಂದರು.
ಹಾವೇರಿ ಜಿಲ್ಲೆಯಲ್ಲಿ 550 ವಿದ್ಯಾರ್ಥಿಗಳಿದ್ದು, ತಲಾ ಒಂದು ಶಾಲೆಗೆ 50 ವಿದ್ಯಾರ್ಥಿಗಳಂತೆ 11 ಶಾಲೆಗಳನ್ನು ಸ್ಥಾಪಿಸಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು. ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮಠ ಸನ್ನದ್ಧವಾಗಿದ್ದು, ಸಮಾಜದಲ್ಲಿ ಬಾಲಕಾರ್ಮಿಕರು ಕಂಡು ಬಂದಲ್ಲಿ ಸಾರ್ವಜನಿಕರು ಮಾಹಿತಿ ನೀಡಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಘದ ಕ್ಷೇತ್ರಾಧಿಕಾರಿ ವಿನಯ್ ಘೋರ್ಪಡೆ, ಮುಖ್ಯ ಶಿಕ್ಷಕ ಎಲ್.ಎಸ್. ಗೌಡರ್, ಕಾರ್ಯದರ್ಶಿ ಚಿದಾನಂದ ಮಠದ ಮೊದಲಾದವರು ಉಪಸ್ಥಿತರಿದ್ದರು. ಶಾರದಾ ಸಂಕಣ್ಣನವರ ಸ್ವಾಗತಿಸಿದರು. ಮಲ್ಲಪ್ಪ ಕೆ.ಎಂ. ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

