ಹಾವೇರಿ

ಸಾಮೂಹಿಕವಾಗಿ ಪರಿಸರ ರಕ್ಷಿಸಿ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಜೂ. 29
ಪರಿಸರ ಸಂರಕ್ಷಣೆ ಕೇವಲ ದಿನಾಚರಣೆ ಆಚರಿಸುವ ಮೂಲಕ ಸಾಧಿತವಾಗುವ ವಿಷವಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಹಾಗೂ ಸಾಮೂಹಿಕ ನೆಲೆಯಲ್ಲಿ ನಿರಂತರ ಜವಾಬ್ದಾರಿ ನಿರ್ವಹಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ತಿಳಿಸಿದರು.
ಹಾವೇರಿ ಜಿಲ್ಲಾ ವಾರ್ತಾ ಭವನದ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇಲಾಖೆ ಆಶ್ರಯದಲ್ಲಿ ಏರ್ಪಡಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಪರಿಸರ ಮಿತ್ರ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಅಜಾಗರೂಕತೆ: ಜಗತ್ತಿನಲ್ಲಿ ಅಗತ್ಯಗಳ ಪೂರೈಕೆ ಮತ್ತು ಮನುಷ್ಯನ ಜೀವನ ಶೈಲಿಯ ಅನುಕೂಲಗಳಿಗಾಗಿ ಪರಿಸರ ಹಲವು ವಿಧದಲ್ಲಿ ಪ್ರತಿಕ್ಷಣವೂ ಘಾಸಿಕೊಳ್ಳುತ್ತಿದ್ದು, ಇದರಿಂದ ಪರಿಸರದಲ್ಲಿ ಅಸಮತೋಲನವುಂಟಾಗಿ, ಹಲವು ವಿದದ ಪ್ರಾಕೃತಿಕ ವಿಕೋಪ ಮತ್ತು ದುರಂತಗಳನ್ನು ಆತಂಕದಿಂದ ಎದುರು ನೋಡುವಂತಾಗಿದೆ.
ಜಾಗೃತಿಯಿಂದ ಪರಿಸರ ಕಾಳಜಿ: ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಜೀವನ ಸಾಧ್ಯವಾಗಬೇಕಾದರೆ, ಪರಿಸರ ಸಂರಕ್ಷಣೆಗೆ ನಿರಂತರ ಜಾಗೃತಿ ಮತ್ತು ವಿದಾಯಕ ಕಾರ್ಯಗಳು ನಿರಂತರ ನಡೆಯಲೇಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರೂಪಿಸಿರುವ ಪರಿಸರ ಮಿತ್ರ ಶಾಲೆ ಯೋಜನೆಯನ್ನು ಶ್ಲಾಘಿಸಿದರು.
ಜೀವಜಲ ಉಳಿಸಿ: ಪರಿಸರ ವೇದಿಕೆ ಅಧ್ಯಕ್ಷೆ ಮಾಧುರಿ ದೇವಧರ ಮಾತನಾಡಿ, ಸೂರ್ಯನ ಸುತ್ತಲಿನ ಗ್ರಹಗಳ ಪೈಕಿ ಭೂಮಿಯೊಂದರಲ್ಲೇ ಜೀವರಾಶಿಗಳ ಅಸ್ತಿತ್ವವಿದ್ದು, ಎಲ್ಲ ಜೀವರಾಶಿಗಳಿಗೂ ನೀರು ಆಧಾರವಾಗಿದೆ. ಭೂಮಿಯ ಮೇಲೆ ಲಭ್ಯವಿರುವ ನೀರಿನ ಪೈಕಿ ಶೇ. 88ರಷ್ಟು ಮಾತ್ರ ಕುಡಿಯಲು ಯೋಗ್ಯವಾಗಿದೆ. ಇಂಥ ಅಮೂಲ್ಯ ನೀರಿನ ದುರ್ಬಳಕೆ ಬೇಡ ಎಂದು ಮನವಿ ಮಾಡಿದರು.
ಅಂತರ್ಜಲ ಹೆಚ್ಚಳಕ್ಕೆ ಶ್ರಮಿಸಿ: ಮಳೆಯಿಂದ ಬಿದ್ದು ಹರಿದು ಸಾಗರ ಸೇರುವ ನೀರನ್ನು ಅಲ್ಲಲ್ಲಿ ತಡೆದು ನಿಲ್ಲಿಸಿ, ಇಂಗಿಸಿದಲ್ಲಿ ಅಂತರ್ಜಲ ವೃದಿ ್ಧಸಾಧ್ಯ. ನೀರಿನ ಸರಿಯಾದ ನಿರ್ವಹಣೆಯಾದಲ್ಲಿ ದೇಶದ ಯಾವ ಗ್ರಾಮಕ್ಕೂ ಕುಡಿಯುವ ನೀರಿನ ಸಮಸ್ಯೆ ಇರದು. ಅಷ್ಟೇ ಅಲ್ಲ ಭೂ ಸವಕಳಿಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾವೇರಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಈ. ಪ್ರಕಾಶ ಪ್ರಾಸ್ತಾವಿಕ ಮಾತನಾಡಿ, ಸರ್ಕಾರ ಕಳೆದ ವರ್ಷದಿಂದ ರಾಜ್ಯದಲ್ಲಿ ಪರಿಸರ ಮಿತ್ರ ಶಾಲಾ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆ ಅಡಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಶಾಲಾ ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ, ಬದ್ಧತೆ ಬೆಳೆಸಲಾಗುತ್ತಿದೆ.
ಜಿಲ್ಲೆಯಲ್ಲಿ ಕಳೆದ ವರ್ಷ ಜಿಲ್ಲೆ ಆಯ್ದ 88 ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಶ್ನಾವಳಿ ಮೂಲಕ ಪರೀಕ್ಷೆ ನಡೆಸಿ, ಅಂತಿಮವಾಗಿ 21 ಶಾಲೆಗಳನ್ನು ಪರಿಸರ ಮಿತ್ರ ಶಾಲೆಗಳೆಂದು ಗುರುತಿಸಲಾಯಿತು. ಈ ಪೈಕಿ ಹಾನಗಲ್ಲ ತಾಲೂಕಿನ ಗಡೆಗುಂಡಿಯಲ್ಲಾಪುರ ಸರ್ಕಾರೀ ಕಿರಿಯ ಪ್ರಾಥಮಿಕ ಶಾಲೆಯನ್ನು ಜಿಲ್ಲೆಯ ಅತ್ಯುತ್ತಮ ಪರಿಸರ ಮಿತ್ರ ಶಾಲೆಯೆಂದು ಆಯ್ಕೆ ಮಾಡಿದ್ದು,  ಈ ಶಾಲೆಗೆ ಭೇಟಿ ನೀಡಿದ ತಜ್ಞರ ತಂಡ, ಈ ಶಾಲೆಯನ್ನು ವಿಭಾಗಮಟ್ಟದ ಉತ್ತಮ ಪರಿಸರ ಶಾಲೆಯೆಂದು ಆಯ್ಕೆ ಮಾಡಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಮಾತನಾಡಿದರು.
ಪರಿಸರ ಮಿತ್ರ ಶಾಲಾ ಯೋಜನೆಯ ಕಾರ್ಯಕಾರಿಣಿ ಸದಸ್ಯ ಹನುಮಂತಗೌಡ ಗೊಲ್ಲರ ಅವರು ಪರಿಸರ ಮಿತ್ರ ಶಾಲಾ ವಿವರ ನೀಡಿದರು.
ಈ ಸಂದರ್ಭ ವಿಭಾಗಮಟ್ಟದ ಅತ್ಯುತ್ತಮ ಪರಿಸರ ಮಿತ್ರ ಶಾಲೆಯೆಂದು ಗುರುತಿಸಲ್ಪಟ್ಟ ಗಡೆಗುಂಡಿಯಲ್ಲಾಪುರ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಮಕ್ಕಳಿಗೆ ಜಿಲ್ಲಾಧಿಕಾರಿಗಳು ಪ್ರಮಾಣಪತ್ರ ವಿತರಿಸಿದರು. ಮತ್ತು  ಜಿಲ್ಲೆಯ 20 ಪರಿಸರ ಮಿತ್ರ ಶಾಲೆಗಳಿಗೆ ಪ್ರಮಾಣಪತ್ರ ವಿತರಿಸಿದರು. ನಂತರ, ಪರಿಸರ ದಿನಾಚರಣೆ ಅಂಗವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಹಾವೇರಿ ಪ್ರಾದೇಶಿಕ ಕಚೇರಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಸಮಾರಂಭಕ್ಕೆ ಮುಂಚೆ ವಾರ್ತಾ ಭವನದ ಎದುರು ಜಿಲ್ಲಾಧಿಕಾರಿಗಳು ಸಸಿನೆಡುವ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಹಾವೇರಿ ನಗರಸಭಾ ಆಯುಕ್ತ ರವೀಂದ್ರ ಮಲ್ಲಾಪುರ, ಪರಿಸರ ಮಿತ್ರ ಕಾರ್ಯಕಾರಿಣಿ ಸದಸ್ಯ ಹಾಗೂ ಆಶಾಕಿರಣ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಮುತ್ತುರಾಜ ಮಾದರ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ನಗರದ ವಿವಿಧ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಸ್ಗೊಂಡಿದ್ದರು. ಶಿವಾನಂದ ದೊಡ್ಮನಿ ಕಾರ್ಯಕ್ರಮ ನಿರೂಪಿಸಿದರು. ಹನುಮಂತಗೌಡ ಗೊಲ್ಲರ ವಂದಿಸಿದರು.


ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಜೀವನ ಸಾಧ್ಯವಾಗಬೇಕಾದರೆ, ಪರಿಸರ ಸಂರಕ್ಷಣೆಗೆ ನಿರಂತರ ಜಾಗೃತಿ ಮತ್ತು ವಿದಾಯಕ ಕಾರ್ಯಗಳು ನಿರಂತರ ನಡೆಯಲೇಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರೂಪಿಸಿರುವ ಪರಿಸರ ಮಿತ್ರ ಶಾಲೆ ಯೋಜನೆ ಕಾರ್ಯ ಉತ್ತಮವಾಗಿದೆ.
ಪಾಂಡುರಂಗ ನಾಯಕ,
ಜಿಲ್ಲಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.