ಪುರಸಭೆ ಪಟ್ಟಕ್ಕೆ ಕಸರತ್ತು
ಬಿ.ಎಸ್. ಹಿರೇಮಠ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಮಾ.2
ಶಿಗ್ಗಾಂವಿ ಪಟ್ಟಣ 2011ರ ಜನಗಣತಿಯ ಪ್ರಕಾರ 28,216 ಜನಸಂಖ್ಯೆಯನ್ನು ಹೊಂದಿದೆ. ಅದರಲ್ಲಿ 14,405 ಪುರುಷರು ಹಾಗೂ 13,811 ಮಹಿಳೆಯರಿದ್ದಾರೆ. ಹಿಂದಿನ ಅವಧಿಯಲ್ಲಿ 23 ಸದಸ್ಯರು, ನಾಮ ನಿರ್ದೇಶಿತ ಐವರು ಸದಸ್ಯರು ಆಡಳಿತದಲ್ಲಿದ್ದರು. ಈಗಾಗಾಲೇ ಚುನಾವಣಾ ವೇದಿಕೆ ಸಿದ್ದವಾಗಿದ್ದು, 112 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಕಳೆದ ಬಾರಿ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲದೆ ಅತಂತ್ರ ಪುರಸಭೆ ನಿರ್ಮಾಣವಾಗಿತ್ತು. ಪುರಸಭೆ ಆಡಳಿತ ಚುಕ್ಕಾಣಿ ಹಿಡಿಯಲು ಈ ಬಾರಿ ಬಿಜೆಪಿ, ಕಾಂಗ್ರೆಸ್, ಇನ್ನಿತರ ಪ್ರಾದೇಶಿಕ ಪಕ್ಷಗಳ ಮಧ್ಯೆ ಪೈಪೋಟಿ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈ ಬಾರಿ ಪುರಸಭೆಯ ಚುಕ್ಕಾಣಿ ಹಿಡಿಯುವವರಿಗೆ ಪಟ್ಟಣದಲ್ಲಿರುವ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ ಪೆಂಡಭೂತವಾಗಿ ಕಾಡಲಿದೆ. ಚುನಾವಣಾ ಕಣಕ್ಕಿಳಿದಿರುವ ಅಭ್ಯರ್ಥಿಗಳ ಪ್ರಚಾರ ಅಷ್ಟಕ್ಕಷ್ಟೆ ಆಗಿದ್ದರೂ ಇದು ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಇವರಿಬ್ಬರ ಪ್ರತಿಷ್ಠೆಯ ಅಂಶವಾಗಿಯೂ ಜನರಲ್ಲಿ ಮನೆ ಮಾತಾಗಿದೆ. ಹೀಗಾಗಿ ಇಬ್ಬರೂ ತಂತಮ್ಮ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಪಣತೊಟ್ಟಂತಿದೆ.
ಪುರಸಭೆಯ ಚುನಾವಣೆ ಫಲಿತಾಂಶ ಮುಂಬರುವ ವಿಧಾನಸಭಾ ಚುನಾವಣೆಗೂ ಮಾನದಂಡವಾಗಲಿದೆ. ಈ ದಿಸೆಯಲ್ಲಿ ಬಿಜೆಪಿ-ಕಾಂಗ್ರೆಸ್ ವರಿಷ್ಠರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲವಿಗೆ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ. ಆದರಿಲ್ಲಿ ಅಭ್ಯರ್ಥಿಗಳ ಗೆಲುವಿಗೆ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಪ್ರಮುಖ ಮಾನದಂಡವಾಗಿ ಜನತೆ ನಿರೀಕ್ಷಿಸುತ್ತಿರುವುದು ಬಹುತೇಕ ಎಲ್ಲರಿಗೂ ಗೊಂದಲದ ಗೂಡಾಗಿದೆ. ಕೆಲ ವಾರ್ಡ್‌ಗಳಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಗಿಂತ ಪಕ್ಷೇತರರತ್ತ ಮತದಾರ ಒಲವು ಹೊಂದಿದ್ದರೆ ಮತ್ತೆ ಕೆಲ ಕಡೆಗಳಲ್ಲಿ ವ್ಯಕ್ತಿ ಆಧಾರಿತವಾಗುತ್ತಿವೆ.
ಈ ಅವಕಾಶ ಬಳಸಿಕೊಳ್ಳಲು ಪಕ್ಷೇತರರು ವಿಭಿನ್ನ ತಂತ್ರಗಾರಿಕೆ ರೂಪಿಸುತ್ತಿರುವುದು ರಾಜಕೀಯ ಮುಖಂಡರಿಗೆ ಬಿಸಿ ತುಪ್ಪಿವಾಗಿದೆ. ಅಬ್ಬರದ ಪ್ರಚಾರಕ್ಕೆ ಇದುವರೆಗೂ ಅಭ್ಯರ್ಥಿಗಳು ಮುಂದಾಗದಿರುವುದು ರಾಜಕೀಯ ಮೇಲಾಟಕ್ಕೆ ಮತದಾರನ ನಿರ್ಣಯವನ್ನು ಅಭ್ಯರ್ಥಿಗಳು ಈಗಾಗಲೇ ಅರಿತಂತಾಗಿದೆ. ಚುನಾವಣೆಯಲ್ಲಿ ಗೆಲುವನ್ನು ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸ ಯಾರಲ್ಲೂ ಕಾಣುತ್ತಿಲ್ಲ. ಎಲ್ಲರೂ ದೈವದ ಮೇಲೆ ಭಾರ ಹಾಕಿರುವುದು ಮುಖಂಡರ ಕುತೂಹಲ ಕೆರಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

