ಹೆಚ್ಚಿನ ಶುಲ್ಕ: ಪ್ರತಿಭಟನೆ
ಹಾವೇರಿ: ಹಳೆ ವಿದ್ಯಾರ್ಥಿಗಳ ಒಕ್ಕೂಟದ ಶುಲ್ಕದ ಹೆಸರಿನಲ್ಲಿ ಕವಿವಿ ಪದವಿ ವಿದ್ಯಾರ್ಥಿಗಳಿಂದ ರು. 250ನ್ನು ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿದ್ದು, ಕೂಡಲೇ ಈ ಅವೈಜ್ಞಾನಿಕ ಶುಲ್ಕ ವಸೂಲಿ ನಿಲ್ಲಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾವೇರಿ ನಗರ ಶಾಖೆ ನೇತೃತ್ವದಲ್ಲಿ ಪದವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಈ ಆದೇಶ ರದ್ದುಗೊಳಿಸುವಂತೆ ಆಗ್ರಹಿಸಿ ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಿಂದ ರ್ಯಾಲಿ ಆರಂಭಿಸಿದ ವಿದ್ಯಾರ್ಥಿಗಳು ಜೆ.ಪಿ. ಸರ್ಕಲ್ನಲ್ಲಿ ಮಾನವ ಸರಪಳಿ ನಿರ್ಮಿಸಿ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮುಖಾಂತರ ಕರ್ನಾಟಕ ವಿಶ್ವ ವಿದ್ಯಾಲಯ ಉಪ ಕುಲಪತಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಅಧಿಕ ಶುಲ್ಕ ವಸೂಲಿಗೆ ವಿರೋಧ: ಹಳೆ ವಿದ್ಯಾರ್ಥಿಗಳ ಒಕ್ಕೂಟದ ಶುಲ್ಕ ಅನಗತ್ಯ ಹಾಗೂ ಅನಾವಶ್ಯಕವಾಗಿದೆ. ವಿದ್ಯಾರ್ಥಿಗಳಿಂದ ಅನಗತ್ಯ ಶುಲ್ಕ ವಸೂಲಿ ಮಾಡುತ್ತಿರುವುದನ್ನು ಎಬಿವಿಪಿ ತೀವ್ರ ವಿರೋಧಿಸುತ್ತದೆ. ಈ ಶುಲ್ಕದಿಂದ ಈಗಿರುವ ವಿದ್ಯಾರ್ಥಿಗಳಿಗೆ ಆಗುವ ಅನುಕೂಲವಾದರೂ ಏನು? ಶುಲ್ಕವನ್ನು ಏತಕ್ಕಾಗಿ ಬಳಸಲಾಗುತ್ತದೆ ಎಂಬುದನ್ನು ಕವಿವಿ ಉಪ ಕುಲಪತಿಗಳು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಪರೀಕ್ಷಾ ಶುಲ್ಕ ಮಾತ್ರ ತೆಗೆದುಕೊಳ್ಳಿ: ಕರ್ನಾಟಕ ವಿವಿಯು ಶಿಕ್ಷಣ ಕೊಡುವ ಸ್ಥಾನ ಹೊರತು ಹಣ ಮಾಡುವ ಕೇಂದ್ರವಲ್ಲ. ಕಾರಣ ತಕ್ಷಣ ಆದೇಶ ಹಿಂಪಡೆಯಬೇಕು. ಇಲ್ಲವೇ ರದ್ದುಗೊಳಿಸಬೇಕು. ಮೊದಲಿನ ಪದ್ಧತಿಯಂತೇ ಪರೀಕ್ಷಾ ಶುಲ್ಕವನ್ನು ಮಾತ್ರ ತೆಗೆದುಕೊಳ್ಳಬೇಕೆಂದರು.
ಅನೇಕ ಕಾಲೇಜುಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಉಪನ್ಯಾಸಕರ ನೇಮಕಾತಿ ಮಾಡದೇ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡದೇ ವಿವಿ ಕೇವಲ ಹಣ ಮಾಡುವ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನಗತ್ಯ ಶುಲ್ಕ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸಿ ಹೊರಡಿಸಿರುವ ಆದೇಶ ರದ್ದುಗೊಳಿಸಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದಲ್ಲಿ ಎಬಿವಿಪಿ ವಿಶ್ವ ವಿದ್ಯಾಲಯಕ್ಕೆ ಮುತ್ತಿಗೆ ಹಾಕುವ ಮೂಲಕ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಸಂಘಟನೆ ಎಚ್ಚರಿಸಿದೆ. ಪ್ರತಿಭಟನೆಯಲ್ಲಿ ಎಬಿವಿಪಿಯ ಜಿಲ್ಲಾ ಸಂಚಾಲಕ ಸಂತೋಷ ಆಲದಕಟ್ಟಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕೇಶವಮೂರ್ತಿ ಬೇಲೂರಪ್ಪನವರ, ನಗರ ಕಾರ್ಯದರ್ಶಿ ಸಾಗರ ಅಂಗಡಿ, ನಗರ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಕಂಡಿ, ಕಾರ್ಯಕರ್ತರಾದ ರಾಹುಲ್ ತಪಶೆಟ್ಟಿ, ಸಂತೋಷ ಡೀಗನೂರ್, ರೋಷನ್ ಚಬ್ಬಿ, ಮಾಲತೇಶ ಡಿ.ಜಿ, ಡಿ.ಎಫ್. ಮಾಳಗಿ, ಗೌಡೇಶ ಪಾಟೀಲ, ಮುತ್ತು ಹೊಸಳ್ಳಿ, ಮಂಜುನಾಥ ಹುರಳಿಕುಪ್ಪಿ, ಹರೀಶ ಎಚ್, ಪ್ರವೀಣ ಎಂ.ಎಚ್. ಸಹನಾ ಕುಂಬಾರ, ರೇಖಾ ಎಸ್.ಟಿ, ಅನುಷಾ ಕಬಾಡಿ, ಮಧುಮತಿ ಕೆ. ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

