ಅಕ್ಷರ, ಅನ್ನ ದಾಸೋಹ ಶ್ರೇಷ್ಠ
ಹಾವೇರಿ: ಎಲ್ಲ ದಾನಗಳಲ್ಲಿ ಅನ್ನದಾನ, ಅಕ್ಷರದಾನ ಶ್ರೇಷ್ಠ. ಶಿಕ್ಷಕರು ವಿದ್ಯಾರ್ಥಿಗಳಿಗೆ ಅಕ್ಷರ ದಾನವನ್ನು ನೀಡುತ್ತಾರೆ. ಅಕ್ಷರ ಅಭ್ಯಾಸಕ್ಕಾಗಿ ಬರುವ ಮಕ್ಕಳಿಗೆ ಅಕ್ಷರದಾಸೋಹ ಯೋಜನೆಯಡಿ ಸರ್ಕಾರವು ಅನ್ನದಾನವನ್ನು ಸಹ ಮಾಡುತ್ತಿದೆ ಎಂದು ಹುಕ್ಕೇರಿಮಠದ ಸದಾಶಿವ ಶ್ರೀಗಳು ನುಡಿದರು.
ನಗರದ ಹುಕ್ಕೇರಿಮಠದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ, ಅಕ್ಷರ ದಾಸೋಹ ಕಾರ್ಯಕ್ರಮಗಳ ಸಹಯೋಗದಲ್ಲಿ ಜಿಲ್ಲಾಮಟ್ಟದ ಮುಖ್ಯ ಅಡುಗೆ ಸಿಬ್ಬಂದಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಾಮಾಣಿಕ ಕಾರ್ಯವಿರಲಿ: ಶಿಕ್ಷಕರು ಮಕ್ಕಳಿಗೆ ಅಕ್ಷರ ದಾಹವನ್ನು ನೀಗಿಸಿದರೆ, ಅಡುಗೆ ಸಿಬ್ಬಂದಿ ಮಕ್ಕಳ ಹಸಿವಿನ ದಾಹ ನೀಗಿಸುತ್ತಾರೆ. ಆದ್ದರಿಂದ ಮುಖ್ಯ ಅಡುಗೆ ಸಿಬ್ಬಂದಿಗಳು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ದಿನನಿತ್ಯದ ಕಾರ್ಯದಲ್ಲಿ ತೊಡಗಿಕೊಂಡು, ಶುಚಿತ್ವದೊಂದಿಗೆ ಉತ್ತಮ ಆಹಾರ ತಯಾರಿಸಿ ಮಕ್ಕಳಿಗೆ ಬಡಿಸಬೇಕೆಂದು ಸಲಹೆ ಮಾಡಿದರು.
ದೇಸಿ ಆಹಾರ ಉಣಬಡಿಸಿ: ಮಕ್ಕಳಿಗೆ ದೇಸಿ ಆಹಾರದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದರೊಂದಿಗೆ, ಮಕ್ಕಳನ್ನು ವಿದೇಶಿ ಆಹಾರ ಪದ್ಧತಿಯಾದ ಫಾಸ್ಟ್ಫುಡ್ ಹಾಗೂ ಜಂಕ್ ಫುಡ್ಗಳಿಂದ ದೂರವಿರಸಬೇಕು ಮತ್ತು ಅವುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ಸರ್ಕಾರವು ನಿಮಗೆ ಮಕ್ಕಳ ಪೋಷಣೆ ಜವಾಬ್ದಾರಿ ವಹಿಸಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವ ಕುರಿತು ಈ ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಗುವುದು. ಅದನ್ನು ದಿನನಿತ್ಯದ ಕಾರ್ಯದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಸ್ವಚ್ಛತೆ ಕಾಪಾಡಿ: ಅತಿಥಿಯಾಗಿ ಭಾಗವಹಿಸಿದ್ದ ಜಿಪಂ ಮುಖ್ಯ ಲೆಕ್ಕಾಧಿಕಾರಿ ಡಾ. ಶಿವಪುತ್ರ, ಅಕ್ಷರ ದಾಸೋಹ ಯೋಜನೆ ಮಾರ್ಗದರ್ಶಿಕೆ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಿಲಿಂಡರ್ ಸ್ಫೋಟದಂಥ ಮಾರಣಾಂತಿಕ ಘಟನೆಗಳು ಜರುಗುತ್ತಿದ್ದು, ಅಡುಗೆ ಸಿಬ್ಬಂದಿ ಕಾರ್ಯನಿರ್ವಹಿಸುವಾಗ ಸುರಕ್ಷತೆ ಹಾಗೂ ಶುಚಿತ್ವದೆಡೆಗೆ ಹೆಚ್ಚು ಗಮನ ನೀಡುವಂತೆ ತಿಳಿಸಿದರು.
ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಖಾಜಿ ಮಾತನಾಡಿ, ಶಾಲಾ ಆವರಣವನ್ನು ಕೈತೋಟವಾಗಿ ಮಾರ್ಪಡಿಸಿ, ಅಡುಗೆಗೆ ಅಗತ್ಯವಿರುವ ತರಕಾರಿ ಹಾಗೂ ಸೊಪ್ಪನ್ನು ಬೆಳೆದು, ಅದನ್ನೇ ದಿನನಿತ್ಯದ ಆಹಾರ ತಯಾರಿಕೆಗೆ ಬಳಸಿಕೊಳ್ಳುವುದರಿಂದ ಪೌಷ್ಟಿಕ ಆಹಾರ ಒದಗಿಸಿದಂತಾಗುತ್ತದೆ ಎಂದರು.
ಅತಿಥಿಗಳಾಗಿ ಅಕ್ಷರ ದಾಸೋಹ ರಾಜ್ಯ ಕಚೇರಿ ಸಹಾಯಕ ನಿರ್ದೇಶಕ ನೀಲನಗೌಡ್ರ, ಇಂಡಿಯನ್ ಗ್ಯಾಸ್ ಎಜೆನ್ಸಿ ಮಾಲೀಕ ಶಿವಬಸವ ಬೆಲ್ಲದ, ಮಾಗಾವಿ ಗ್ಯಾಸ್ ಏಜೆನ್ಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರೀವಿಕ್ಷಕ ಹುರಳಿ, ಸರ್ವಶಿಕ್ಷಣ ಅಭಿಯಾನದ ಅಕ್ಷರ ದಾಸೋಹದ ಅಧಿಕಾರಿ ಎಸ್.ಎಸ್. ಅಡಿಗ, ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಇದೇ ಸಂದರ್ಭ ತಾಲೂಕು ಮಟ್ಟದ ಉತ್ತಮ ಅಡುಗೆ ಸಿಬ್ಬಂದಿಗೆ ಶಾಲು ಹೊದೆಸಿ ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

