ಕಾವ್ಯ ಹುಡುಗಾಟವಲ್ಲ, ಹುಡುಕಾಟ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 18
ಸಮಾಜದ ವಿರುದ್ಧ ಇತಿಹಾಸದುದಕ್ಕೂ ತಾರತಮ್ಯಗಳು ನಡೆದ ಪ್ರತಿಯೊಂದು ಹೋರಾಟಗಳು ಅಪೂರ್ಣವಾಗಿವೆ. ಅಲ್ಲಿ ಉಳಿದ ಅಪೂರ್ಣತೆಗಳೇ ಹೊಸ ಹೋರಾಟಕ್ಕೆ ಕಾರಣವಾಗಿವೆ. ಕಾವ್ಯವೂ ಯಾವಾಗಲೂ ಬದಲಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಕಾವ್ಯ ಹುಡುಗಾಟವಲ್ಲ, ಅದೊಂದು ಕಾಡುವ ಪ್ರಶ್ನೆಗಳಿಗೆ ಉತ್ತರ ಕಾಣುವ ಹುಡುಕಾಟ ಎಂದು ಕವಿವಿ ಹಾವೇರಿ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ. ಟಿ.ಎಂ. ಭಾಸ್ಕರ ಅಭಿಪ್ರಾಯಪಟ್ಟರು.
ಕಳೆದ ನಾಲ್ಕು ದಿನಗಳಿಂದ ಇಲ್ಲಿಯ ವಾರ್ತಾ ಭವನದಲ್ಲಿ ಯುವ ಕವಿಗಳಿಗಾಗಿ ನಡೆದ ಡಾ. ವಿ.ಕೃ. ಗೋಕಾಕ, ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಆಶ್ರಯದಲ್ಲಿ ನಡೆದ ಕಮ್ಮಟದ ಸಮಾರೋಪದಲ್ಲಿ ಮಾತನಾಡಿದರು.
ಕಾವ್ಯ ಯಾವಾಗಲೂ ಸತ್ಯ ಹೇಳುತ್ತ ದೂರದೃಷ್ಟಿಯನ್ನಿಟ್ಟು ಸಾಗುತ್ತದೆ. ಇದರಲ್ಲಿ ಸಂವೇದನಾಶೀಲ ಗುಣ ಇರುತ್ತದೆ. ಅಂತಹ ಗುಣವನ್ನು ಹೊಸ ಕವಿಗಳು ಪ್ರೇರಣೆಯಾಗಿ ಪಡೆಯಬೇಕು. ಇಂದು ನಾವು ಬರೆಯುತ್ತಿರುವ ಕಾವ್ಯ ಎಷ್ಟೇ ಸತ್ವಯುತವಾಗಿದ್ದರೂ ಪ್ರಯೋಗಶೀಲತೆಯ ಕೊರತೆ ಇದೆ. ಕಾವ್ಯ ಪ್ರಯೋಗಶೀಲತೆ ಮತ್ತು ಕಲಾತ್ಮಕತೆಯನ್ನು ಪಡೆದುಕೊಳ್ಳಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಭಾರಿ ಜಿಲ್ಲಾಧಿಕಾರಿ ಜಿ. ಜಗದೀಶ ಮಾತನಾಡಿ, ಕಾವ್ಯ ಕಮ್ಮಟಗಳು ಕವಿಗಳನ್ನು ರೂಪಿಸುವುದು ಮಾತ್ರವಲ್ಲ, ಸಮಾಜವನ್ನೂ ರೂಪಿಸುತ್ತವೆ. ಇಂಥಹ ಕಮ್ಮಟಗಳು ಯುವಕರನ್ನು ಹೊಸ ಮಾರ್ಗದ ಹುಡುಕಾಟಕ್ಕೆ ಹಚ್ಚುತ್ತವೆ. ಪ್ರಸ್ತುತ ದಿನಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಉತ್ತಮ ಬೆಲೆ ಬರುತ್ತಿದೆ. ಕನ್ನಡ ಕುರಿತಂತೆ ಎಲ್ಲರಲ್ಲೂ ಜಾಗೃತಿ ಮೂಡುತ್ತಿರುವುದು ಸ್ವಾಗತಾರ್ಹ. ಅಲ್ಲದೆ, ಗೋಕಾಕ ಟ್ರಸ್ಟ್ನ ಕಾರ್ಯ ಶ್ಲಾಘನೀಯ ಎಂದರು.
ಹಾವೇರಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಬಿ. ಮಾಸಣಗಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಗಂಗಾಧರ ಹೂಗಾರ, ಡಾ. ಸುಮಂಗಲಾ ಅತ್ತಿಗೇರಿ, ಜಿಲ್ಲಾ ನೌಕರ ಸಂಘದ ಅಧ್ಯಕ್ಷ ಚಂದ್ರಶೇಖರ ಮಾಳಗಿ, ಸದಸ್ಯ ಕಾರ್ಯದರ್ಶಿ ಶಶಿಕಲಾ ಹುಡೇದ ಮಾತನಾಡಿದರು. ಶಿಬಿರಾರ್ಥಿಗಳಾದ ಮಹೇಶ ವಾಗತ್ತಿ, ತೇಜಪ್ಪ ಮಡಿವಾಳರ, ವೀರೇಶ ಹ್ಯಾಡ್ಲ, ಸಿ.ಕೆ. ಸಾಕ್ರಗೌಳಿ, ಕಾವ್ಯಾ ಗೂಡಪ್ಪನವರ, ಶಿವಾಜಿ ಪೂಜಾರ, ವಿದ್ಯಾ ಕಳಸದ ಮುಂತಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಿಬಿರದ ನಿರ್ದೇಶಕ ಡಾ. ಪಿ.ಟಿ. ಲಕ್ಕಣ್ಣನವರ ಸ್ವಾಗತಿಸಿದರು. ಇನ್ನೋರ್ವ ನಿರ್ದೇಶಕ ಸತೀಶ ಕುಲಕರ್ಣಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

