ವ್ಯಾಯಾಮ ಶಾಲೆ, ಶೌಚಾಲಯಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ. 21
ಪಟ್ಟಣದಲ್ಲಿ ವ್ಯಾಯಾಮ ಶಾಲೆ ಪ್ರಾರಂಭಿಸುವುದು ಸೇರಿದಂತೆ ಶೌಚಾಲಯ ನಿರ್ಮಾಣ ಇನ್ನಿತರ ಮೂಲ ಸೌಕರ್ಯಗಳಿಗೆ ಆಗ್ರಹಿಸಿ ನಾಗರಿಕ ಹೋರಾಟ ಸಮಿತಿ ಸದಸ್ಯರು ಗುರುವಾರ ಹಳೇ ಪುರಸಭೆ ಎದುರಿಗೆ ಅನಿರ್ದಿಷ್ಟ ಕಾಲ ಧರಣಿ ಆರಂಭಿಸಿದರು. ಅಲ್ಲದೇ ಮುಖ್ಯರಸ್ತೆಯಲ್ಲಿಯೇ ವ್ಯಾಯಾಮದ ವಿವಿಧ ಭಂಗಿ ಪ್ರದರ್ಶಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ಈ ಸಂದರ್ಭ ಸಮಿತಿ ಸದಸ್ಯ ಸುರೇಶ ಚಲವಾದಿ ಮಾತನಾಡಿ, ಸುಮಾರು 30 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಕೇವಲ 3 ಸಾರ್ವಜನಿಕ ಶೌಚಾಲಯಗಳಿವೆ. ಆದರೆ, ಪುರಸಭೆಯು ಪಟ್ಟಣದ ಅಂಚೆ ಕಚೇರಿ ಬಳಿ ಕಳೆದ 40 ವರ್ಷಗಳಿಂದ ಸಾರ್ವಜನಿಕರು ಉಪಯೋಗಿಸುತ್ತಿದ್ದ ಶೌಚಾಲಯವೊಂದನ್ನು ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಏಕಾಏಕಿ ನೆಲಸಮಗೊಳಿಸಿದೆ. ಹೀಗಾಗಿ ಪಟ್ಟಣದ ವ್ಯಾಪ್ತಿಯಲ್ಲಿ ಕೇವಲ 2 ಶೌಚಾಲಯಗಳು ಸಾರ್ವಜನಿಕ ಉಪಯೋಗಕ್ಕೆ ಉಳಿದಿವೆ ಎಂದು ತಿಳಿಸಿದರು.
ಪ್ರತ್ಯೇಕ ಶೌಚಾಲಯ: ಅವಕಾಶವಾದಿ ಆಡಳಿತ ನಡೆಸಿದ ಪುರಸಭೆ ಹಿಂದಿನ ಆಡಳಿತ ಮಂಡಳಿ ನಿಸರ್ಲಕ್ಷ್ಯದಿಂದಾಗಿ ಪಟ್ಟಣದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ನಿರ್ಮಾಣವಾಗಿಲ್ಲ. ಹೀಗಾಗಿ ಬೇರೆಡೆಯಿಂದ ಪಟ್ಟಣಕ್ಕೆ ಆಗಮಿಸುವ ಮಹಿಳೆಯರಿಗೆ ತೀವ್ರ ಸಮಸ್ಯೆಯಾಗಿದೆ. ಕೂಡಲೇ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡುವಂತೆ ಆಗ್ರಹಿಸಿದರು.
ಹುಸಿಯಾದ ಭರವಸೆ: ಮಂಜುನಾಥ ಪೂಜಾರ ಮಾತನಾಡಿ, ಶೌಚಾಲಯ ನಿರ್ಮಿಸದಿದ್ದಲ್ಲಿ ಕಳೆದ 2012 ಸ್ವಾತಂತ್ರೋತ್ಸವದಂದು (ಆ. 15) ಪುರಸಭೆ ಆವರಣದಲ್ಲಿ ಸಾಮೂಹಿಕ ಮೂತ್ರ ವಿಸರ್ಜನೆ ಮಾಡುವ ಮೂಲಕ ಪ್ರತಿಭಟಿಸಲು ಸಮಿತಿ ನಿರ್ಧರಿಸಿತ್ತು. ಈ ಸಂದರ್ಭ ಮಧ್ಯ ಪ್ರವೇಶಿಸಿದ್ದ ಅಂದಿನ ಆಡಳಿತ ಮಂಡಳಿ ಪಿಎಸ್ಐ ಮದ್ಯಸ್ಥಿಕೆಯಲ್ಲಿ ಕೇವಲ 2 ತಿಂಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ನೀಡಿದ ಭರವಸೆಯು 6 ತಿಂಗಳು ಗತಿಸಿದರೂ ಈಡೇರಿಲ್ಲ. ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಹಣ ಸಂಗ್ರಹಿಸಿರುವ ಪುರಸಭೆ ಬೇರೆ ಉದ್ದೇಶಗಳಿಗೆ ಬಳಕೆ ಮಾಡುವ ಮೂಲಕ ವೃಥಾ ಫೋಲು ಮಾಡುತ್ತಿದೆ ಎಂದು ಆರೋಪಿಸಿದರು.
ವಿಶ್ವ ಪ್ರಸಿದ್ಧ ಮಾರುಕಟ್ಟೆಗೆ ಕಪ್ಪುಚುಕ್ಕೆಮನೋಹರ ಅರ್ಕಾಚಾರಿ ಮಾತನಾಡಿ, ಮೆಣಸಿನಕಾಯಿಗೆ ವಿಶ್ವಪ್ರಸಿದ್ಧ ಮಾರುಕಟ್ಟೆ ಹೊಂದಿರುವ ಪಟ್ಟಣಕ್ಕೆ ಏನಿಲ್ಲವೆಂದರೂ ನಿತ್ಯ 10 ಸಾವಿರಕ್ಕೂ ಹೆಚ್ಚು ರೈತರು ಹಾಗೂ ಕೂಲಿಕಾರ್ಮಿಕರು ಆಗಮಿಸುತ್ತಾರೆ. ಆದರೆ, ಪ್ರಾಂಗಣದಲ್ಲಿ ಮೂತ್ರ ವಿಸರ್ಜನೆಗೆ ಒಂದೂ ಶೌಚಾಲಯವಿಲ್ಲ. ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿರುವ ವಿಶ್ವ ವಿಖ್ಯಾತ ಮಾರುಕಟ್ಟೆಗೆ ಇದೊಂದು ಕಪ್ಪು ಚುಕ್ಕೆಯಂತಾಗಿದೆ ಎಂದರು.
ಹತ್ತು ಶೌಚಾಲಯಗಳ ನಿರ್ಮಾಣಕ್ಕೆ ಆಗ್ರಹ: ಬೆಳೆಯುತ್ತಿರುವ ಪಟ್ಟಣ ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪಟ್ಟಣದ ಬಸ್ ನಿಲ್ದಾಣ, ಅಂಚೆ ಕಚೇರಿ, ಮುಖ್ಯರಸ್ತೆ, ನೆಹರು ನಗರ, ಕದರಮಂಡಲಗಿ ರಸ್ತೆ, ವಿದ್ಯಾನಗರ, ಅಗಸನಹಳ್ಳಿ, ಎಪಿಎಂಸಿ, ಸಂಗಮೇಶ್ವರ ನಗರ ಹಾಗೂ ತಾಲೂಕು ಕ್ರೀಡಾಂಗಣದ ಬಳಿ ಶೌಚಾಲಯಗಳನ್ನು ನಿರ್ಮಿಸುವಂತೆ ಆಗ್ರಹಿಸಿದರು.
ವ್ಯಾಯಾಮ ಶಾಲೆ ಆರಂಭಿಸಿ: ಸಂತೋಷ್ ಗುದಗಿ ಮಾತನಾಡಿ, ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ಬಳಿಯಿದ್ದ ವ್ಯಾಯಾಮ ಶಾಲೆಯನ್ನು ಶಿಥಿಲಗೊಳಿಸಿ ರು. 5 ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಿಸಲಾಗಿದೆ. ಆದರೆ, ಈವರೆಗೂ ಕಾರ್ಯಾರಂಭ ಮಾಡಿಲ್ಲ. ಇತ್ತೀಚಿನ ಯುವಕರಿಗೆ ಉತ್ತಮ ಆರೋಗ್ಯ ಪಡೆಯುವುದು ಅವಶ್ಯಕತೆಯಿದೆ. ಹೀಗಿದ್ದರೂ ಅವಶ್ಯವಿರುವ ವ್ಯಾಯಾಮ ಶಾಲೆಯನ್ನು ಪುನರಾರಂಭಿಸಲು ಪುರಸಭೆ ಮೀನಮೇಷ ಎಣಿಸುತ್ತಿದೆ. ಕೂಡಲೇ ವ್ಯಾಯಾಮ ಶಾಲೆಯನ್ನು ಸಾರ್ವಜನಿಕ ಉಪಯೋಗಕ್ಕೆ ನೀಡುವಂತೆ ಆಗ್ರಹಿಸಿದರು.
ಧರಣಿಯಲ್ಲಿ ನೀಲಕಂಠ ಮಾಳಗಿ, ಪಾಂಡು ಸುತಾರ, ಮಲ್ಲೇಶ ಬಿರಾದಾರ, ಮಹ್ಮದ್ ರಫೀಕ್ ಹಕೀಮ್, ಮಲ್ಲೇಶ್ ತರದೇಹಳ್ಳಿ, ಗುತ್ತೇಶ್ ಪೂಜಾರ, ಸುರೇಶ್ ದಾವಣಗೇರಿ, ನಂದೀಶ ನೆಲ್ಲಿಕೊಪ್ಪದ, ಶಂಕ್ರಪ್ಪ ಗಾಜೇರ, ದಾದಾಪೀರ ಹರಿಹರ, ವಸಂತ ಬ್ಯಾಟಪ್ಪನವರ ಇನ್ನಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

