2ನೇ ದಿನಕ್ಕೆ ಕಾಲಿರಿಸಿದ ಧರಣಿ
ಬ್ಯಾಡಗಿ: ವ್ಯಾಯಾಮ ಶಾಲೆ ಹಾಗೂ ವಿವಿಧೆಡೆ ಶೌಚಾಲಯ ನಿರ್ಮಾಣ, ಇನ್ನಿತರ ಬೇಡಿಕೆ ಈಡೇರಿಸುವಂತೆ ನಾಗರಿಕ ಹೋರಾಟ ಸಮಿತಿ ಸದಸ್ಯರು ನಡೆಸುತ್ತಿರುವ ಧರಣಿ 2ನೇ ದಿನಕ್ಕೆ ಕಾಲಿರಿಸಿದೆ.
ಶುಕ್ರವಾರವೂ ಹೋರಾಟ ತೀವ್ರಗೊಳಿಸಿರುವ ನಾಗರಿಕ ಹೋರಾಟ ಸಮಿತಿ ಸದಸ್ಯರು ನಗರದ ವಿವಿಧೆಡೆ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪುರಸಭೆ ಕಾರ್ಯವೈಖರಿ ವಿರುದ್ಧ ಘೋಷಣೆ ಹಾಕಿದರು.
ರೈತ ಸಂಘ ಬೆಂಬಲ: ನಾಗರಿಕ ಹೋರಾಟ ಸಮಿತಿ ಸದಸ್ಯರು ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕ ಬೆಂಬಲ ವ್ಯಕ್ತಪಡಿಸಿದೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹಸಿರುಸೇನೆ ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಸಮಿತಿಯ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಧರಣಿ ನಡೆಸುವ ಮೂಲಕ ಪುರಸಭೆ ಹಾಗೂ ಇತ್ತೀಚೆಗೆ ಆಯ್ಕೆಯಾದ ನೂತನ ಸದಸ್ಯರನ್ನು ಎಚ್ಚರಿಸುತ್ತಿರುವ ಕ್ರಮ ಸ್ವಾಗತಾರ್ಹ ಎಂದರು. ಪಟ್ಟಣದ ವ್ಯಾಪ್ತಿಯಲ್ಲಿ ಶೌಚಾಲಯ ಇಲ್ಲದಿರುವುದು ಸ್ಥಳೀಯರು, ಪರಸ್ಥಳದಿಂದ ಆಗಮಿಸುವ ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲದೇ ವ್ಯಾಯಾಮ ಶಾಲೆ ಕಾಮಗಾರಿ ಪೂರ್ಣಗೊಂಡರೂ ಇಂದಿಗೂ ಉದ್ಘಾಟನೆಯಾಗದೇ ಉಳಿದಿರುವುದು ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ ಎಂದರು.
ಮುಖ್ಯಾಧಿಕಾರಿ ಸಂಧಾನ ವಿಫಲ: ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಎ.ಬಿ. ಹಾಳಕಲ್ಲಾಪುರ ಧರಣಿಯನ್ನು ಕೈಬಿಡುವಂತೆ ನಾಗರಿಕ ಹೋರಾಟ ಸಮಿತಿ ಸದಸ್ಯರ ಜೊತೆ ನಡೆಸಿದ ಮಾತುಕತೆ ವಿಫಲವಾಗಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ನೂತನ ಕಾಮಗಾರಿಯಾಗಲಿ ಅಥವಾ ಉದ್ಘಾಟನೆ ಮಾಡಲು ಸಾಧ್ಯವಿಲ್ಲ. ತಮ್ಮ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಚುನಾವಣೆ ಬಳಿಕ ತಮ್ಮೆಲ್ಲ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರಲ್ಲದೇ, ಧರಣಿ ಕೈಬಿಡುವಂತೆ ಮನವಿ ಮಾಡಿದರು.
ಈ ಸಂದರ್ಭ ಸಮಿತಿ ಅಧ್ಯಕ್ಷ ಹಾಗೂ ನ್ಯಾಯವಾದಿ ಸುರೇಶ ಚಲವಾದಿ ಮಾತನಾಡಿ, ಹಿಂದಿನ ಆಡಳಿತ ಮಂಡಳಿ ಕಳೆದ 5 ವರ್ಷಗಳಿಂದ ಕಾಣದ ಕೈಗಳ ಕಪಿಮುಷ್ಟಿಗೆ ಸಿಲುಕಿತ್ತು. ಹೀಗಾಗಿ ನಾಗರಿಕ ಸಮಸ್ಯೆಗಳನ್ನು ಒಂದು ಬಾರಿಯೂ ಸಭೆಯಲ್ಲಿ ಚರ್ಚಿಸದಿರುವುದೇ ಅವರ 5 ವರ್ಷದ ಸಾಧನೆ, ಆಡಳಿತ ಮಂಡಳಿಯು ಕೇವಲ ಭರವಸೆಗಳ ಮೇಲೆಯೇ ಈವರೆಗೂ ಕಾರ್ಯನಿರ್ವಹಿಸಿದೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಸರ್ಕಾರ ನಾಳೆಯೇ ತಮ್ಮನ್ನೂ ವರ್ಗಾವಣೆ ಮಾಡಿದರೆ ಜಾಗ ಖಾಲಿ ಮಾಡುತ್ತೀರಿ. ಈ ಕುರಿತು ನಿಮ್ಮೊಂದಿಗೆ ಮಾತನಾಡುವ ಅಗತ್ಯವಿಲ್ಲ ಎಂದರು.
ಬಾರದ ಆಡಳಿತಾಧಿಕಾರಿ: ಪ್ರತಿಭಟನೆ 2ನೇ ದಿನಕ್ಕೆ ಕಾಲಿರಿಸಿದ್ದರೂ ಸಂಬಂಧಿಸಿದ ಆಡಳಿತಾಧಿಕಾರಿ (ಹಾವೇರಿ ಉಪ ವಿಭಾಗಾಧಿಕಾರಿ) ಮಾತ್ರ ಸ್ಥಳಕ್ಕೆ ಭೇಟಿ ನೀಡಲಿಲ್ಲ. ಪ್ರತಿಭಟನಾಕಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದ್ದ ಅಧಿಕಾರಿಗಳೇ ನಾಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಸಂಶಯ ಮೂಡಿಸಿದೆ.
ಸಂತೋಷ ಗುದಗಿ, ಮಂಜುನಾಥ ಪೂಜಾರ, ವಿಜಯಕುಮಾರ ಶಿಡ್ಲಣ್ಣನವರ, ಎಸ್. ವಸಂತಕುಮಾರ, ನೀಲ ಕಂಠಪ್ಪ ಮಾಳಗಿ, ಪಾಂಡುರಂಗ ಸುತಾರ, ಗುತ್ತೆಪ್ಪ ಪೂಜಾರ, ದಾದಾಪೀರ ಹರಿಹರ, ಮಲ್ಲೇಶ ತೆರೆದಹಳ್ಳಿ, ಸುರೇಶ ದಾವಣಗೇರಿ, ಮಲ್ಲೇಶ ಬಿರಾದಾರ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

