ಖೊಟ್ಟಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿ ಮಾರಾಟ!
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 24
ತಾಲೂಕಿನ ಗೆಜ್ಜಿಹಳ್ಳಿ ಗ್ರಾಮದಲ್ಲಿನ ಭೂ ಸುಧಾರಣಾ ಕಾನೂನಿನಡಿ ಸರ್ಕಾರಕ್ಕೆ ಸೇರಿದ್ದ ಆಸ್ತಿಯನ್ನು ಖೊಟ್ಟಿ ದಾಖಲೆ ಸೃಷ್ಟಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಕಾನೂನುಬಾಹಿರವಾಗಿ ಮಾರಾಟ ಮಾಡಲು ಸಹಕರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಆಸ್ತಿಯನ್ನು ಸರ್ಕಾರ ಹಿಂಪಡೆದು ನಿವೇಶನ ರಹಿತ ಬಡವರಿಗೆ ಹಂಚಿಕೆ ಮಾಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಪ್ರಕರಣ ತಡವಾಗಿ ಬೆಳಕಿಗೆ: ತಾಲೂಕಿನ ಗೆಜ್ಜಿಹಳ್ಳಿ ಗ್ರಾಮದ ಸರ್ಕಾರಿ ಜಮೀನು 6.13 ಎಕರೆ ಜಾಗೆ ಸರ್ಕಾರದ ಆಸ್ತಿಯಾಗಿದೆ. ಇದನ್ನು ಕಂದಾಯ ಇಲಾಖೆ ಅಧಿಕಾರಿಗಳು ಮೇಲಾಧಿಕಾರಿಗಳ ಆದೇಶದ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಖಾಸಗಿ ಆಸ್ತಿಯಾಗಿ ಮಾರ್ಪಡಿಸಿದ್ದಾರೆ.
ಈ ಆಸ್ತಿ ಈಗ ಮೂಲ ಮಾಲೀಕರಿಂದ ಬೇರೊಬ್ಬ ವ್ಯಕ್ತಿಗೆ ಮಾರಾಟವಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ವಾರಸುದಾರರು: ಗೆಜ್ಜಿಹಳ್ಳಿ ಗ್ರಾಮದ ರಿಸ ನಂ. 59ರ 12 ಎಕರೆ 13 ಗುಂಟೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ 1974ರಲ್ಲಿ ನಿಂಗಪ್ಪ ನೀಲಪ್ಪ ತಳವಾರ ಹಾಗೂ ಹನುಮಣ್ಣ ಬೆಳಗಾಲ ಅವರು ಸಾಗುವಳಿ ಮಾಡಿದ್ದರಿಂದ ಕಂದಾಯ ಇಲಾಖೆ ಈ ರೈತರಿಗೆ ಭೂನ್ಯಾಯ ಮಂಡಳಿ ತಲಾ ಮೂರು ಎಕರೆ ಮಂಜೂರು ಮಾಡಿತ್ತು. ಉಳಿದ 6 ಎಕರೆ 13 ಗುಂಟೆ ಜಮೀನು 2007ರ ವರೆಗೆ ದಾಖಲಾತಿಗಳಂತೆ ಇದೇ ರೈತರ ಹೆಸರಿನಲ್ಲಿ ಮುಂದುವರೆದಿತ್ತು.
ಮಾಲೀಕರ ವಶಕ್ಕೆ: ಒಡೆಯರ
ಆದರೆ, ನಿಂಗಪ್ಪ ನೀಲಪ್ಪ ತಳವಾರ ಹಾಗೂ ಹನುಮಣ್ಣ ಬೆಳಗಾಲ ಎಂಬ ರೈತರಿಗೆ ಕೊಟ್ಟ 6 ಎಕರೆ ಬಿಟ್ಟು ಉಳಿದ 6.13 ಎಕರೆ ಸರ್ಕಾರದ ಆಸ್ತಿಯಾಗಿ ಉಳಿಯಬೇಕಾಗಿತ್ತು. ನಂತರದ ಅವಧಿಯಲ್ಲಿಯೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಈ ಸರ್ಕಾರಿ ಆಸ್ತಿಯನ್ನು ಪರಭಾರೆ ಮಾಡಿದ್ದು.
ಸವಣೂರು ಉಪ ವಿಭಾಗಾಧಿಕಾರಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಈ ಆಸ್ತಿಯನ್ನು ಮೂಲ ಮಾಲೀಕರಿಗೆ ವರ್ಗಾಯಿಸಲಾಗಿದೆ ಎಂದು ತಕರಾರುದಾರರ ಪರ ನ್ಯಾಯವಾದಿ ರವಿ ಒಡೆಯರ ತಿಳಿಸಿದ್ದಾರೆ.
ಆಸ್ತಿ ಮೇಲೆ ಸಾಲ: ಈ ಜಮೀನನ್ನು ನಂತರ ಬೇರೊಬ್ಬ ಖಾಸಗಿ ವ್ಯಕ್ತಿಗೆ 2007ರಲ್ಲಿ ಮಾರಾಟ ಮಾಡಲಾಗಿದೆ. ಈಗ ಜಮೀನಿನಲ್ಲಿ ಮಾವಿನ ಮರಗಳು ಬೆಳೆದಿವೆ. ಇದನ್ನು ಖರೀದಿಸಿದ ವ್ಯಕ್ತಿಗಳು ತಮ್ಮ ಆಸ್ತಿಯಂತೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಆಸ್ತಿಯ ಮೇಲೆ ಬ್ಯಾಂಕಿನಲ್ಲಿ ಸಾಲ ಪಡೆದ ದಾಖಲೆಗಳಿವೆ.
ಗೌಪ್ಯತೆ: ಜುಲೈ 2012ರಲ್ಲಿ ಹೀರೂರು ಗ್ರಾಮದ ನಾಗನಗೌಡ ಪಾಟೀಲ ಎಂಬುವವರು ಈ ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಸವಣೂರು ಉಪ ವಿಭಾಗಾಧಿಕಾರಿಗಳ ಆದೇಶ ಪ್ರತಿಯನ್ನು ಪೂರೈಸುವಂತೆ ಅರ್ಜಿ ಸಲ್ಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ಅಲ್ಲಿಯವರೆಗೆ ಅಧಿಕಾರಿಗಳು ಈ ವಿವರಗಳ ಗೌಪ್ಯತೆ ಕಾಪಾಡಿಕೊಂಡಿದ್ದರು ಎನ್ನಲಾಗಿದೆ.
ಕಾನೂನು ಕ್ರಮ ಜರುಗಿಸಿ: ಈ ಆಸ್ತಿ ವರ್ಗಾವಣೆಗೆ ಸಂಬಂಧಿಸಿದಂತೆ ಸವಣೂರು ಉಪ ವಿಭಾಗಾಧಿಕಾರಿಗಳಿಂದ ಯಾವುದೇ ಆದೇಶ ಮಾಡಲಾಗಿಲ್ಲ ಎಂದು ಇಲಾಖೆ ಪತ್ರ ನೀಡಿದ್ದು, ಈ ಬಗ್ಗೆ ವಿಚಾರಿಸಲಾಗಿ ಇಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಸರ್ಕಾರದ ಆಸ್ತಿಯನ್ನು ಪರಭಾರೆ ಮಾಡಿದ ಪ್ರಕರಣ ನಡೆದಿದೆ.
ಕೂಡಲೇ ಕಂದಾಯ ಇಲಾಖೆ ಈ ಆಸ್ತಿಯನ್ನು ಸರ್ಕಾರದ ಆಸ್ತಿಯನ್ನಾಗಿ ಮಾಡಿ, ಈ ಗ್ರಾಮದ ನಿವೇಶನ ರಹಿತರಿಗೆ ವಿತರಿಸುವಂತೆ ಹಾಗೂ ಖೊಟ್ಟಿ ದಾಖಲೆ ಸೃಷ್ಟಿಸಿ ಆಸ್ತಿ ಪರಭಾರೆಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನ್ಯಾಯವಾದಿ ರವಿ ಒಡೆಯರ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

