ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬಿಸಿಯೂಟ ಪೂರಕ
ರಾಣಿಬೆನ್ನೂರು: ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಅತ್ಯಂತ ಪೂರಕವಾಗಿದೆ. ಇದನ್ನು ಜಾರಿಗೆ ತಂದು ಯಶಸ್ವಿಗೊಳಿಸಿದ ಸಹಾಯಕ ನಿರ್ದೇಶಕ ಎಂ.ಎಚ್. ಪಾಟೀಲರ ಸೇವೆ ಶ್ಲಾಘನೀಯ ಎಂದು ತಾಪಂ ಇಓ ಎಸ್. ಉಜನಪ್ಪ ನುಡಿದರು.
ತಾಲೂಕು ಪಂಚಾಯಿತಿ, ಬಿಇಓ ಕಾರ್ಯಾಲಯ, ತಾಲೂಕು ಅಕ್ಷರ ದಾಸೋಹ, ವಿವಿಧ ಸಂಘ ಸಂಸ್ಥೆ ಹಾಗೂ ಇಲಾಖೆಗಳ ಆಶ್ರಯದಲ್ಲಿ ತಾಲೂಕಿನ ಅಡುಗೆ ಸಿಬ್ಬಂದಿಗೆ ನಗರದ ಶಿಕ್ಷಕರ ಸಭಾಭವನದಲ್ಲಿ ಏರ್ಪಡಿಸಿದ್ದ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಮತ್ತು ಅನುದಾನಿತ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಎಂ.ಎಚ್. ಪಾಟೀಲ ಹಗಲಿರುಳು ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ರಾಜ್ಯದಲ್ಲೇ ಈ ಕಾರ್ಯಕ್ರಮವನ್ನು ಉತ್ತಮವಾಗಿ ಅನುಷ್ಠಾನಗೊಳಿಸಿದ ಕೀರ್ತಿಗೆ ರಾಣಿಬೆನ್ನೂರು ಪಾತ್ರವಾಗಲು ಪಾಟೀಲರ ಪರಿಶ್ರಮವೇ ಕಾರಣ ಎಂದರು.
ಎಂ.ಎಚ್. ಪಾಟೀಲ ಮಾತನಾಡಿ, 2003-04ರಲ್ಲಿ ಕೇವಲ 63 ಶಾಲೆಗಳಲ್ಲಿ ಆರಂಭಗೊಂಡ ಈ ಕಾರ್ಯಕ್ರಮ ಈಗ ತಾಲೂಕಿನ 253 ಶಾಲೆಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಯೋಜನೆಯಲ್ಲಿ ಒಟ್ಟು 694 ಅಡುಗೆ ಸಿಬ್ಬಂದಿ ಇದ್ದಾರೆ. ವಿವಿಧ ಇಲಾಖೆ ಹಾಗೂ ದಾನಿಗಳ ಸಹಕಾರದಿಂದ ಅವರಿಗೆ ಸಮವಸ್ತ್ರ, ರಕ್ಷಾ ಕವಚ (ಎಪ್ರಾನ್) ಪಾತ್ರೆ, ತಟ್ಟೆ, ಇತರೆ ಸಾಮಗ್ರಿ ಕೊಳ್ಳಲು ಸಾಧ್ಯವಾಗಿದೆ. ತಾಲೂಕಿನ ಪ್ರತಿ ಶಾಲೆಯಲ್ಲಿ ಅಡುಗೆ ಕೋಣೆಗಳನ್ನು ಕಟ್ಟಲು, ಜಿಪಂ ಹಾಗೂ ತಾಪಂ ರು. 10 ಲಕ್ಷ ಅನುದಾನ ನೀಡಿದೆ ಎಂದರು.
ತಾಲೂಕಿನ ಸರವಂದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೆಲಸದ ಅವಧಿಯಲ್ಲೇ ಹೃದಯಾಘಾತದಿಂದ ನಿಧನ ಹೊಂದಿದ ಅಡುಗೆ ಸಿಬ್ಬಂದಿ ಸಾವಿತ್ರಮ್ಮ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ಪೀರಜಾದೆ, ತಾಪಂ ವ್ಯವಸ್ಥಾಪಕ ಪಾಟೀಲ, ಶ್ರೀಕಾಂತ ಸಾಗರ, ಎ.ಬಿ. ಪಾಟೀಲ, ಶಾಮಸುಂದರ ಅಡಿಗ, ದೊಡ್ಮನಿ, ಚಲವಾದಿ, ಪೂಜಾರ, ಶಿರೋಳಕರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

