ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರಿಡಿ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 24
ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರನ್ನಿಡಬೇಕು. ಅದಕ್ಕಾಗಿ ನನ್ನ ಧ್ವನಿ ಇರುವ ತನಕ ಹೋರಾಟ ಮಾಡುವೆ ಎಂದು ನಾಡೋಜ ಡಾ ಪಾಟೀಲ ಪುಟ್ಟಪ್ಪ ನುಡಿದರು.
ನಗರದ ಮಣಿಬಾಯಿ ಲೋಡಾಯ ಸಭಾಂಗಣದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಪತ್ರಿ ಪ್ರತಿಷ್ಠಾನದ ಚೊಚ್ಚಲ ಪ್ರಶಸ್ತಿಯನ್ನು ಮಹಿಳಾ ವಿವಿ ಕುಲಪತಿ ಡಾ. ಮೀನಾ ಚಂದಾವರಕರ್ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
ಸಾರ್ವಜನಿಕ ಜೀವನದ ಆಗು-ಹೋಗುಗಳಿಗೆ ಪ್ರಜ್ಞಾವಂತರು ತಮ್ಮ ಅಭಿಪ್ರಾಯಗಳನ್ನು ಹೇಳಬೇಕು. ಕೆಟ್ಟದ್ದನ್ನು ವಿರೋಧಿಸುವುದು, ಒಳ್ಳೆಯದನ್ನು ಬೆಂಬಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು.
ಪ್ರತಿಷ್ಠಾನದ ಹೆಮ್ಮೆ ಕಾರ್ಯ
ಡಾ ಮೀನಾ ಚಂದಾವರಕರ್ ಮತ್ತು ಹಾವೇರಿ ನಡುವೆ ಅವಿನಾಭಾವ ಸಂಬಂಧವಿದೆ. ಚಂದಾವರಕರ್ ಅವರ ತಂದೆ 50ರ ದಶಕದಲ್ಲಿ ತಹಸೀಲ್ದಾರರಾಗಿ ಹಾವೇರಿಯಲ್ಲಿ ಸೇವೆ ಸಲ್ಲಿಸಿ ಮೊರಾರ್ಜಿ ದೇಸಾಯಿ ಅವರಿಂದ ಪ್ರಶಂಸೆಗೆ ಪಾತ್ರರಾದವರು. ಡಾ ಮೀನಾ ಸಹ ಇದೇ ಹಾದಿಯಲ್ಲಿದ್ದಾರೆ. ಇಂಥ ಮಹಿಳೆಯನ್ನು ಗುರುತಿಸಿದ ಪತ್ರಿ ಪ್ರತಿಷ್ಠಾನದ ಕಾರ್ಯ ಹೆಮ್ಮೆಪಡುವಂತದ್ದು ಎಂದರು.
ಸಮಾಜಕ್ಕೆ ಉತ್ತಮ ಸಂದೇಶ
ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಶ್ರೀಗಳು ಮಾತನಾಡಿ, ಸುಶಿಕ್ಷಿತ, ದಿಟ್ಟ ಹಾಗೂ ಕ್ರಿಯಾಶೀಲ ಮಹಿಳೆ ಕುಲಪತಿಯಂತಹ ಉನ್ನತ ಸ್ಥಾನದಲ್ಲಿರುವ ಸಮಾಜಕ್ಕೆ ಭೂಷಣ. ಚಂದಾವರಕರ್ ಅವರಿಗೆ ಪತ್ರಿ ಪ್ರತಿಷ್ಠಾನದ ಪ್ರಶಸ್ತಿ ನೀಡಿರುವುದು ಒಂದು ಉತ್ತಮ ಸಂದೇಶವನ್ನು ಸಮಾಜಕ್ಕೆ ಕೊಟ್ಟಂತಾಗಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಡಾ. ಮೀನಾ ಚಂದಾವರಕರ್ ಪ್ರಶಸ್ತಿಗೆ ನೀಡಿದ ನಗದು ಮೊತ್ತವನ್ನು ಪ್ರತಿಷ್ಠಾನದ ಮೂಲಕ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ ವ್ಯಕ್ತಿತ್ವ ವಿಕಸನಕ್ಕೆ ಬಳಸಿಕೊಳ್ಳುವಂತೆ ಸಲಹೆ ಮಾಡಿ ಮರಳಿಸಿ ಬಳಿಕ ಮಾತನಾಡಿ, ಒಳ್ಳೆಯ ಕೆಲಸ ಗುರುತಿಸುವುದು ಮತ್ತು ಗೌರವಿಸುವ ಪ್ರವೃತ್ತಿ ನಮ್ಮಂತವರಿಗೆ ಇನ್ನಷ್ಟು ಉತ್ತಮ ಕಾರ್ಯ ಮಾಡಲು ಪ್ರೇರೆಪಿಸುತ್ತವೆ. ಇಂದು ಬುದ್ದಿವಂತಿಕೆ ಮಾತ್ರ ಬೇಕಿಲ್ಲ ಸಂಗಡ ಹೃದಯವಂತಿಕೆ ಬೇಕಿದೆ ಎಂದರು.
ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ವಿರೂಪಾಕ್ಷಪ್ಪ ಪತ್ರಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಪಿ.ಡಿ. ಶಿರೂರು, ಜಿಲ್ಲಾ ಕಸಾಪ ಅಧ್ಯಕ್ಷ ಜಿ.ಬಿ. ಮಾಸಣಗಿ, ಮಹಿಳಾ ಕಾಲೇಜಿನ ಪ್ರಾಚಾರ್ಯೆ ಸವಿತಾ ಹಿರೇಮಠ, ಸಾಹಿತಿ ಸತೀಶ ಕುಲಕರ್ಣಿ, ಭೋಜರಾಜ ಪಾಟೀಲ, ಕಮಲಾ ಪತ್ರಿ, ಸುಗುಣಾ ಚಂದಾವರಕರ್, ಡಾ. ದೇವದರ, ಡಾ. ರಾಜಕುಮಾರ ಮರೋಳ, ಮಾಧುರಿ ದೇವದರ, ಪ್ರೊ. ಆರ್.ಕೆ. ಬೆಳ್ಳಿಗಟ್ಟಿ, ಪ್ರೊ. ವಿರೂಪಾಕ್ಷಪ್ಪ ಕೊರಗಲ್ಲ, ಚಂದ್ರಶೇಖರ ಮಾಳಗಿ, ಕೆ.ಎಸ್. ಪುರದ, ಪ್ರೊ. ವೈ.ಬಿ. ಆಲದಕಟ್ಟಿ, ವಿರೂಪಾಕ್ಷಪ್ಪ ಪಡಿಗೊದಿ, ಜಿ.ವಿ. ಪಾಟೀಲ, ಕರಿಯಪ್ಪ ಹಂಚಿಮನಿ, ಸಿ.ಎಂ. ಪಟ್ಟಣಶೆಟ್ಟಿ, ಸಂಕಮ್ಮ ಸಂಕಮ್ಮನವರ, ವಿಜಯಕುಮಾರ ಮುದುಕಣ್ಣನವರ ಇದ್ದರು. ಸುಮಂಗಲಾ, ಮಂಜುಳಾ ಮತ್ತು ಸುಷ್ಮಾ ಪ್ರಾರ್ಥಿಸಿದರು. ಡಾ ರಾಜಶೇಖರ ಸ್ವಾಗತಿಸಿದರು. ನಾಗರಾಜ ನಡುವಿನಮಠ ಮತ್ತು ಪುಷ್ಪಾ ಶೆಲವಾಡಿಮಠ ನಿರ್ವಹಿಸಿದರು. ವೃಷಭ ಪತ್ರಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

