ನಿರಾಕ್ಷೇಪಣಾ ಪತ್ರಕ್ಕೆ ಆಗ್ರಹಿಸಿ ಪುರಸಭೆಗೆ ಮುತ್ತಿಗೆ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ. 27
ಪಟ್ಟಣದ ಕೊಳೂರು ಕ್ಯಾಂಪ್‌ನಲ್ಲಿರುವ ಕೊಳಚೆ ಪ್ರದೇಶದ ನಿವಾಸಿಗಳು ವಿದ್ಯುತ್ ಸಂಪರ್ಕ ಪಡೆಯಲು ನಿರಾಕ್ಷೇಪಣಾ ಪತ್ರಕ್ಕೆ (ಎನ್‌ಓಸಿ) ಆಗ್ರಹಿಸಿ ಮುಖ್ಯಾಧಿಕಾರಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ 1 ತಾಸಿಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದರು.
ಗುಮ್ಮನಹಳ್ಳಿ ರಸ್ತೆಯಿಂದ ಮೆರವಣಿಗೆ ಮೂಲಕ ಸಾಗಿದ ಸುಮಾರು 50 ಕುಟುಂಬಗಳ ಸದಸ್ಯರು ಪುರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿದರು. ಈ ಸಂದರ್ಭ ಪುರಸಭೆ ವಿರುದ್ಧ ಘೋಷಣೆಗಳನ್ನು ಹಾಕುವ ಮೂಲಕ ಕಾರ್ಯವೈಖರಿ ಖಂಡಿಸಿದರು.
ದಾರಿ ತಪ್ಪಿಸುತ್ತಿರುವ ಪುರಸಭೆ: ಈ ಸಂದರ್ಭ ಪುರಸಭೆ ಮಾಜಿ ಸದಸ್ಯ ಬಾಬುಸಾಬ್ ಬಡಿಗೇರ ಮಾತನಾಡಿ, 35 ವರ್ಷಗಳಿಂದ ಕೊಳೂರು ಕ್ಯಾಂಪ್‌ನಲ್ಲಿ ವಾಸಿಸುತ್ತಿರುವ ಇಲ್ಲಿನ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಪುರಸಭೆ ಈವರೆಗೂ ಅನುಮತಿ ನೀಡಿಲ್ಲ. ಪ್ರತಿ ಬಾರಿ ಮನವಿ ಸಲ್ಲಿಸಿದಾಗ್ಯೂ ಇಲ್ಲಸಲ್ಲದ ನೆಪಗಳನ್ನು ಹೇಳುವ ಮೂಲಕ ನಿವಾಸಿಗಳ ದಾರಿ ತಪ್ಪಿಸುತ್ತಿದೆ ಎಂದರು.
ಶಿಕ್ಷಣ ವಂಚಿತ ಮಕ್ಕಳು: ವಿದ್ಯಾಬ್ಯಾಸದಲ್ಲಿ ತೊಡಗಿರುವ ಬಹುತೇಕ ಮಕ್ಕಳು ಬೀದಿ ದೀಪಗಳಲ್ಲಿಯೇ ಓದಬೇಕಾಗಿದ್ದು, ಬಡ ಕುಟುಂಬ ಹಿನ್ನೆಲೆಯುಳ್ಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ಪುರಸಭೆ ಅನುಮತಿ ಪಡೆಯುಲೇಬೇಕೆಂಬ ಸಬೂಬು ಹೇಳುತ್ತಿದ್ದಾರೆ. ಆದರೆ, ಪುರಸಭೆ ಅಧಿಕಾರಿಗಳು ಮಾತ್ರ ಅನುಮತಿ ನೀಡಲು ಹಿಂದೇಟು ಹಾಕುತ್ತಿದ್ದು, ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ವಿಷ ಜಂತು, ಸೊಳ್ಳೆ ಕಾಟ: ಮಹ್ಮದ್ ಅಲಿ ಜಿನ್ನಾ ಹಲಗೇರಿ ಮಾತನಾಡಿ, ಕೊಳಚೆ ಪ್ರದೇಶವಿರುವ ಕೊಳೂರು ಕ್ಯಾಂಪ್‌ನ ಮನೆಗಳು ಇಕ್ಕಟ್ಟಾಗಿದ್ದು, ವಿದ್ಯುತ್ ಸಂಪರ್ಕವಿಲ್ಲದ್ದರಿಂದ ಈ ಪ್ರದೇಶದಲ್ಲಿ ಸಾರ್ವಜನಿಕರು ಓಡಾಡುವುದು ಕಷ್ಟಸಾಧ್ಯ. ಅಲ್ಲದೇ ರಾತ್ರಿ ಸಮಯ ವಿಷಜಂತುಗಳ ಕಾಟದಿಂದ ಮನೆಗಳಲ್ಲಿ ನೆಮ್ಮದಿಯಾಗಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೇ ಸೊಳ್ಳೆಗಳ ಕಾಟಕ್ಕೆ ಸಹಜ ಜೀವನ ನಡೆಸಲು ಆಗುತ್ತಿಲ್ಲ. ಕೂಡಲೇ ಮುಖ್ಯಾಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು.
ಕಾಲಾವಕಾಶ ಕೊಡಿ: ಮಹಿಳೆಯರ ಆಕ್ರೋಶದ ಮಾತುಗಳನ್ನು ಕೇಳಿ ತಬ್ಬಿಬ್ಬಾದ ಮುಖ್ಯಾಧಿಕಾರಿ ಬಳಿಕ ಸಾವರಿಸಿಕೊಂಡು ಮಾತನಾಡಿ, ಕರ್ತವ್ಯಕ್ಕೆ ಹಾಜರಾಗಿ ಕೆಲವೇ ದಿನಗಳಾಗಿದ್ದು, ಅರ್ಜಿ ಪರಿಶೀಲಿಸಿ ಕ್ರಮ ಜರುಗಿಸುವೆ. ಕನಿಷ್ಠ ಒಂದು ವಾರ ಕಾಲಾವಕಾಶ ಬೇಕಾಗಲಿದೆ. ತಾವು ಸಹಕರಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮಹಿಳೆಯರು ಪ್ರತಿಭಟನೆಯಿಂದ ಹಿಂದೆ ಸರಿದರು.
ಪ್ರತಿಭಟನೆಯಲ್ಲಿ ಸನಾವುಲ್ಲಾ ದಾವಣಗೇರಿ, ಪರೀದಾಬಾನು ಶೇಖ್‌ಸನದಿ, ಶೈನಜಾ ಮಾಚಾಪುರ, ದಾವಲಬಿ ಕಾಟೇನಹಳ್ಳಿ, ಮೋಹನ ಕತ್ತಿ, ಶರೀಫ್ ಸಾಬ್ ಗದಗ, ವಿಜಯ ಕತ್ತಿ, ತಸೀನಾಬಾನು, ಹನುಮವ್ವ ವಡ್ಡರ, ಸುಶೀಲ ಗೆಜ್ಜಳ್ಳಿ, ಕವಿತಾ ಅಂಗಡಿ, ಚಮನ್‌ಬಿ ದೊಡ್ಮನಿ, ದಿಲ್‌ಶಾದ್ ಬಿಸಲಹಳ್ಳಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

