ಬೀಜ, ಗೊಬ್ಬರ ವಿತರಣೆ: ಗೊಂದಲ ಬೇಡ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮೇ 27
ಗೋಲಿಬಾರ್ ಪ್ರಕರಣದಿಂದ ಸರ್ಕಾರ ಎಚ್ಚೆತ್ತುಕೊಂಡಿದೆ. ತಾಲೂಕಿನಲ್ಲಿ ಬೀಜ ಹಾಗೂ ಗೊಬ್ಬರ ಸಮರ್ಪಕ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗಿದ್ದು, ತಪ್ಪು ಮಾಹಿತಿ ಪಡೆದು ಅನಗತ್ಯ ಗೊಂದಲ ಸೃಷ್ಟಿಸದಂತೆ ಶಾಸಕ ಬಸವರಾಜ ಶಿವಣ್ಣನವರ ರೈತರಲ್ಲಿ ಮನವಿ ಮಾಡಿದರು.
ಅವರು ಸೋಮವಾರ ಕೃಷಿ ಇಲಾಖೆ ವತಿಯಿಂದ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸಣ್ಣ ಹಾಗೂ ಅತಿಸಣ್ಣ ಹಿಡುವಳಿದಾರ ರೈತರಿಗೆ ಶೇ.50 ರಿಯಾಯಿತಿ ದರದಲ್ಲಿ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ನೀರಾವರಿ ಸೇರಿದಂತೆ ವಿವಿಧ ಯೋಜನೆಗಳನ್ನು ಸಾಕಾರಗೊಳಿಸುವ ಮೂಲಕ ಕೃಷಿ ವಲಯವನ್ನು ಆರ್ಥಿಕವಾಗಿ ಸದೃಢಗೊಳಿಸಬೇಕಾಗಿದೆ, ಈ ಹಿನ್ನೆಲೆಯಲ್ಲಿ ಕೃಷಿಯನ್ನು ಆದ್ಯತಾ ವಲಯವನ್ನಾಗಿಸಿ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ ರೈತರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲು ಮುಂದಾಗಿದೆ ಎಂದರು.
ತಾಲೂಕಿನ ಕೃಷಿ ಭೂಮಿಗಳಿಗೆ ಬೇಕಾಗುವಷ್ಟು ಪ್ರಮಾಣೀಕೃತ ಬಿತ್ತನೆ ಬೀಜಗಳನ್ನೇ ಸರ್ಕಾರ ಪೂರೈಕೆ ಮಾಡಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಮಾರಾಟಕ್ಕಿರುವ ಬೀಜಗಳು ಉತ್ತಮ ಗುಣಮಟ್ಟ ಹೊಂದಿದ್ದು ಅಧಿಕ ಇಳುವರಿ ನೀಡುವ ಭರವಸೆಯಿದೆ ಎಂದರು.
ಇಲಾಖೆ ಜತೆ ಸಹಕರಿಸಿ: ತಾತ್ಕಾಲಿಕ ಕೊರತೆ ಸೃಷ್ಟಿಸಿ ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಅವರು, ರೈತರು ಅನಗತ್ಯ ಗೊಂದಲ ಸೃಷ್ಟಿಸದೇ ಇಲಾಖೆಯ ಸಿಬ್ಬಂದಿ ಜತೆ ಸಹಕರಿಸಿ ಬೀಜ ಪಡೆಯುವಂತೆ ವಿನಂತಿಸಿದರು. ಸಹಾಯಕ ಕೃಷಿ ನಿರ್ದೇಶಕ ಟಿ.ಎಚ್.ನಟರಾಜ ಮಾತನಾಡಿ, ಕಾಗಿನೆಲೆ ಹಾಗೂ ಬ್ಯಾಡಗಿಯಲ್ಲಿರುವ ರೈತ ಸಂಪರ್ಕ ಕೇಂದ್ರ, ಮೋಟೆಬೆನ್ನೂರು ಹಾಗೂ ಚಿಕ್ಕಬಾಸೂರಿನಲ್ಲಿರುವ 2 ಉಪಕೇಂದ್ರಗಳ ಮೂಲಕ ತಾಲೂಕಿನ ಸುಮಾರು 17 ಸಾವಿರಕ್ಕೂ ಹೆಚ್ಚು ಸಣ್ಣ ಹಾಗೂ ಅತಿಸಣ್ಣ ಹಿಡುವಳಿದಾರ ರೈತರಿಗೆ ರಿಯಾಯಿತಿ ದರದಲ್ಲಿ ಬೀಜ ವಿತರಿಸುವ ಉದ್ದೇಶವನ್ನು ಹೊಂದಿದೆ ಎಂದರು. ತಾಲೂಕಿನಲ್ಲಿ ಭೂಚೇತನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ, ಪ್ರಸಕ್ತ ವರ್ಷವೂ ಸರ್ಕಾರ ಯೋಜನೆಯನ್ನು ಮುಂದುವರೆಸಿದೆ, ಭೂಚೇತನ ಕಾರ್ಯಕ್ರಮದಡಿಯಲ್ಲಿ ಜೋಳ, ಹತ್ತಿ ಹಾಗೂ ಮೆಕ್ಕೆಜೋಳ ಆಯ್ಕೆ ಮಾಡಿಕೊಳ್ಳಲಾಗಿದ್ದು, ಸಣ್ಣ ಹಾಗೂ ಅತಿಸಣ್ಣ ರೈತರು ಶೇ.50 ಸಹಾಯಧನದಲ್ಲಿ ಜಿಂಕ್ ಸಲ್ಫೇಟ್, ಜಿಪ್ಸಂ, ಬೋರಾನ್, ಟ್ರೈಕೊಡರ್ಮಾ, ಪಿಎಸ್ಬಿ ಹಾಗೂ ಸಸ್ಯ ಸಂರಕ್ಷಣಾ ಔಷಧಗಳನ್ನು ಪೂರೈಕೆ ಮಾಡಲಾಗುವುದು ಎಂದರು. ಬಿತ್ತನೆ ಬೀಜಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಹೈಬ್ರೀಡ್ಜೋಳ, ಮಕ್ಕೆಜೋಳ, ತೊಗರಿ, ಹೆಸರು, ಅಲಸಂದಿ, ನೆಲಗಡಲೆ, ಸೋಯಾಅವರೆ ಇನ್ನಿತರ ಬೀಜಗಳು ಲಭ್ಯವಿದ್ದು ಎಂದಿನಂತೆ ರೈತರು ರಸಗೊಬ್ಬರದ ಕಾರ್ಡ್ ಹಾಗೂ ಗುರುತಿನ ಚೀಟಿಗಳನ್ನು ಹಾಜರುಪಡಿಸಿ ಪಡೆಯುವಂತೆ ಮನವಿ ಮಾಡಿದರು.
ಜಿ.ಪಂ. ಅಧ್ಯಕ್ಷ ಶಂಕ್ರಣ್ಣ ಮಾತನವರ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಚಿನ್ನವ್ವ ಫಾಸಿ, ಉಪಾಧ್ಯಕ್ಷ ಚಂದ್ರಪ್ಪ ಮುಚ್ಚಟ್ಟಿ, ಮುರಿಗೆಪ್ಪ ಶೆಟ್ಟರ, ಎಸ್.ಆರ್. ಪಾಟೀಲ, ಎಸ್.ಸಿ. ಶಿಡೇನೂರ, ಗಂಗಣ್ಣ ಎಲಿ, ಚಿಕ್ಕಣ್ಣ, ಹುಸೇನಸಾಬ ದೊಡ್ಮನಿ, ರಮೇಶ ಸುತ್ತಕೋಟಿ ಅಶೋಕ, ದಾನಪ್ಪಗೌಡ ತೋಟದ, ಶಿವಪುತ್ರಪ್ಪ ಅಗಡಿ, ನಾಗರಾಜ ಆನವೇರಿ, ಗಣೇಶ ಬೆನಕನಕೊಂಡ ಉಪಸ್ಥಿತರಿದ್ದರು. ಎ.ಟಿ.ವಿ. ಸ್ವಾಮಿ ಸ್ವಾಗತಿಸಿದರು. ದಿಲೀಪ್ ಪ್ರಸೂತಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

