ಹಾವೇರಿ

ಅರಳದ ಕನ್ನಡ ಧ್ವಜ: ಪ್ರತಿಭಟನೆ

Published On :

ಬ್ಯಾಡಗಿ: ಕನ್ನಡ ಧ್ವಜಾರೋಹಣ ಮಾಡದ ತಾಲೂಕು ಆಡಳಿತದ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ.
ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 57ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವೇಳೆ ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗುತ್ತಾ ಕ್ರೀಡಾಂಗಣಕ್ಕೆ ನುಗ್ಗಿದ ಕನ್ನಡಪರ ಸಂಘಟನೆ ಕಾರ್ಯಕರ್ತರು ತಹಸೀಲ್ದಾರ್ ಹಾಗೂ ಪೊಲೀಸ್ ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು.
ಕರವೇ (ನಾರಾಯಣ ಗೌಡ ಬಣ) ಅಧ್ಯಕ್ಷ ಪರಮೇಶಪ್ಪ ಮಾತನಾಡಿ, ಕರ್ನಾಟಕ ರಾಜ್ಯೋತ್ಸವದಲ್ಲಿ ಕನ್ನಡ ಬಾವುಟ ಹಾರಿಸದಿದ್ದರೆ ಯಾವ ಪುರುಷಾರ್ಥಕ್ಕೆ ಕಾರ್ಯಕ್ರಮ ನಡೆಸುತ್ತೀರಿ? ಇದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ. ತಾಲೂಕಾಡಳಿತ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಕರವೇ (ಪ್ರವೀಣ ಶೆಟ್ಟಿ ಬಣ) ಅಧ್ಯಕ್ಷ ಮಂಜುನಾಥ ಭೋವಿ ಮಾತನಾಡಿ, ಕನ್ನಡ ಧ್ವಜಾರೋಹಣ ಇಲ್ಲದಿದ್ದರೆ ಯಾವ ರಾಜ್ಯದ ಬಾವುಟ ಹಾರಿಸುತ್ತೀರಿ? ಧ್ವಜಾರೋಹಣ ನಡೆಯುವ ತನಕ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಸುಪ್ರೀಂ ಕೋರ್ಟ್‌ನಲ್ಲಿ ದಾವೆ
ಏಕರೂಪದ ಧ್ವಜಾರೋಹಣಕ್ಕಾಗಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿರುವ ಕಾರಣ, ಆದೇಶ ಹೊರಬೀಳುವ ತನಕ ಪ್ರಾಂತೀಯ ಧ್ವಜಗಳನ್ನು ಹಾರಿಸುವಂತಿಲ್ಲ. ಧ್ವಜಾರೋಹಣ ಬಿಟ್ಟು, ಸರ್ಕಾರದ ನಿರ್ದೇಶನದಂತೆ ಉಳಿದ ಕಾರ್ಯಕ್ರಮಗಳು ನಡೆಯಲಿವೆ ಎಂದು ತಹಸೀಲ್ದಾರ್ ಶಿವಶಂಕರ ನಾಯಕ್ ಪ್ರತಿಭಟನಾಕಾರರಿಗೆ ಸಮಜಾಯಿಷಿ ನೀಡಿದರೂ ಪ್ರಯೋಜನ ಆಗಲಿಲ್ಲ.
ವಾಗ್ವಾದದ ಪರಿಣಾಮ ಕಾರ್ಯಕ್ರಮ ಗೊಂದಲದ ಗೂಡಾಗಿ, ರದ್ದಾಗುವ ಹಂತ ತಲುಪಿತ್ತು. ಈ ಹೊತ್ತಿಗೆ ವೇದಿಕೆಗೆ ಆಗಮಿಸಿದ ಶಾಸಕ ಬಸವರಾಜ ಶಿವಣ್ಣನವರ, ಧ್ವಜ ಹಾರಿಸಲು ಅಧಿಕಾರಿಗಳ ಅಥವಾ ತಮ್ಮ ವೈಯಕ್ತಿಕ ಹಿತಾಸಕ್ತಿ ಇಲ್ಲ. ಸುಪ್ರೀಂ ಕೋರ್ಟ್ ಆದೇಶ ಪಾಲಿಸುವ ಉದ್ದೇಶದಿಂದ ಧ್ವಜಾರೋಹಣ ನಡೆಯುತ್ತಿಲ್ಲ. ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಡಿ ಎಂದು ಮನವಿ ಮಾಡಿ, ವಿವಾದಕ್ಕೆ ತೆರೆ ಎಳೆದರು.
ಕೆ.ಸಿ. ಗಡಾದ, ಮಹೇಶ್ ಉಜನಿ, ಜಿತೇಂದ್ರ ಸುಣಗಾರ, ಮುರಿಗೆಪ್ಪ ಶೆಟ್ಟರ, ಶಂಕರ ಕುಸಗೂರ, ಕಸಾಪ ಅಧ್ಯಕ್ಷ ಮಾಲತೇಶ ಅರಳಿಮಟ್ಟಿ, ಸಿ.ಎಸ್. ಶೆಟ್ಟರ, ಆಟೋ ಚಾಲಕರು ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.