ಹಾನಗಲ್ಲ ರಸ್ತೆಗಳೆಲ್ಲ ಹೊಂಡಮಯ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ನ. 5
'ಹಾನಗಲ್ಲಿನಲ್ಲಿ ಹಾಯಬಾರದು' ಎಂಬ ಮಾತು ಬಹಳ ಹಳೆಯದು. ತಡಸ-ಗೊಂದಿ ರಸ್ತೆಯಲ್ಲಿ ಹಾನಗಲ್ಲ ಪಟ್ಟಣ ಹಾಗೂ ಹೊರವಲಯದಲ್ಲಿ ಸಂಚರಿಸಿದರೆ ಈ ಮಾತು ಅಕ್ಷರಶಃ ನಿಜ ಅನ್ನಿಸುತ್ತದೆ. ಹೊಂಡಮಯ ರಸ್ತೆಯಿಂದ ಪ್ರಯಾಣಿಕರಿಗೆ ವೇದನೆಯಾಗುತ್ತಿದ್ದರೂ ಇಲಾಖೆ ಮಾತ್ರ ದುರಸ್ತಿಗೆ ಇನ್ನೂ ಮುಂದಾಗಿಲ್ಲ.
ಹಾನಗಲ್ಲ ಪಟ್ಟಣದಲ್ಲಿ ಅಂದಾಜು 5 ಕಿ.ಮೀ. ಹಾದು ಹೋಗಿರುವ ತಡಸ-ಶಿವಮೊಗ್ಗ ರಸ್ತೆ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ. ಆದರೂ ಲೋಕೋಪಯೋಗಿ ಇಲಾಖೆ ಅಥವಾ ಕೆಸಿಪ್ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಈ ವರ್ಷ ಹಿಡಿದ ಜಡಿಮಳೆಗೆ ರಸ್ತೆಯಲ್ಲಿ ಗುಂಡಿಗಳು ಬಿದ್ದು ಪ್ರಯಾಣಿಕರು ಎದ್ದು ಬಿದ್ದು ಸಂಚರಿಸುವಂತಾಗಿದೆ. ವಾಹನಗಳಿಗೆಲ್ಲ ರಾಡಿ ಮೆತ್ತಿಕೊಳ್ಳುತ್ತಿದೆ. ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವಂತಾಗಿದೆ. ನೂರಾರು ಜನ ಇಲಾಖೆಗೆ ದೂರವಾಣಿ, ಮನವಿ ಮೂಲಕ ಬೇಡಿಕೆ ಸಲ್ಲಿಸಿದ್ದರೂ ರಸ್ತೆ ದುರಸ್ತಿ ಮಾಡಿಸಿಲ್ಲ.
ಲೋಕೋಪಯೋಗಿ ಇಲಾಖೆ ಹೇಳುವಂತೆ ಈ ರಸ್ತೆಯನ್ನು ಕೆಸಿಪ್ಗೆ ವರ್ಗಾಯಿಸಲಾಗಿದೆ. ತಮ್ಮ ಇಲಾಖೆಯಿಂದ ಯಾವುದೇ ಕಾಮಗಾರಿಗೆ ಅವಕಾಶವಿಲ್ಲ ಎನ್ನುತ್ತಾರೆ. ಕೆಸಿಪ್ಗೆ ಕೇಳಿದರೆ, ಗುತ್ತಿಗೆದಾರರ ಮೇಲೆ ಗೂಬೆ ಕೂರಿಸುತ್ತದೆ. ಕೊಟ್ಯಂತರ ವೆಚ್ಚದಲ್ಲಿ ಈ ರಸ್ತೆ ಕಾಮಗಾರಿ ಆಗ ಶುರುವಾಗುತ್ತದೆ, ಈಗ ಶುರುವಾಗುತ್ತದೆ ಎಂದು ಹೇಳುತ್ತಲೇ ವರ್ಷಗಳೇ ಗತಿಸಿವೆ. ಕಾಮಗಾರಿಯೂ ಇಲ್ಲ, ರಸ್ತೆ ದುರಸ್ತಿಯೂ ಇಲ್ಲ. ಯಾರಾದರೂ ಈ ರಸ್ತೆ ಬಗ್ಗೆ ಕೇಳಿದರೆ ಸರಿಯಾದ ಉತ್ತರವೂ ಇಲ್ಲ.
ತಾತ್ಕಾಲಿಕ ದುರಸ್ತಿಯೂ ಮಾಡ್ತಿಲ್ಲ: ತಡಸ-ಹಾನಗಲ್ಲ ಹಾಗೂ ಹಾನಗಲ್ಲ- ಹಾವೇರಿ ರಸ್ತೆಗಳಿಗೆ ಕೋಟಿ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂಬ ಆಶಯ ಪೂರ್ಣಗೊಳ್ಳುತ್ತಲೇ ಇಲ್ಲ. ಈ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಪ್ರಯಾಣಿಕರಿಗೆ ನರಕ ಯಾತನೆ ಉಂಟುಮಾಡುತ್ತಿದೆ. ಹಾನಗಲ್ಲಿನಿಂದ ಹುಬ್ಬಳ್ಳಿ ಕಡೆಗೆ ಕರಗುದರಿ ಕ್ರಾಸ್ ವರೆಗೆ 8 ಕಿ.ಮೀ. ರಸ್ತೆ ಸಂಚಾರಕ್ಕೆ ಅಸಾಧ್ಯವೆನ್ನುವ ಮಟ್ಟಿಗೆ ಕೆಟ್ಟು ಹೋಗಿದ್ದರೂ ಸಂಚಾರಕ್ಕೆ ಯೋಗ್ಯ ಮಾಡುವ ತಾತ್ಕಾಲಿಕ ಪ್ರಯತ್ನಕ್ಕೂ ಇಲಾಖೆ ಮುಂದಾಗದೇ ಇರುವುದು ಅಚ್ಚರಿ ಮೂಡಿಸಿದೆ.
ಹಾನಗಲ್ಲ ಪಟ್ಟಣದಲ್ಲಿ ಬಸ್ ಡಿಪೋ, ನ್ಯಾಯಾಲಯ, ಎನ್ಸಿಜೆಸಿ ಕಾಲೇಜು, ಬಸ್ ನಿಲ್ದಾಣ, ಎಸ್ಬಿಐ ಎಟಿಎಂ, ಕನಕದಾಸ ವೃತ್ತ, ಅಂಚೆ ಇಲಾಖೆ, ಕಲ್ಲಭಾವಿ, ಪುರಸಭೆ, ಗ್ರಾಮದೇವಿ ದೇವಸ್ಥಾನ, ರಂಜನಿ ಚಿತ್ರ ಮಂದಿರ, ಕೆಇಬಿ ಎದುರುಗಡೆ ಈ ರಸ್ತೆಯಲ್ಲಿ ಗುಂಡಿಗಳು ಬಿದ್ದು ಸಾಕಷ್ಟು ವಾಹನಗಳು, ಪ್ರಯಾಣಿಕರು ತೊಂದರೆ ಅನುಭವಿಸಿದ್ದಿದೆ. ಆದಾಗ್ಯೂ ಈ ರಸ್ತೆ ದುರಸ್ತಿಗೆ ಯಾರೂ ಗಮನ ಕೊಡುತ್ತಿಲ್ಲ.
ಕೂಡಲೇ ರಸ್ತೆ ದುರಸ್ತಿಗೊಳಿಸಿದ್ದರೆ ಸತ್ಯಾಗ್ರಹ ನಡೆಸುವುದಾಗಿ ಹಲವು ಸಂಘಟನೆಗಳು ಎಚ್ಚರಿಕೆ ನೀಡಿದರೂ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲ. ಈ ಬಗೆಯ ತಾತ್ಸಾರವೇಕೆ ಎಂಬುದೂ ಅರ್ಥವಾಗುತ್ತಿಲ್ಲ. ಹೊಸ ಸರ್ಕಾರ ಬಂದ ಮೇಲೆ ಸನ್ಮಾನ ಸ್ವೀಕರಿಸಲು ದೇಶಪಾಂಡೆ ಬಿಟ್ಟರೆ ಬೇರೆ ಯಾವ ಮಂತ್ರಿಗಳೂ ತಾಲೂಕಿಗೆ ಬಂದಿಲ್ಲ. ಲೋಕೋಪಯೋಗಿ ಸಚಿವರು ಬಂದಾಗಲೇ ದುರಸ್ತಿಯಾಗುವುದೋ ಏನೋ ಎಂದು ಜನತೆ ಆಡಿಕೊಳ್ಳುತ್ತಿದ್ದಾರೆ.
ಕೆಸಿಪ್ ಕಚೇರಿ ಖಾಲಿ!
ಪಟ್ಟಣದ ಗಂಗಾ ನಗರದ ಬಳಿ ಈ ರಸ್ತೆ ದುರಸ್ತಿ ಆರಂಭಿಸಿದಾಗ ಜನತೆ ನಿಟ್ಟುಸಿರು ಬಿಟ್ಟಿದ್ದರು. ಈಗಲಾದರೂ ರಿಪೇರಿ ಶುರುವಾಯಿತಲ್ಲ ಎಂದು ಸಮಾಧಾನಪಟ್ಟಿದ್ದರು. ಆದರೆ, ಒಂದು ದಿನ ಕೆಲಸ ಮಾಡಿದ ಮೇಲೆ ಮಾಯವಾದವರು ವಾರ ಕಳೆದರೂ ಕಾಣಿಸಿಕೊಂಡಿಲ್ಲ. ಇಲ್ಲಿನ ಎಪಿಎಂಸಿ ಕಟ್ಟಡದಲ್ಲಿ ಕೆಸಿಪ್ ಕಚೇರಿಯ ನಾಮಫಲಕ ಇದೆ. ಸಂಬಂಧಿಸಿದ ಯಾವ ಅಧಿಕಾರಿಯೂ ಇಲ್ಲಿಲ್ಲ. ವಿಚಾರಿಸಲೂ ಯಾರೊಬ್ಬರೂ ಕಾಣಿಸುವುದಿಲ್ಲ. ಮುಂದೊಂದು ದಿನ ರಸ್ತೆಯೇ ಕಾಣಿಸದಂತೆ ಆದರೂ ಅಚ್ಚರಿಯಿಲ್ಲ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

