ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕೈ ಗೆಲವು: ಈಶ್ವರ್
ಹಾನಗಲ್ಲ: ಮುಂಬರುವ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ 1 ಲಕ್ಷ ಪದವೀಧರ ಮತದಾರರು ಮತದಾನ ಮಾಡುವ ಸಾಧ್ಯತೆ ಇದ್ದು, ಈ ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲವು ಖಚಿತ. ನಾನೂ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಎಂದು ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ರಾಜ್ಯಾಧ್ಯಕ್ಷ ಟಿ. ಈಶ್ವರ ಹೇಳಿದರು.
ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಶ್ಚಿಮ ಪದವೀಧರರ ಕ್ಷೇತ್ರದಿಂದ ಹಾಲಿ ಸಚಿವ ಎಚ್.ಕೆ. ಪಾಟೀಲ ಅವರು ಈ ಹಿಂದೆ 25 ವರ್ಷಗಳ ಕಾಲ ಕ್ಷೇತ್ರವನ್ನು ಪ್ರತಿನಿಧಿಸಿ ಪದವೀಧರರ ಹಿತ ಕಾಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಂತರ ಬಂದ ಬಿಜೆಪಿ ಅಭ್ಯರ್ಥಿ ಪದವೀಧರ ಮತದಾರರ ವಿಶ್ವಾಸ ಕಳೆದುಕೊಂಡರು. ಹೀಗಾಗಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯನ್ನೇ ಈ ಕ್ಷೇತ್ರದ ಪದವೀಧರರು ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ಮೂಡಿದೆ ಎಂದರು.
ಈಗಾಗಲೆ 72 ಸಾವಿರ ಪದವೀಧರರು ಹಿಂದಿನ ಚುನಾವಣೆಯಲ್ಲಿ ಮತದಾರರಾಗಿದ್ದಾರೆ. ಈ ಬಾರಿ ಮತ್ತಷ್ಟು ಜಾಗೃತಿ ಮೂಡಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ಚುನಾವಣೆಗೆ ಹೆಸರು ನೋಂದಾಯಿಸುತ್ತಿದ್ದಾರೆ ಎಂದರು.
ಈಗ ನರೇಂದ್ರ ಮೋದಿ ಹೆಸರಿನಲ್ಲಿ ಚುನಾವಣೆ ಮಾಡಲು ಹೊರಟಿರುವ ಬಿಜೆಪಿಗೆ ಯಾವುದೇ ಲಾಭವಾಗದು. ಎಚ್.ಕೆ. ಪಾಟೀಲರನ್ನು ಸೋಲಿಸಿ ಬಿಜೆಪಿಯ ಮೋಹನ ಲಿಂಬಿಕಾಯಿ ಅವರನ್ನು ಆಯ್ಕೆ ಮಾಡಿದ್ದ ಪದವೀಧರ ಮತದಾರರು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಮೋದಿ ಹೆಸರಿನ ಕಟೌಟ್, ಬ್ಯಾನರ್ ಹಾಗೂ ಘೋಷಣೆಗಳು ಈ ಚುನಾವಣೆಯಲ್ಲಿ ಏನೂ ಕೆಲಸ ಮಾಡುವುದಿಲ್ಲ. ಜಾಗೃತ ಪದವೀಧರ ಮತದಾರ ಈ ಬಾರಿ ತುಂಬ ಜಾಗರೂಕವಾಗಿಯೇ ಮತದಾನ ಮಾಡುತ್ತಾರೆ. ನ. 15ರ ವರೆಗೆ ಎರಡನೇ ಹಂತದ ಹೆಸರು ನೋಂದಣಿಗೆ ಅವಕಾಶವಿದ್ದು, ಎಲ್ಲ ಅರ್ಹ ಪದವೀಧರರು ಹೆಸರು ನೋಂದಾಯಿಸುವಂತೆ ಮನವಿ ಮಾಡಿದರು.
ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗುವ ಇಚ್ಛೆ ಇದೆ. ನಾನೂ ಪ್ರಬಲ ಆಕಾಂಕ್ಷಿ. ಆದರೂ ಈ ಕ್ಷೇತ್ರದಲ್ಲಿ ಐದಾರು ಜನರ ಹೆಸರುಗಳು ಕೇಳಿ ಬರುತ್ತಿವೆ. ಪಕ್ಷ ಯಾರಿಗೇ ಅವಕಾಶ ನೀಡಿದರೂ ಅವರನ್ನು ಗೆಲ್ಲಿಸಲು ನಾನು ಮುಂದಾಗುತ್ತೇನೆ ಎಂದು ಟಿ. ಈಶ್ವರ ತಿಳಿಸಿದರು.
ಹಾನಗಲ್ಲ ಶಾಸಕ ಮನೋಹರ ತಹಸೀಲ್ದಾರ್ ಮಾತನಾಡಿ, ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗಾಗಿ ಮತ ಚಲಾಯಿಸಲು ಈ ಭಾಗದ ಪದವೀಧರರು ಕಾತರರಾಗಿದ್ದಾರೆ. ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದಿಂದ ಸಿದ್ಧತೆಯೂ ಆರಂಭವಾಗಿದೆ. ಯಾವುದೇ ನಿರಾಸಕ್ತಿಗೆ ಅವಕಾಶವಿಲ್ಲದಂತೆ ಎಲ್ಲ ಪದವೀಧರರು ತಮ್ಮ ಹೆಸರು ನೋಂದಾಯಿಸುವಂತೆ ಮನವಿ ಮಾಡಿದರು.
ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಬಡಿಗೇರ, ಮಲ್ಲನಗೌಡ ಪಾಟೀಲ, ಕೆ.ಎಸ್. ದೇಶಪಾಂಡೆ, ಪಿ.ಕೆ. ಪಾರಗಾಂವಕರ, ನಾಗಪ್ಪ ಸವದತ್ತಿ, ರಂಗನಗೌಡ ಪಾಟೀಲ, ಜಿ.ವಿ. ಕಂಬಾಳಿಮಠ, ದಾನಪ್ಪ ಗಂಟೇರ, ಬಸವರಾಜ ಬೆಟಗೇರಿ, ಘನಶ್ಯಾಮ್ ದೇಶಪಾಂಡೆ, ವಿರೇಶ ಬೈಲವಾಳ, ಎನ್.ಎಸ್. ಪಡೆಪ್ಪನವರ, ಜಿ.ಎಂ. ಮುಲ್ಲಾ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

