ಹಾವೇರಿ

ಲಕ್ಷ ಪರಿಹಾರ, ವೋಲ್ವೊ ತನಿಖೆ

Published On :

ಹಾವೇರಿ/ ಹುಬ್ಬಳ್ಳಿ: ಬಸ್ ದುರಂತದಲ್ಲಿ ಮೃತಪಟ್ಟ 7 ಜನರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ ರು. 1 ಲಕ್ಷ, ನ್ಯಾಶನಲ್ ಟ್ರಾವೆಲ್ಸ್ ಮಾಲೀಕ, ಶಾಸಕ ಜಮೀರ್ ಅಹ್ಮದ್ ತಲಾ ರು. 5 ಲಕ್ಷ ಪರಿಹಾರ ನೀಡಲಿದೆ ಎಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವೋಲ್ವೋ ಬಸ್ಸಿನಲ್ಲಿ ತಾಂತ್ರಿಕ ಸಮಸ್ಯೆ ಇರುವ ಕುರಿತು ತನಿಖೆಗೆ ಸೂಚಿಸಿದೆ ಎಂದರು.
ಹಾವೇರಿ ಸಮೀಪದ ಕುಣಿಮೆಳ್ಳಳ್ಳಿ ಬಳಿ ಗುರುವಾರ ನ್ಯಾಶನಲ್ ಟ್ರಾವೆಲ್ಸ್‌ನ ವೋಲ್ವೋ ಬಸ್ ದುರಂತಕ್ಕೀಡಾದ ಸ್ಥಳ, ಕಿಮ್ಸ್‌ನಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ 7 ಜನ ಮೃತಪಟ್ಟಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಶಾಸಕ ಜಮೀರ್ ಅಹ್ಮದ್ ಕೂಡ ತಮ್ಮ ಕೈಲಾದ ನೆರವು ನೀಡುವ ಭರವಸೆ ನೀಡಿದ್ದಾರೆ. ಚಿಕಿತ್ಸೆ ಪಡೆದು ಚೇತರಿಸಿಕೊಂಡ ಪ್ರಯಾಣಿಕರಿಗೆ ಸರ್ಕಾರ ಮುಂಬಯಿ, ಬೆಂಗಳೂರಿಗೆ ವಾಹನ ವ್ಯವಸ್ಥೆ ಕಲ್ಪಿಸಿದೆ ಎಂದರು.
ವೋಲ್ವೋ ಬಸ್‌ನಲ್ಲೇ ಇಂಥ ದುರಂತ ಆಗುತ್ತಿವೆ. ಆಂಧ್ರದಲ್ಲಿ ನಡೆದ ದುರಂತದ ಬಳಿಕ ನಾವೂ ಎಚ್ಚೆತ್ತುಕೊಂಡಿದ್ದೇವೆ. ವೋಲ್ವೋದಲ್ಲಿ ತಾಂತ್ರಿಕ ಸಮಸ್ಯೆ ಇದೆಯೇ ಎಂಬುದನ್ನು ತಜ್ಞರಿಂದ ಪರಿಶೀಲಿಸುವಂತೆ ದೆಹಲಿಯ ಸಂಸ್ಥೆಗೆ ಸೂಚಿಸಲಾಗಿದೆ. ಒಂದು ವೇಳೆ ತಾಂತ್ರಿಕ ತೊಂದರೆ ಇದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 15 ದಿನಗಳಲ್ಲಿ ಸಾರಿಗೆ ಸಂಸ್ಥೆಗೆ ಸೇರಿದ 4 ಸಾವಿರ ಬಸ್ಸುಗಳನ್ನು ಪರೀಕ್ಷಿಸಲಾಗಿದೆ. ನ್ಯೂನತೆ ಕಂಡುಬಂದ 119 ವಾಹನಗಳ ಸೇವೆ ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ. ದುರಂತಕ್ಕೆ ಟ್ರಾವೆಲ್ಸ್ ಕಾರಣವಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಆದರೆ, ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವೋಲ್ವೋ ಬಸ್‌ಗಳಲ್ಲಿ ತಾಂತ್ರಿಕ ದೋಷವಿಲ್ಲ. ಇಂತಹ ದುರಂತ ಸಂಭವಿಸುವುದು ಅಪರೂಪ, ಆದರೆ ಹದಿನೈದು ದಿನಗಳ ಅಂತರದಲ್ಲಿ ಎರಡು ಬಸ್ ಅಗ್ನಿ ಆಕಸ್ಮಿಕ ಸಂಭವಿಸಿರುವುದು ಕಾಕತಾಳಿಯ.
ಹಾವೇರಿ ಬಳಿ ದುರಂತಕ್ಕೀಡಾದ ಬಸ್‌ನ್ನು ಶಾಸಕ ಜಮೀರ್ ಅವರು ಕೆಲವು ದಿನಗಳ ಹಿಂದೆಯಷ್ಟೇ ಖರೀದಿಸಿದ್ದರು. ಹೀಗಾಗಿ ಬಸ್‌ನ ತಾಂತ್ರಿಕ ದೋಷದಿಂದಾಗಿ ಅಪಘಾತ ಸಂಭವಿಸಿದೆ ಎಂದು ಹೇಳಲಿಕ್ಕಾಗುವುದಿಲ್ಲ. ಸೇತುವೆ ತಡೆಗೋಡೆಗೆ ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ ಅಪಘಾತ ಸಂಭವಿಸಿದೆಯೋ ಅಥವಾ ಟೈರ್ ಸ್ಫೋಟಗೊಂಡ ಪರಿಣಾಮ ಅವಘಡ ಸಂಭವಿಸಿದೆ ಎನ್ನುವುದನ್ನು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಬಸ್‌ಗಳ ಅವಘಡ ತಡೆಯುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಈಗಾಗಲೇ 4603 ಖಾಸಗಿ ಬಸ್‌ಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಸಾರಿಗೆ ನಿಯಮ ಉಲ್ಲಂಘಿಸಿರುವ 1996 ಬಸ್‌ಗಳ ಮಾಲೀಕರ ವಿರುದ್ಧ ದೂರು ದಾಖಲಿಸಲಾಗಿದೆ. 119 ಬಸ್‌ಗಳನ್ನು ಸಾರಿಗೆ ಇಲಾಖೆ ಅಮಾನತ್ತುಗೊಳಿಸಿದೆ. ಪ್ರಯಾಣಿಕರ ಸುರಕ್ಷತೆಗಾಗಿ ವೋಲ್ವೋ ಸೇರಿದಂತೆ ಎಲ್ಲ ಬಸ್‌ಗಳಲ್ಲೂ ಎರಡು ಬಾಗಿಲು ಅಳವಡಿಸುವಂತೆ ಸೂಚಿಸಲಾಗಿದ್ದು, ಈ ಸೂಚನೆ ಜಾರಿಗೆ ಬರುವ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅಪಘಾತದ ಸಂದರ್ಭದಲ್ಲಿ ಮೃತ ವ್ಯಕ್ತಿಗಳ ಗುರುತು ಸಿಗುವ ನಿಟ್ಟಿನಲ್ಲಿ ಪ್ರಯಾಣಿಕರ ಸ್ಪಷ್ಟ ವಿಳಾಸ ಪಡೆಯುವುದಕ್ಕೆ ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಬೆಂಗಳೂರಿನ 12 ವರ್ಷದ ಬಾಲಕನೊಬ್ಬ ಸಾಹಸ ಮೆರೆದ ಬಗ್ಗೆಯೂ ಮಾಹಿತಿ ಪಡೆದಿದ್ದೇನೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಪ್ರಸ್ತಾವನೆ ಪಡೆದು ಶೌರ್ಯ ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ, ಶಾಸಕ ಬಸವರಾಜ ಶಿವಣ್ಣನವರ, ಎಂಎಲ್‌ಸಿ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಎಸ್ಪಿ ಎನ್. ಶಶಿಕುಮಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.